Followers

Friday, August 23, 2019

ಬಸವಣ್ಣ

ಇಂಗಳೇಶ್ವರ (ಈಗಿನ ಬಿಜಾಪುರ ಜಿಲ್ಲೆಯಲ್ಲಿರುವ) ಬಾಗೇವಾಡಿಯಲ್ಲಿ ಶೈವ ಬ್ರಾಹ್ಮಣ ದಂಪತಿಗಳಾದ ಮಾದರಸ-ಮಾದಲಾಂಬಿಕೆಯರ ಮಗನಾಗಿ ಆನಂದನಾಮ ಸಂವತ್ಸರದಲ್ಲಿ ವೈಶಾಖಮಾಸದ ಅಕ್ಷಯ ತೃತೀಯದಂದು (ದಿ. ಎಪ್ರಿಲ್ ೩೦, ೧೧೩೪) ರೋಹಿಣಿ ನಕ್ಷತ್ರದಲ್ಲಿ ಜನಿಸಿ ಯಾವುದೇ ಅಂಧಶ್ರದ್ಧೆ ಜಡ ಸಂಪ್ರದಾಯಗಳನ್ನೊಪ್ಪದ ಸತ್ಯಾನ್ವೇಷಕರಾಗಿ ಹೆತ್ತವರನ್ನು, ಬಂಧು ಬಾಂಧವರನ್ನು ತೊರೆದು ವಿದ್ಯಾಕಾಂಕ್ಷಿಯಾಗಿ ಕೂಡಲ ಸಂಗಮದ ಗುರುಕುಲಕ್ಕೆ ಬಂದರು. ಶಾಸ್ತ್ರಾಧ್ಯಯನ, ಯೋಗಾಭ್ಯಾಸಗಳಲ್ಲಿ ಬಾಲ್ಯವನ್ನು ಕಳೆದು ತಾರುಣ್ಯಕ್ಕೆ ಕಾಲಿರಿಸಿದರು. ಜನರಲ್ಲಿ ಮನೆ ಮಾಡಿಕೊಂಡಿದ್ದ ಮೌಢ್ಯತೆ, ಕಂದಾಚಾರ, ಜಾತೀಯತೆಗಳನ್ನು ಕಂಡು ಮನನೊಂದು ಪರಿಹಾರವನ್ನು ಅರಸತೊಡಗಿದರು.
ಬಸವಣ್ಣನವರು ತಮ್ಮ ಚಿಕ್ಕ ವಯಸ್ಸಿನಿಂದಲೇ ವೈದಿಕ ಸಂಸ್ಕೃತಿಯ ವಿರೋಧಿಯಾಗಿದ್ದರು. ಬ್ರಾಹ್ಮಣ ಸಂಪ್ರದಾಯದಂತೆ ಅವರಿಗೆ 18ನೇ ವಯಸ್ಸಿನಲ್ಲಿ ಜನಿವಾರವನ್ನು ಹಾಕಲು ಬಂದಾಗ, ತನಗಿಂತ ಹಿರಿಯಳಾಗಿರುವ ತನ್ನಕ್ಕನಿಗೆ ಜನಿವಾರ ಹಾಕುವಂತೆ ಹಠ ಹಿಡಿದರು ಬಸವಣ್ಣ.

ಬ್ರಾಹ್ಮಣ ಸಮುದಾಯದಲ್ಲಿ ಇದು ಪುರುಷರಿಗೆ ಮಾತ್ರ ಹಾಕಲಾಗುತ್ತದೆ, ಮಹಿಳೆಯರಿಗೆ ಇದನ್ನು ಹಾಕುವುದಿಲ್ಲವೆಂದಾಗ ಸ್ತಿ - ಪುರುಷರ ಬಗೆಗೆ ನಡೆಯುತ್ತಿರುವ ಅಸಮಾನತೆಯನ್ನು ಪ್ರಶ್ನಿಸಿ ಮನೆ ಬಿಟ್ಟು ಹೊರನಡೆದರು. ಮನೆ ತೊರೆದ ಆ ಜಗಜ್ಯೋತಿ ಬಸವಣ್ಣ ಸತ್ಯಾನ್ವೇಷಣೆಗಾಗಿ ಮಹಾಕ್ಷೇತ್ರ ಕೂಡಲ ಸಂಗಮಕ್ಕೆ ಬಂದುನೆಲೆಸಿದರು. ಒಂದು ದಿನ (ದಿ. ೧೪ನೇ ಜನವರಿ ೧೧೫೫) ಪರಮಾತ್ಮನ ದಿವ್ಯ ದರ್ಶನವಾಯಿತು; ಅನುಗ್ರಹಿತರಾದರು. ಬ್ರಹ್ಮ-ವಿಷ್ಣು-ಮಹೇಶ್ವರರೆಂಬ ತ್ರಿಮೂರ್ತಿಗಳನ್ನು ಮೀರಿದ ಸೃಷ್ಟಿಕರ್ತನೇ ಶ್ರೇಷ್ಠವೆಂದು ಘೋಷಿಸಿ ದೇವನನ್ನು ಲಿಂಗದೇವ ಎಂದು ಕರೆದರು. ನಿರಾಕಾರ ದೇವನಿಗೆ ಮನುಷ್ಯರ, ಪ್ರಾಣಿಗಳ ಅಕಾರ ಕೊಡುವುದು ಸರಿಯಲ್ಲ ಎಂಬ ಭಾವ ತಳೆದು, ದೇವನ ಸಾಕಾರ ಕೃತಿಯೇ ಬ್ರಹ್ಮಾಂಡ, ಇದು ಗೋಲಾಕಾರದಲ್ಲಿದೆ. ಆದ್ದರಿಂದ ಲಿಂಗದೇವನನ್ನು ವಿಶ್ವದಾಕಾರದಲ್ಲಿ ಪೂಜಿಸುವುದು ಸರಿ ಎಂದು ಇಷ್ಟಲಿಂಗದ ಪರಿಕಲ್ಪನೆ ಕೊಟ್ಟರು. ದೇವರ ಕುರುಹಾದ ಇಷ್ಟಲಿಂಗವು ಮಾನವನ ಜಾತಿ, ವರ್ಣ, ವರ್ಗ ಭೇದಗಳನ್ನು ಕಳೆದು ಶರಣನನ್ನಾಗಿ ಮಾಡುವ ಸಾಧನವಾಗಬೇಕೆಂದು ಅದನ್ನು ಗಣ ಲಾಂಛನವನ್ನಾಗಿ ಮಾಡಿದರು. ಸೋದರ ಮಾವನ ಮಗಳು ನೀಲಗಂಗಳನ್ನು ವಿವಾಹವಾಗಿ ಕರಣಿಕ ಕಾಯಕ ಕೈಗೊಂಡರು. ಅಲ್ಲಿಂದ ಮುಂದೆ ಭಂಡಾರಿಯಾಗಿ, ಪ್ರಧಾನಿ(ದಂಡನಾಯಕ)ಯಾಗಿ ಕಾಯಕ ನಿರ್ವಹಿಸಿದರು.

