Followers

Sunday, July 12, 2020

ಆಯ್ದಕ್ಕಿ ಲಕ್ಕಮ್ಮ ಮತ್ತು ಮಾರಯ್ಯ

ಈಗಿನ ರಾಯಚೂರು ಜಿಲ್ಲೆ ಲಿಂಗಸೂರು ತಾಲ್ಲೂಕಿನ ಅಮರೇಶ್ವರ ಎಂಬ ಗ್ರಾಮದಲ್ಲಿ (ಬಸವಣ್ಣನವರ ಕಾಲಕ್ಕೆ)  ಮಾರಯ್ಯ ಮತ್ತು ಲಕ್ಕಮ್ಮ ಎಂಬ ದಂಪತಿಗಳಿದ್ದರು. ಅನನ್ಯ ಶಿವಭಕ್ತರಾಗಿದ್ದ ಅವರಿಬ್ಬರೂ ಊರಿನಲ್ಲಿದ್ದ ಅಮರೇಶ್ವರ (ಶಿವ) ಸೇವೆಯಲ್ಲಿ ನಿರತರಾಗಿದ್ದರು. ಇದನ್ನು ಗುಡುಗುಂಟಿ ಅಮರೇಶ್ವರ ಎಂತಲೂ ಕರೆಯುತ್ತಾರೆ. ನಾಡಿನಾದ್ಯಂತ ಪ್ರಸರಿಸುತ್ತಿದ್ದ ಕಲ್ಯಾಣದ ಸಮಾಚಾರ, ಬಸವಣ್ಣನವರ ಕೀರ್ತಿವಾರ್ತೆ ಮಾರಯ್ಯ ದಂಪತಿಗೂ ತಲುಪಿತು. ಮಹಾಕ್ರಾಂತಿಕಾರ ಬಸವಣ್ಣನವರನ್ನು ಕಾಣುವ ಹಂಬಲದಿಂದ ಕಲ್ಯಾಣದ ದಾರಿ ಹಿಡಿದು ಮಹಾಮನೆಗೆ ಬಂದು ಅಲ್ಲಿ ಶರಣರ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ‘ಆಯದ’ ಅಂದರೆ ಕೂಲಿಯ ಅಕ್ಕಿಯಿಂದ ಅನ್ನ ದಾಸೋಹ ನಡೆಸುತ್ತಿದ್ದ ದಂಪತಿಗೆ ಆಯ್ದಕ್ಕಿ ಎಂಬುದು ಅನ್ವರ್ಥ ನಾಮವಾಯಿತು. ಶರಣರೆಲ್ಲರೂ ಅವರನ್ನು ಆಯ್ದಕ್ಕಿ ಮಾರಯ್ಯ ಮತ್ತು ಆಯ್ದಕ್ಕಿ ಲಕ್ಕಮ್ಮ ಎಂದೇ ಗುರುತಿಸುತ್ತಿದ್ದರು.


ಆಯ್ದಕ್ಕಿ ಲಕ್ಕಮ್ಮನ ಸಿಕ್ಕ ವಚನಗಳು 25, ಸಂಖ್ಯಾತ್ಮಕವಾಗಿ ಕಡಿಮೆ ಎನಿಸಿದರೂ ಮೌಲಿಕವಾಗಿ ಅರ್ಥಪೂರ್ಣವಾಗಿವೆ. ಅವುಗಳಲ್ಲಿ ಕಾಯಕ ತತ್ವನಿಷ್ಠೆ, ಸಮಯ ಪ್ರಜ್