ಕೂಡಲಸಂಗಮದಲ್ಲಿ ಸತತ 12 ವರ್ಷಗಳ ಕಾಲ ತಮ್ಮ ವಿದ್ಯಾಭ್ಯಾಸವನ್ನು ಮುಗಿಸುವ ಬಸವಣ್ಣ, ಜಾತಿ, ಮತ, ಲಿಂಗ ಭೇದಗಳನ್ನು ತಿರಸ್ಕರಿಸಿ ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದರು. ಸಮಾನತೆ, ಕಾಯಕ, ದಾಸೋಹ ತತ್ವಗಳನ್ನು ಸ್ವೀಕರಿಸುವವರು ಮತ್ತು ಆಚರಿಸುವವರು ಶಿವಶರಣರಾಗಬಹುದು ಎಂಬುದನ್ನು ಇಡೀ ಜಗತ್ತಿಗೆ ಸಾರಿ ಹೇಳಿದರು. ಜಾತಿ ಅಸಮಾನತೆಯನ್ನು ಸೃಷ್ಠಿಸಿದ್ದ ಪುರೋಹಿತಶಾಹಿ ವರ್ಗವನ್ನು ವಿರೋಧಿಸಿದರು. ಸಮಾಜದ ಅಂಕು-ಡೊಂಕುಗಳನ್ನು ತಿದ್ದಲು ವಚನ ಸಾಹಿತ್ಯ ಆರಂಭಿಸಿದರು. ತಮ್ಮ ವಚನಗಳ ಮೂಲಕ ಸಾಮಾಜಿಕ ಓರೆ-ಕೋರೆಗಳನ್ನು ತಿದ್ದುವ ಪ್ರಯತ್ನ ಮಾಡಿದರು.

ಹುಟ್ಟಿನಿಂದ ಬ್ರಾಹ್ಮಣರಾಗಿ, ಸಂಸ್ಕಾರದಿಂದ ಶರಣರಾದ ಮಧುವರಸರ ಮಗಳನ್ನು ಹುಟ್ಟಿನಿಂದ ಸಮಗಾರರಾಗಿ ಸಂಸ್ಕಾರದಿಂದ ಶರಣರಾದ ಹರಳಯ್ಯನವರ ಮಗನಿಗೆ ಕೊಟ್ಟು ವಿವಾಹ ಮಾಡಲು ಪ್ರೇರಣೆ ನೀಡಿದರು. ವಿವಾಹದಿಂದ ಸಂಪ್ರದಾಯವಾದಿಗಳು ಸಿಡಿದೆದ್ದು ಬಿಜ್ಜಳ ಮಹಾರಾಜನನ್ನು ಪ್ರೇರೇಪಿಸಿ ಬಸವಣ್ಣನವರಿಗೆ ಗಡಿಪಾರು ಶಿಕ್ಷೆ ನೀಡುವಂತೆ ಮಾಡಿದರು.

ಬಸವಣ್ಣ ಗಡಿಪಾರು ಶಿಕ್ಷೆ ಸ್ವೀಕರಿಸಿ ಕಲ್ಯಾಣದಿಂದ ಹೊರಟ ನಂತರ ಹರಳಯ್ಯ, ಮಧುವರಸ, ನವ ವಧುವರಾರಾದ ಶೀಲವಂತ-ಲಾವಣ್ಯರ ಬಂಧನವಾಗಿ ಅವರು ವರ್ಣಾಂತರ ವಿವಾಹದಲ್ಲಿ ಭಾಗಿಯಾದುದಕ್ಕಾಗಿ ಕಣ್ಣು ಕೀಳಿಸುವ ಶಿಕ್ಷೆ; ಆನೆಯ ಕಾಲಿಗೆ ಕಟ್ಟಿಸಿ, ಊರ ತುಂಬಾ ನೆಲದ ಮೇಲೆ ಎಳೆಸಿ ಕೊಲ್ಲುವ ಕ್ರೂರವಾದ ಎಳೆಹೂಟೆ ಶಿಕ್ಷೆಗೆ ಒಳಗಾಗಿ ಪ್ರಾಣ ಬಿಡಬೇಕಾಯಿತು. ಜಾತಿವಾದಿಗಳು ವಚನ ಸಾಹಿತ್ಯವನ್ನು ನಾಶಮಾಡಲು ಸನ್ನದ್ಧರಾದಾಗ ವೀರಮಾತೆ ಅಕ್ಕನಾಗಲಾಂಬಿಕೆ, ಚಿನ್ಮಯಜ್ಞಾನಿ ಚೆನ್ನಬಸವಣ್ಣ, ವೀರ ಗಣಾಚಾರಿ ಮಡಿವಾಳ ಮಾಚಯ್ಯನವರು ವೀರಾಗ್ರಣಿಗಳಾಗಿ ಕಾದಾಡಿ ವಚನ ವಾಙ್ಮಯ ನಿಧಿಯನ್ನು ಉಳಿಸಿಕೊಟ್ಟರು. ಅದಿಂದು ನಮ್ಮೆಲ್ಲರ, ಕರ್ನಾಟಕದ, ಭಾರತದ, ವಿಶ್ವದ ಹೆಮ್ಮೆಯ ಆಸ್ತಿಯಾಗಿದೆ.

ಬಸವಣ್ಣನವರ ಪ್ರಭಾವಕ್ಕೆ ಒಳಗಾದ ಹರಿಜನ ಮತ್ತು ಬ್ರಾಹ್ಮಣ ಕುಟುಂಬಗಳ ನಡುವೆ ವಿವಾಹ ಕಲ್ಯಾಣದ ಕ್ರಾಂತಿ ನಡೆಯುತ್ತವೆ. ಹೀಗೆ ಬಸವಣ್ಣ ಮಾಡಿದ ಸಮಾಜಮುಖಿ ಕಾರ್ಯಗಳು ಇಡೀ ಮನುಕುಲವನ್ನ ಹೊಸ ಮನ್ವಂತರದತ್ತ ಮುನ್ನಡೆಸಿದವು. 12 ನೇ ಶತಮಾನದಲ್ಲಿ ಬಸವಣ್ಣ ಮಾಡಿದ ಕ್ರಾಂತಿಗೆ ಇಂದಿಗೂ ಸಾಕ್ಷಿಯಾಗಿ ನಿಂತಿದೆ ಬಸವನ ಬಾಗೇವಾಡದಲ್ಲಿರುವ ಅನುಭವ ಮಂಟಪ.

ಇಂತಹ ಮಹಾನ್ ನೇತಾರರಾದ ಬಸವಣ್ಣನವರು ೬೨ ವರ್ಷ ತಿಂಗಳು ದಿವಸಗಳ ಕಾಲ ಇಳೆಯಲ್ಲಿ ಬಾಳಿ ನಳನಾಮ ಸಂವತ್ಸರದ ಶ್ರಾವಣ ಶುದ್ಧ ಪಂಚಮಿಯಂದು (ದಿ. ಜುಲೈ ೩೦, ೧೧೯೬) ಲಿಂಗೈಕ್ಯರಾದರು.

  • ಕನ್ನಡ ಸಾಹಿತ್ಯಕ್ಕೆ ವಚನಗಳ ಮೂಲಕ ಅಪೂರ್ವ ಕೊಡುಗೆ ಬಸವಣ್ಣನವರು ನೀಡಿದ್ದಾರೆ. ಇದುವರೆಗೆ ಬಸವಣ್ಣನವರ ಸುಮಾರು 1500 ವಚನಗಳನ್ನು ಸಂಗ್ರಹಿಸಿಡಲಾಗಿದೆ.
  • ಬಸವಣ್ಣನವರ ಪ್ರೇರಣೆಯಿಂದ ಹರಿಜನ ಮತ್ತು ಬ್ರಾಹ್ಮಣ ಕುಟುಂಬಗಳ ನಡುವೆ ನಡೆದ ಅನುಲೋಮ ವಿವಾಹ ಕಲ್ಯಾಣದ ಕ್ರಾಂತಿಗೆ ಮುನ್ನುಡಿಯಾಯಿತು.
  • ಇವರು ಷಟ್ ಸ್ಥಲ ವಚನ, ಕಾಲಜ್ಞಾನ ವಚನ, ಮಂತ್ರಗೋಪ್ಯ, ಶಿಖಾರತ್ನ ವಚನ ಎಂಬ ಗ್ರಂಥಗಳನ್ನು ಬರೆದಿದ್ದಾರೆ. ಇವರನ್ನು ಕುರಿತಂತೆ ಕನ್ನಡ(ಬಸವ ಸಮಕಾಲೀನ ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ), ತೆಲುಗು(13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣ), ಸಂಸ್ಕೃತ, ತಮಿಳು, ಮರಾಠಿ ಮತ್ತು ಹಿಂದಿ ಭಾಷೆಗಳಲ್ಲಿ ಪುರಾಣಗಳು ರಚನೆಯಾಗಿವೆ. ಬಾಗೇವಾಡಿ ಕಪ್ಪಡಿಸಂಗಮ, ಕಲ್ಯಾಣ ಪಟ್ಟಣಗಳಲ್ಲಿ ಇವರ ಸ್ಮಾರಕಗಳಿವೆ.
  • ಬೆಳಗಾವಿ ಜಿಲ್ಲೆಯ ಅರ್ಜುನವಾಡದ ಶಿಲಾಶಾಸನದಲ್ಲಿ ಉಲ್ಲೇಖಿತವಾಗಿರುವ ಸಂಗಣಬಸವ ಎಂಬ ಹೆಸರು ವಚನಕಾರ ಬಸವಣ್ಣನವರದ್ದೇ ಎಂದು ವಿದ್ವಾಂಸರು ಊಹಿಸಿದ್ದಾರೆ.
ಮೂಲ: ವಿವಿಧ ಆನ್ಲೈನ್ ಮೂಲಗಳಿಂದ ಕ್ರೋಢಿಕರಿಸಿ ರಚಿಸಿದ ಬರಹ 

Tuesday, August 20, 2019

ಅಕ್ಕಮಹಾದೇವಿ

ಅಕ್ಕಮಹಾದೇವಿ ವಚನ ಸಾಹಿತ್ಯದ ಪ್ರಮುಖರಲ್ಲೊಬ್ಬರು (ಕ್ರಿ.ಶ.1130-1160). ಅಕ್ಕಮಹಾದೇವಿ ಕನ್ನಡದ ಪ್ರಥಮ ಮಹಿಳಾ ಕವಿಯತ್ರಿಯಾಗಿದ್ದಾರೆ. ಅಕ್ಕಮಹಾದೇವಿಯವರನ್ನು ಶರಣ ಚಳುವಳಿಯ ಪ್ರಮುಖರಾಗಿ ಗುರುತಿಸ ಬಹುದಾಗಿದೆ. ಚಿಕ್ಕ ವಯಸ್ಸಿನಲ್ಲೆ ಸಕಲ ಸುಖವನ್ನು ತ್ಯಜಿಸಿದ ಅಕ್ಕ, ಎದುರಿಸಿದ ಪರೀಕ್ಷೆಗಳು ಬಹಳಷ್ಟು. ಸಾಕ್ಷಾತ್ ಶಿವ (ಮಲ್ಲಿಕಾರ್ಜುನ)ನನ್ನು ಪತಿ ಎಂದು ಸ್ವೀಕರಿಸಿ, ಲೌಕಿಕ ಜಗತ್ತನ್ನು ಧಿಕ್ಕರಿಸಿ, ಕೇಶಾಂಬರೆಯಾಗಿ ನಡೆದ ಅಕ್ಕ, ಹಲವಾರು ಭಕ್ತರಿಗೆ ಮಾದರಿಯಾಗಿದ್ದಾಳೆ.

ಶರಣೆ ಅಕ್ಕಮಹಾದೇವಿಯವರು ಜನಿಸಿದ್ದು ಶಿವಮೊಗ್ಗ ಜಿಲ್ಲೆ, ಶಿಕಾರಿಪುರ-ಶಿರಾಳ ಕೊಪ್ಪದ ನಡುವೆ ಇರುವ ಉಡುತಡಿ ಅಥವಾ ಉಡಗಣಿ ಇಲ್ಲವೆ ಉಡುಗಣಿ ಎಂದೇ ಪ್ರಸಿದ್ದವಾಗಿರುವ ಪುಟ್ಟ ಗ್ರಾಮದಲ್ಲಿ. ಶಿರಾಳ ಕೊಪ್ಪದಿಂದ ಈ ಗ್ರಾಮ 4 ಕಿ.ಮಿ.ದೂರದಲ್ಲಿದೆ. ಇದೀಗ ಇದು ಪ್ರವಾಸಿ ತಾಣವಾಗಿಯೂ ಪ್ರಸಿದ್ದವಾಗಿದೆ.

ಇಂತಹ ಉಡುತಡಿಯಿಂದ ಎಲ್ಲವನ್ನೂ ತ್ಯಜಿಸಿ ಹೊರಟ ಅಕ್ಕಮಹಾದೇವಿಯವರು ಮುಂದೆ [ಬಸವ ಕಲ್ಯಾಣ]ದ ಅನುಭವ ಮಂಟಪದಲ್ಲಿ ಅಲ್ಲಮಪ್ರಭು, ಬಸವಣ್ಣ, ಚೆನ್ನಬಸವಣ್ಣ, ಸಿದ್ಧರಾಮ ಮೊದಲಾದ ಶರಣರೊಡನೆ ಕಲ್ಯಾಣದ ಕ್ರಾಂತಿಯಲ್ಲಿ ತಮ್ಮನ್ನು ತಾವೂ ತೊಡಗಿಸಿಕೊಂಡರಲ್ಲದೇ, "ಚನ್ನಮಲ್ಲಿಕಾರ್ಜುನ" ಎಂಬ ಅಂಕಿತ ನಾಮದಲ್ಲಿ ವಚನ ಸಾಹಿತ್ಯಕ್ಕೆ (ಶರಣ ಸಾಹಿತ್ಯ) ತಮ್ಮದೇ ಆದ ಸಾಹಿತ್ಯ ಸೇವೆಯನ್ನು ಸಲ್ಲಿಸಿದ್ದಾರೆ.



ಈಕೆ ಶಿವನಲ್ಲಿ ಅಪಾರವಾದ ಭಕ್ತಿಯನ್ನಿಟ್ಟುದಲ್ಲದೆ, ಅವನನ್ನೇ ತನ್ನ ಗಂಡನೆಂದು ಭಾವಿಸಿದ್ದಳು. ಊರಿನ ರಾಜ ಕೌಶಿಕನ ದೃಷ್ಟಿ ಈ ಯುವತಿಯ ಮೇಲೆ ಬಿತ್ತು. ಮದುವೆಯಾಗಬಯಸಿದ. ಅದೇ ರೀತಿ ಅಕ್ಕ ಮಹಾದೇವಿಯ ತಂದೆ ನಿರ್ಮಲ ಶೆಟ್ಟಿ ಮತ್ತು ತಾಯಿ ಸುಮತಿಯರಿಗೆ ಈ ವಿಷಯ ಹೇಳಿ ಕಳಿಸಿದನು. ಇಲ್ಲದಿದ್ದದರೆ ಇವರ ತಂದೆ ತಾಯಿಯವರಿಗೆ ಗಲ್ಲು ಶಿಕ್ಷೆ ವಿಧಿಸುವದಾಗಿ ದೊರೆ ಬೆದರಿಕೆ ಹಾಕಿದನು. ತಂದೆ ತಾಯಿಗಳ ಒತ್ತಾಯ, ಸಂದರ್ಭದ ಒತ್ತಡಕ್ಕೆ ಸಿಲುಕಿದ ಅಕ್ಕ ಮದುವೆಯಾಗಲು ೩ ಷರತ್ತುಗಳನ್ನು ರಾಜನಿಗೆ ವಿಧಿಸಿದಳು.
೧) ಎನ್ನಿಚ್ಚೆಯೋಳು ಶಿವಲಿಂಗಲಿಂಗಪೂಜೆಯೊಳಿಪ್ಪೆ
೨) ಎನ್ನಿಚ್ಚೆಯೋಳು ಮಾಹೇಶ್ವರ ಗೊಷ್ಟಿಯೊಳಿಪ್ಪೆ.
೩) ಎನ್ನಿಚ್ಚೆಯೋಳು ಗುರು ಸೇವೆಯೊಳಿಪ್ಪೆ

ಇವಳಿಗಾದರೋ ಅವನ ಕೈಹಿಡಿಯಲು ಸ್ವಲ್ಪವೂ ಇಷ್ಟವಿರಲಿಲ್ಲ. ರಾಜನಿಂದ ತನ್ನ ತಂದೆ ತಾಯಿಗಳಿಗೆ ಉಂಟಾಗಬಹುದಾದ ತೊಂದರೆಗಳನ್ನು ನೆನೆದು ಮೂರು ಷರತ್ತುಗಳೊಂದಿಗೆ ಮದುವೆಯಾಗಲು ಒಪ್ಪಿದಳು. ಮದುವೆಗೆ ಇದಕ್ಕಿಂತಲೂ ಇದ್ದ ದೊಡ್ಡ ಅಡ್ಡಿಯೆಂದರೆ ಕೌಶಿಕ ಜೈನ, ಅಷ್ಟೇ ಅಲ್ಲ, ಭವಿ. ಆತ ಸಂಸಾರದಲ್ಲಿ ಆಸಕ್ತ, ರಾಗಿ; ಇವಳು ಸಂಸಾರದಲ್ಲಿ ನಿರಾಸಕ್ತೆ, ವಿರಾಗಿ. ಕೌಶಿಕ ಲೌಕಿಕವ್ಯಕ್ತಿ; ಮಹಾದೇವಿ ಅಲೌಕಿಕವ್ಯಕ್ತಿ. ಅವನ ವ್ಯವಹಾರವೆಲ್ಲ ಪ್ರಾಪಂಚಿಕ, ಇವಳದೋ ಆಧ್ಯಾತ್ಮಿಕ.

ಆದರೆ ಮದುವೆಗೆ ಅಕ್ಕ ಸಮಯ ಕೇಳಿದಳು. ಮಹಾದೇವಿ ಮದುವೆ ಆಗಿದ್ದಳು ಎಂದು ಕೇವಲ ಮೂರು ಪ್ರಾಚಿನ ಗ್ರಂಥಗಳು ಹೇಳುತ್ತವೆ
೧)ಹರಿಹರ ದೇವನ ಉಡತಡಿ ಮಹಾದೇವಿಯಕ್ಕನ ರಗಳೆಗಳು
೨) ಚೆನ್ನಬಸವಾ೦ಕನ ಮಹಾದೇವಿಯಕ್ಕನ ಪುರಾಣ
೩) ಕೆಂಚ ವೀರನ್ನೋಡೆಯರ ಶೂನ್ಯ ಸಂಪಾದನೆ.

ಅಕ್ಕ ವಿವಾಹ ವಾಗಿಲ್ಲ ಅಂತ ಅನೇಕ ಪ್ರಾಚಿನ ಕೃತಿಗಳಲ್ಲಿ ಕಂಡು ಬರುತ್ತದೆ ಅವುಗಳಲ್ಲಿ
೧) ಚಾಮರಸನ ಪ್ರಭುಲಿಂಗಲೀಲೆ
೨) ವಿರುಪಾಕ್ಷ ಪಂಡಿತ ಕೃತ ಚೆನ್ನಬಸವ ಪುರಾಣ
೩) ಎಳ೦ದೂರು ಹರಿಶ್ವರ ಕೃತ ಪ್ರಭುದೇವರ ಪುರಾಣ
೪) ಪಾಲ್ಗುರಿಕೆ ಸೋಮನಾಥ ಪುರಾಣ
೫)ಸಂಸ್ಕೃತ ಪ್ರಭುಲಿಂಗಲೀಲೆ
೬) ತೆಲಗು ಮತ್ತು ತಮಿಳು ಪ್ರಭುಲಿಂಗಲೀಲೆ
೭) ಹಲಗೆಯ ದೇವರ ಶೂನ್ಯ ಸಂಪಾದನೆ
೮) ಗಣ ಭಾಷಿತ ರತ್ನ ಮಾಲೆ
೯) ಗೂಳೂರು ಸಿದ್ದಣ್ಣ ವೀರಣ್ಣ ಒಡೆಯರ -ಶೂನ್ಯ ಸಂಪಾದನೆ

ಅದೊಂದು ದಿನ ಕೌಶಿಕ ರಾಜ ನೀನು ಉಟ್ಟಿರುವುದು ನನ್ನ ಬಟ್ಟೆ, ಧರಿಸಿರುವ ಆಭರಣಗಳು ನನ್ನವು, ತಿನ್ನುತ್ತಿರುವ ಅನ್ನ ನನ್ನದು ಎಂದು ಹೀಯಾಳಿಸಿದ್ದನ್ನೇ ಕಾರಣವಾಗಿಟ್ಟುಕೊಂಡು, 'ರೋಗಿ ಬಯಸಿದ್ದೂ ಹಾಲು ಅನ್ನ, ವೈದ್ಯ ಹೇಳಿದ್ದೂ ಹಾಲು ಅನ್ನ' ಎಂಬಂತೆ ತನ್ನ ಶರೀರದ ಮೇಲಿರುವ ಪ್ರತಿಯೊಂದು ವಸ್ತು-ವಿಷಯವನ್ನೂ ಕಳಚಿಟ್ಟು, ನಿರ್ವಾಣ ಶರೀರವನ್ನು ಸೊಂಪಾದ ತಲೆಕೂದಲುಗಳಿಂದ ಮುಚ್ಚಿಕೊಂಡು ಅರಮನೆಯಿಂದ ಹೊರನಡೆಯುತ್ತಾಳೆ. ಚೆನ್ನಮಲ್ಲಿಕಾರ್ಜುನನನ್ನು ಅರಸುತ್ತ ಹೊರಟು ದಾರಿಯಲ್ಲಿ ಹಲವಾರು ರೀತಿಯ ಕೋಟಲೆಗಳನ್ನು ಅನುಭವಿಸಿದಳು. ಈ ಎಲ್ಲ ಅಸಹನೀಯವಾದ ನೋವನ್ನೂ ನುಂಗಿ ಸಹಿಸಿಕೊಳ್ಳಲು ಧೈರ್ಯ ಕೊಟ್ಟದ್ದು ಇವಳ ಶಿವನಿಷ್ಠೆ. ತಾನು ಶಿವನ ವಧುವಾದ್ದರಿಂದ ಯಾರಿಗೂ ಅಳುಕಬೇಕಾಗಿಲ್ಲವೆಂಬ ಕೆಚ್ಚು ಇವಳದು. ಶ್ರೀಶೈಲಕ್ಕೆ ಹೋಗುವ ಮಾರ್ಗದಲ್ಲಿ ಈಕೆ ಕಲ್ಯಾಣಕ್ಕೂ ಬಂದಳು. ಕಲ್ಯಾಣ ಆಗ ವೀರಶೈವ ಧಾರ್ಮಿಕ ಚಟುವಟಿಕೆಗಳಿಂದ ತುಂಬಿ ತುಳುಕುತ್ತಿದ್ದಿತು. ಬಸವ, ಅಲ್ಲಮ ಮುಂತಾದವರ ನೇತೃತ್ವದಲ್ಲಿ ಸಾಮಾಜಿಕ ಕ್ರಾಂತಿಯೊಂದು ರೂಪುಗೊಳ್ಳುತ್ತಿದ್ದಿತು. ಆ ಶರಣರ ಕಿವಿಗಾಗಲೇ ಅಕ್ಕನ ನಿಷ್ಠೆ ಭಕ್ತಿಗಳು ಕೇಳಿ ಬಂದಿದ್ದವು. ಕಲ್ಯಾಣದಲ್ಲಿ ಕೆಲವು ಕಾಲ ನಿಂತು ಅನುಭಾವಿಗಳ ಸಂಗದಲ್ಲಿ ಸುಖ ಶಾಂತಿಗಳನ್ನು ಕಂಡಳು. ಬಸವಣ್ಣ, ಅಲ್ಲಮಪ್ರಭು-ಮುಂತಾದ ಅನುಭಾವಿಗಳಿಂದ ಮಹಾಶಿವಶರಣೆ ಎಂಬ ಹೊಗಳಿಕೆಗೆ ಪಾತ್ರಳಾದಳು. ಅಲ್ಲಿಂದ ಈಕೆ ಎಲ್ಲರ ಹರಕೆಯನ್ನೂ ಹೊತ್ತು, ತನ್ನ ಗಂಡ ಶ್ರೀಚೆನ್ನಮಲ್ಲಿಕಾರ್ಜುನನನ್ನು ಅರಸುತ್ತ ಶ್ರೀ ಶೈಲಕ್ಕೆ ಬಂದು, ಕದಳಿವನ ಪ್ರವೇಶಿಸಿ, ತನ್ನ ಆರಾಧ್ಯದೈವದ ಸಾನ್ನಿಧ್ಯದಲ್ಲಿ ಕೊನೆಯುಸಿರೆಳೆದಳು. ಹೀಗೆ ಸಾಂಪ್ರದಾಯಿಕ ಸಮಾಜದ ಸಂಕೋಲೆಗಳನ್ನು ಮುರಿದೊಗೆದು ಇವಳು ಮಾಡಿದ ಉಗ್ರಸಾಧನೆ, ಪಡೆದ ಸಿದ್ಧಿ ಅಪೂರ್ವವಾದುದು.

ಬೀದರ್‌ ಜಿಲ್ಲೆಯ ಕಲ್ಯಾಣ ಇವಳ ಭಕ್ತಿಯ ಕಾರ್ಯಕ್ಷೇತ್ರವಾಯಿತು. ಬಸವಣ್ಣನ ಅನುಭವ ಮಂಟಪದಲ್ಲಿ ಆಕೆ ಆಧ್ಯಾತ್ಮಿಕ ಚಿಂತನೆಗಳನ್ನು ಹಂಚಿಕೊಂಡಳು. ಅನುಭವ ಮಂಟಪದ ಸಂಗದಲ್ಲಿ ಅಪಾರ ಭಕ್ತಿಜ್ಞಾನವನ್ನು ಉಣಬಡಿಸುತ್ತಾಳೆ. ಮಂತ್ರಗೋಪ್ಯ ಮತ್ತು ಯೋಗಾಂಗ ತ್ರಿವಿಧಿ ಎಂಬ ಗ್ರಂಥಗಳಲ್ಲದೆ ಸರಿಸುಮಾರು 430 ವಚನಗಳನ್ನು ಬರೆದು, ಹಾಡಿ ಶಿವಶರಣರಿಗೆ ಭಕ್ತಿಮಾರ್ಗದ ಅರಿವು ಮೂಡಿಸಿದ್ದಾಳೆ. ಅನುಭವ ಮಂಟಪದ ಸಂಗತ್ಯದಲ್ಲಿ ಶಿವನಲ್ಲಿ ಐಕ್ಯವಾಗಲು ಸಾಧ್ಯವಾಗದೆಂದು ತಿಳಿದ ಅಕ್ಕಮಹಾದೇವಿ ಶ್ರೀಶೈಲ ಕದಳೀ ವನದ ಗುಹೆಯಲ್ಲಿ ತನ್ನ ನೆಚ್ಚಿನ ಚೆನ್ನಮಲ್ಲಿಕಾರ್ಜುನನಲ್ಲಿ ಐಕ್ಯವಾಗುತ್ತಾಳೆ. 

ಅಕ್ಕ-ಅನುಭವ ಮಂಟಪದಲ್ಲಿ:
ಒಮ್ಮೆ ಅನುಭವ ಮಂಟಪದಲ್ಲಿ ಚರ್ಚೆ ನಡೆಯುತ್ತಿರುವಾಗ ಮಹಾದೇವಿಯ ಆಗಮನವಾಗುತ್ತದೆ. ಆಗ ಮಡಿವಾಳ ಮಾಚಿದೇವರು ಎದ್ದು ನಿಂತು ಬುದ್ಡಿ ಉಡುತಡಿಯ ಮಹಾದೇವಿ ಅಕ್ಕನವರು ಆಗಮಿಸುತ್ತಿದ್ದಾರೆ ಎಂದು ಹೇಳುತ್ತಾರೆ. ಆಗ ಬಸವಣ್ಣನವರು ಮಾಚಿದೇವರೇ ಮಹಾದೇವಿ ಯವರನ್ನು ಮರ್ಯಾದೆಯಿಂದ ಕರೆ ತನ್ನಿ ಎಂದು ಹೇಳಲು ಮಾಚಿದೇವರು ಆಕೆಗೆ ನಡೆ ಮುಡಿಯನ್ನು ಹಾಸುತ್ತಾರೆ. ಆಗ ಮಹಾದೇವಿಯು ಮಡಿಯನ್ನು ಸರಿಸಿ ಒಳಗೆ ಬರುತ್ತಾಳೆ. ಅಲ್ಲಿಂದ ಮುಂದೆ ಅಲ್ಲಮಪ್ರಭುದೇವರು ಮತ್ತು ಅಕ್ಕಮಹಾದೇವಿಯ ನಡುವೆ ಈ ರೀತಿ ಸಂಭಾಷಣೆ ನಡೆಯುತ್ತದೆ.

ಅಕ್ಕ : ಪ್ರಭುದೇವರ ಶ್ರೀ ಚರಣಗಳಿಗೆ ಶರಣು ಶರಣಾರ್ಥಿ,

ಅಲ್ಲಮ : ನಿಲ್ಲು ತುಂಬು ಯೌವನದ ಸತಿ ನೀನು ಇತ್ತಲೇಕೆ ಬಂದೆಯವ್ವ. ಸತಿ ಎಂದರೆ ಮುನಿಯುವರು ನಮ್ಮ ಶರಣರು. ನಿನ್ನ ಪತಿಯ ಹೆಸರ ಹೇಳಿದರೆ ಬಂದು ಕುಳ್ಳಿರು ಅಲ್ಲವಾದರೆ ತೆರಳು ತಾಯೆ. ನಮ್ಮ ಶರಣರ ಸಂಘ ಸುಖದಲಿ ಸನ್ನಿಹಿತವ ಬಯಸುವೆಯಾದರೆ ನಿನ್ನ ಪತಿಯ ಹೆಸರ ಹೇಳಾ, ಎಲೆ ಅವ್ವಾ ಅಲ್ಲವಾದರೆ ನಿನಗೆ ಇಲ್ಲಿ ಸ್ಥಳವಿಲ್ಲ.

ಅಕ್ಕ : ಹರನೇ ಗಂಡನಾಗಬೇಕೆಂದು ಅನಂತ ಕಾಲ ತಪಿಸಿದೆ ನೋಡಾ ! ಎನ್ನ ಜನ್ಮ ಜನ್ಮಾಂತರದ ಬಯಕೆ ಆ ಶಿವನೇ ಗಂಡನಾಗಬೇಕೆಂಬುದು ಅದು ಈ ಜನ್ಮದಲ್ಲಿ ಸಿದ್ದಿಸಿದೆ. ಗುರು ನನ್ನನ್ನು ಚನ್ನಮಲ್ಲಿಕಾರ್ಜುನನಿಗೆ ವಿವಾಹ ಮಾಡಿ ಕೊಟ್ಟಿದ್ದಾನೆ. ಗುರುವೇ ತೆತ್ತಿಗನಾದ, ಲಿಂಗವೇ ಮದುವಣಿಗನಾದ, ಆನು ಮದುವಣಗಿತ್ತಿಯಾದೆನು. ಈ ಭುವನವೆಲ್ಲವರಿಯಲು ಅಸಂಖ್ಯಾತರೆನ್ನ ತಾಯಿ ತಂದೆಗಳು, ಕೊಟ್ಟರು ಪ್ರಭುವಿನ ಮನೆಗೆ ಸಾದೃಶ್ಯವಪ್ಪ ವರನನ್ನು ನೋಡಿ, ಇದು ಕಾರಣ ಚೆನ್ನಮಲ್ಲಿಕಾರ್ಜುನನೇ ಗಂಡನೆನಗೆ ಮಿಕ್ಕಿನ ಲೋಕದ ಗಂಡರೆನಗೆ ಸಂಬಂಧ ವಿಲ್ಲವಯ್ಯಾ ಪ್ರಭುವೇ.

ಅಲ್ಲಮ : ಈ ಮಾತಿನ ಚಮತ್ಕಾರವನ್ನು ನಮ್ಮ ಶರಣರು ಮೆಚ್ಚಲಾರರು ಮಹಾದೇವಿ. ನಿನ್ನ ಚರಿತ್ರೆಯನ್ನು ಲೋಕ ತಿಳಿಯದೆಂದು ಭಾವಿಸಬೇಡ. ಲಗ್ನವಾದ ಕೌಶಿಕನ ಮೇಲೆ ತಪ್ಪನ್ನು ಹೊರೆಸಿ ಅರಮನೆಯನ್ನು ಬಿಟ್ಟು ನಿರ್ವಾಣ ಶರೀರಿಯಾಗಿ ಹೊರಟು ಬಂದಿರುವೆ ಎಂಬ ಮಾತು ನಿಜವೇ ? ಪತಿಯ ಮೇಲೆ ತಪ್ಪನ್ನು ಹೊರಿಸಿ ಬರುವ ಸತೀಧರ್ಮವನ್ನು ಈ ನಮ್ಮ ಶರಣರು ಮೆಚ್ಚಲಾರರು.

ಅಕ್ಕ : ನನ್ನ ಮದುವೆಯ ಕತೆಯನ್ನು ಪ್ರಪಂಚ ಹೇಗಾದರೂ ತಿಳಿದು ಕೊಂಡಿರಲಿ. ನಾನು ಮೊದಲಿನಿಂದಲೂ ಚನ್ನಮಲ್ಲಿಕಾರ್ಜುನನಿಗೆ ಮೀಸಲು ಹೆಣ್ಣು. ಸಾವ ಕೆಡುವ ಗಂಡಂದಿರನೆಂದೂ ಬಯಸಿದವಳಲ್ಲ. ಸೀಮೆ ಇಲ್ಲದ ನಿಸ್ಸೀಮ ಚಲುವನಿಗೆ ಮಾತ್ರ ಒಲಿದವಳು. ನನ್ನ ಜೀವನದಲ್ಲಿ ಕೌಶಿಕನ ಪ್ರಸಂಗ ಒಂದು ದೈವ ಕೃಪೆಯಂತೆ ಬಂದಿತಷ್ಟೇ. ಸ್ತ್ರೀಯ ಸೌಂದರ್ಯದ ವ್ಯರ್ಥ ವ್ಯಾಮೋಹವನ್ನು ಬಿಡಿಸಲು ದಿಗಂಬರಳಾಗಿ ಅರಮನೆಯನ್ನು ತ್ಯಜಿಸಿ ಬಂದೆ. ಸೌಂದರ್ಯದ ಹಂಗನ್ನು ಹರಿದೊಗೆದು ಬಂದಂತಹವಳು.

ಅಲ್ಲಮ : ನಿನ್ನ ದೇಹದ ಮೋಹ ನಿನಗಿನ್ನು ಹೋಗಿಲ್ಲ, ನಿನ್ನ ಸೌಂದರ್ಯದ ಮೋಹ ನಿನಗಿನ್ನೂ ಉಳಿದಿದೆಯಲ್ಲವೇ?

ಅಕ್ಕ : ಇಲ್ಲ, ಆ ಭಾವ ನನಗೆ ಎಳ್ಳಷ್ಟೂ ಉಳಿದಿಲ್ಲ, ಕಾಯ ಕರ್ರನೆ ಕಂದಿದರೇನಯ್ಯ ? ಕಾಯ ಮಿರ್ರನೆ ಮಿಂಚಿದರೇನಯ್ಯ ? ಅಂತರಂಗ ಶುದ್ಧವಾದ ಬಳಿಕ ಚನ್ನಮಲ್ಲಿಕಾರ್ಜುನನಿಗೆ ಒಲಿದ ಅಂಗವು ಹೇಗಿದ್ದರೇನಯ್ಯ ಪ್ರಭುವೇ ?

ಅಲ್ಲಮ : ಇದು ಬರಿಯ ಆಡಂಬರದ ಮಾತು, ಮಾತಿನಂತೆ ನಡೆ ಇಲ್ಲದವರನ್ನು ಗುಹೇಶ್ವರ ಲಿಂಗ ಮೆಚ್ಚುವವನಲ್ಲ. ಅಂತರಂಗದ ನಾಚಿಕೆ ಬಹಿರಂಗದಲ್ಲಿ ತಲೆದೋರುತ್ತಿದೆ. ಸೀರೆಯನ್ನಳಿದು ಕೂದಲನ್ನೇಕೆ ಮರೆಮಾಡಿ ಕೊಳ್ಳಬೇಕಾಗಿತ್ತು, ಈ ವರ್ತನೆ ಒಪ್ಪವಲ್ಲ ಗುಹೇಶ್ವರ ಲಿಂಗಕ್ಕೆ.

ಅಕ್ಕ : ನಿಜ. ಒಂದರ ಹಂಗನ್ನು ಬಿಟ್ಟು , ಇನ್ನೊಂದರ ಹಂಗನ್ನು ನಾನು ಹೊಂದಿದ್ದೇನೆಂದು ನೀವು ಹೇಳುವ ಮಾತು ನಿಜ. ಆದರೆ ಅದು ನನಗಾಗಿ ಅಲ್ಲ, ನಿಮಗಾಗಿ ಅಂದರೆ ಜನರ ಹಂಗಿಗಾಗಿ ಇದನ್ನು ಅವಲಂಬಿಸಿದ್ದೇನೆ. ಫಲ ಒಳಗೆ ಪಕ್ವವಾದಲ್ಲದೆ ಹೊರಗಣ ಸಿಪ್ಪೆ ಒಪ್ಪಗೆಡದು. ಕಾಮನ ಮುದ್ರೆಯ ಕಂಡು ನಿಮಗೆ ನೋವಾದಿತೆಂದು ಆ ಭಾವದಿಂದ ಮುಚ್ಚಿದೆ. ಇದಕ್ಕೆ ನೋವೇಕೆ ಕಾಡದಿರಣ್ಣ ಚನ್ನಮಲ್ಲಿಕಾರ್ಜುನನ ದೇವರ ದೇವನ ಒಳಗಾದವಳ.

ಅಲ್ಲಮ : ಏನೂ ! ಫಲ ಪಕ್ವವಾದಲ್ಲದೆ ಹೊರಗಣ ಸಿಪ್ಪೆ ಒಪ್ಪಗೆಡದು ಎಂದೆಯಲ್ಲವೆ ನಾನು ಹೇಳುತ್ತೇನೆ ಕೇಳು, ಸಿಪ್ಪೆ ಒಪ್ಪಗೆಟ್ಟಾಗ ಹಣ್ಣಿನ ರಸ ಕೊಳಕಾಗುತ್ತದೆ ಅದನ್ನಾದರೂ ಮೆಚ್ಚುವುದು ಹೇಗೆ ?

ಅಕ್ಕ : ಆ ಹಣ್ಣನ್ನು ನಾನು ಹಾಗೇ ಇಟ್ಟಿಲ್ಲ ಪ್ರಭುವೇ, ಎಂದೋ ಚನ್ನಮಲ್ಲಿಕಾರ್ಜುನನಿಗೆ ಸಮರ್ಪಿಸಿ ಬಿಟ್ಟಿದ್ದೇನೆ. ಅರಿಷಡ್ವರ್ಗಗಳನ್ನಳಿದು ನನ್ನ ದೇಹವನ್ನು ವ್ಯಾಪಿಸಿರುವ ಸಚ್ಛಿದಾನಂದಾತ್ಮಕವಾದ ರಸ ಅದು. ಸಿಪ್ಪೆ ಒಪ್ಪಗೆಟ್ಟರು ಕೊಳೆಯಲಾರದು, ನನ್ನ ಒಳ ಹೊರೆಗೆಲ್ಲವ ನಳಿದು ನನ್ನತನ ಒಂದೂ ಇಲ್ಲವೆಂದು ಎಂದೆಂದೂ ಅಳಿಯದ ಅಮರ ಪವಿತ್ರತೆಯನ್ನು ತಂದು ಕೊಟ್ಟಿದೆ ಪ್ರಭುವೆ.

ಅಲ್ಲಮ : ಈ ಬಾಹ್ಯ ಬ್ರಹ್ಮದ ಬೆಡಗನ್ನು ನಾವು ಮೆಚ್ಚುವವರಲ್ಲ. ನಾ ಸತ್ತೆನೆಂದು ಹೆಣ ಕೂಗಿದುದುಂಟೆ ? ಬೈಚಿಟ್ಟ ಬಯಕೆ ಕರೆದುದುಂಟೆ ? ಹೆಪ್ಪಿಟ್ಟ ಹಾಲು ಸಿಹಿಯಪ್ಪುದೇ ? ಈ ಮಾತು ಒಪ್ಪವಲ್ಲ ಗುಹೇಶ್ವರ ಲಿಂಗದಲ್ಲಿ.

ಅಕ್ಕ : ಸತ್ತ ಹೆಣ ಕೂಗಿದುದುಂಟು. ಮರೆತು ಒರಗಿ ಕನಸು ಕಂಡು ಅದನ್ನು ಹೇಳುವಲ್ಲಿ ಸತ್ತ ಹೆಣ ಎದ್ದಂತೆ ಆಯಿತು. ಹೆಪ್ಪಿಟ್ಟ ಹಾಲು ಗಟ್ಟಿ ತುಪ್ಪವಾಗಿ ಸಿಹಿಯಾಗಿತ್ತು. ಇದಕ್ಕೆ ತಪ್ಪು ಸಾಧಿಸಲೇಕೆ ಪ್ರಭುವೇ.

ಅಲ್ಲಮ : ಅದೂ ಹೋಗಲಿ, ಅರಿಷಡ್ವರ್ಗಗಳಿಂದಲೇ ತುಂಬಿರುವ ಈ ಶರೀರದಲ್ಲಿದ್ದು ಅದನ್ನು ದಾಟಿದ್ದೇನೆ ಎಂದರೆ ಅದನ್ನಾದರೂ ನಂಬುವುದು ಹೇಗೆ ?

ಅಕ್ಕ : ಕಾಮನ ಗೆದ್ದ ಠಾವನ್ನು ಹೇಳಬೇಕೆ ಪ್ರಭುವೇ ? ಕಾಮವನ್ನು ಗೆಲ್ಲುವುದಕ್ಕೆ ಆ ಕಾಮ ನನ್ನ ಮನಸ್ಸಿನಲ್ಲಿ ಎಂದೂ ಹುಟ್ಟಿಯೇ ಇಲ್ಲ. ಕೇಳಿ ಅಂಗದ ಭಂಗವ ಲಿಂಗ ಸುಖದಿಂದ ಗೆಲ್ಲಿದೆ. ಜೀವದ ಭಂಗವ ಶಿವಾನುಭವದಿಂದ ಗೆಲ್ಲಿದೆ. ಕರಗದ ಕತ್ತಲೆಯ ಬೆಳಗನ್ನುಟ್ಟು ಗೆಲ್ಲಿದೆ. ಜವ್ವನದ ಹೊರ ಮಿಂಚಿನಲ್ಲಿ ನಿಮ್ಮ ಕಣ್ಣಿಗೆ ಕಾಣುವ ಕಾಮನ ಸುಟ್ಟುರಿಯುವ ಭಸ್ಮವ ನೋಡಯ್ಯ. ಕಾಮನ ಕೊಂದು ಮನಸ್ಸಿಜನಾಗುಳಿದರೆ, ಮನಸಿಜನ ತಲೆ ಬರಹವ ತೊಡೆದೆನು. ಎನ್ನ ಮನಸ್ಸಿಜನ ಜನನಕ್ಕೆ ಅವಕಾಶವನ್ನೇ ಕಲ್ಪಿಸಿಕೊಟ್ಟಿಲ್ಲ. ಇದನ್ನು ತಮ್ಮಂತಹ ಕೆಲವರು ಮಾತ್ರವೇ ಅರ್ಥ ಮಾಡಿ ಕೊಳ್ಳಬಲ್ಲವರು ಪ್ರಭುವೇ.

ಅಲ್ಲಮ : ನೋಡಿದೆಯಾ ಬಸವಣ್ಣ, ಮಹಾದೇವಿಯ ಈ ನಿಲುವನ್ನು ಲೋಕಕ್ಕೆ ಪ್ರಕಟ ಮಾಡಬೇಕೆಂದೇ ನಾನು ಇಷ್ಟು ನಿಷ್ಠುರನಾದೆ. ತಾಯೇ ನಿನ್ನ ಜ್ಞಾನ ಘನ, ನಿನ್ನ ವಿರತಿ ಘನ, ನೀನು ವೈರಾಗ್ಯ ನಿಧಿ. ನಿನ್ನನ್ನು ಪಡೆದ ಜಗತ್ತು ಪಾವನ. ಮಾಯೆ ನಿನ್ನ ಮುಟ್ಟಲಿಲ್ಲ, ಮರಹು ನಿನ್ನ ಸೋಂಕಲಿಲ್ಲ, ಕಾಮ ನಿನ್ನ ಕೆಡಿಸಲಿಲ್ಲ, ಮಹಾದೇವಿ ಅಕ್ಕ ನೀನು ವಿಶ್ವ ಸ್ತ್ರೀ ಕುಲದ ಜ್ಯೋತಿ. ದಿಟ್ಟ ಹೆಜ್ಜೆ, ಧೀರ ನುಡಿಯ ತಾಯಿ ನೀನು, ವಿನಯ ವಿಶ್ವಾಸಗಳ ರತ್ನಗಣಿ ನೀನು, ತಾಯೇ ಮಹಾದೇವಿ ನಿನ್ನ ಸ್ತ್ರೀ ಪಾದಗಳಿಗೆ ನಮೋ ನಮೋ ಎಂದೆನು. (ಅಲ್ಲಮಪ್ರಭು ಕೈ ಮುಗಿಯುವರು)

ಬಸವಣ್ಣ : ಹೌದು ಪ್ರಭುವೇ, ಈಕೆ ನಮ್ಮೆಲ್ಲರ ಅಕ್ಕ. ನಮಗೆಲ್ಲರಿಗೂ ಗುರುವಾಗಬಲ್ಲ ಯೋಗ್ಯತೆಯುಳ್ಳವಳು. ಅಕ್ಕಮಹಾದೇವಿ ನಿನಗೆ ಶರಣು ಶರಣಾರ್ಥಿ. (ಬಸವಣ್ಣ ನವರು ಕೈಮುಗಿಯುವರು)

ಅಕ್ಕ : ತಾವು ಹಾಗೆಲ್ಲಾ ಹೇಳಬಾರದು, ನಿಮ್ಮೆಲ್ಲರ ಕರುಣೆಯ ಶಿಶು ನಾನು, ನಿಮ್ಮೆದುರಿನಲ್ಲಿ ಅತಿ ಚಿಕ್ಕವಳು.

ಚನ್ನಬಸವಣ್ಣ : ಇರಬಹುದು, ವಯಸ್ಸು ಅತಿ ಚಿಕ್ಕದೇ ಇರಬಹುದು. ಆದರೂ ನೀನು ಎಲ್ಲರಿಗೂ ಅಕ್ಕನಾಗಬಲ್ಲವಳು ತಾಯಿ. ಮಹಾದೇವಿ ಅಕ್ಕ ಹಿರಿತನ ಕೇವಲ ವಯಸ್ಸಿನಿಂದ ಮಾತ್ರವೇ ಬರುವುದಿಲ್ಲ. ಅಜ ಕಲ್ಪಕೋಟಿ ವರುಷದವರೆಲ್ಲರೂ ಹಿರಿಯರೇ ? ಹುತ್ತೇರಿ ಬೆತ್ತ ಬೆಳೆದ ತಪಸ್ವಿಗಳೆಲ್ಲರೂ ಹಿರಿಯರೇ ? ನಡು ಮುರಿದು, ತಲೆ ನಡುಗಿ, ಮತಿಗೆಟ್ಟು ಒಂದನಾಡ ಹೋಗಿ ಒಂಭತ್ತನಾಳುವ ಅಜ್ಞಾನಿಗಳೆಲ್ಲರೂ ಹಿರಿಯರೇ ?; ಅನುವನರಿದು, ಘನವ ಬೆರೆಸಿ, ಹಿರಿದು ಕಿರಿದೆಂಬ ಭೇದವ ಮರೆತು ಕೂಡಲ ಚನ್ನಸಂಗಯ್ಯನಲ್ಲಿ ಬೆರೆಸಿ ಬೇರಿಲ್ಲದಿಪ್ಪ ಹಿರಿತನ ನಮ್ಮ ಮಹಾದೇವಿಯಕ್ಕಂಗಾಯಿತ್ತು.

ಸಿದ್ದರಾಮ : ಅಹುದಹುದು ಮತ್ತೇನು, ಮರಹಿಂಗೆ ಹಿರಿದು ಕಿರಿದುಂಟಲ್ಲದೆ, ಅರಿವಿಂಗೆ ಹಿರಿದು ಕಿರಿದುಂಟೆ ಹೇಳಯ್ಯ ? ಜಾತಂಗೆ ಮರಣದ ಭಯ ಉಂಟಲ್ಲದೆ, ಅಜಾತಂಗೆ ಮರಣದ ಭಯವುಂಟೇ ಹೇಳಯ್ಯ? ಕಪಿಲಸಿದ್ಧ ಮಲ್ಲಿನಾಥನಲ್ಲಿ ಮಹಾದೇವಿಯಕ್ಕನ ನಿಲವಿಂಗೆ ಶರಣೆಂದು ಶುದ್ಧನಾದೆನು ಕಾಣಾ ಚನ್ನಬಸವಣ್ಣ.

ಅಕ್ಕ : ಭಕ್ತಿ ಬಂಡಾರಿ ಬಸವಣ್ಣನವರ ಶ್ರೀ ಚರಣಗಳಿಗೆ ಶರಣು ಶರಣಾರ್ಥಿ.

ಬಸವಣ್ಣ : ಶರಣು ತಾಯೇ ಶರಣು ಶರಣು.

ಅಕ್ಕ : ಜ್ಞಾನ ನಿಧಿ ಚನ್ನಬಸವಣ್ಣನವರ ಶ್ರೀ ಚರಣಗಳಿಗೆ ಶರಣು ಶರಣಾರ್ಥಿ.

ಚನ್ನಬಸವಣ್ಣ : ಶರಣು ತಾಯೇ ಶರಣು.

ಅಕ್ಕ : ಧರ್ಮಯೋಗಿ ಸಿದ್ಧರಾಮಣ್ಣನವರ ಶ್ರೀ ಚರಣಗಳಿಗೆ ಶರಣು ಶರಣಾರ್ಥಿ.

ಸಿದ್ಧರಾಮ : ಶರಣು ತಾಯೇ ಶರಣು.

ಅಕ್ಕ : ಎಲ್ಲಾ ಶರಣ ಶರಣೆಯರಿಗೂ ಶರಣು ಶರಣಾರ್ಥಿ.

ಎಲ್ಲರೂ : ಶರಣು ತಾಯೇ ಶರಣು ಶರಣು ಎಂದು ಎಲ್ಲಾ ಶರಣರು ನಮಸ್ಕರಿಸುವರು

ಆಗ ಬಸವಣ್ಣನವರು ಅಕ್ಕನನ್ನು ಅಂದಿನ ಅನುಭವಮಂಟಪದ ಗೋಷ್ಠಿಯಲ್ಲಿ ಪಾಲ್ಗೊಳ್ಳುವಂತೆ ಹೇಳುವರು.

ಮೂಲ: ವಿವಿಧ ಆನ್ಲೈನ್ ಮೂಲಗಳಿಂದ ಕ್ರೋಢಿಕರಿಸಿ ರಚಿಸಿದ ಬರಹ

ಪುತ್ತೂರ್ ಅಜ್ಜ

  ರಾಮಚಂದ್ರ ಭಟ್ರವರ ಹೆತ್ತವರು   ರಾಮೇಶ್ವರಕ್ಕೆ ತೀರ್ಥಯಾತ್ರೆಗೆ ತೆರಳಿ ಬಂದ   ತರುವಾಯ 1916 ರ ಜೂನ್ 15 ರಂದು ನೆಟ್ಟಾರಿನಲ್ಲಿ   ರಾಮಚಂದ್ರರ ಜನನವಾಯಿತು ...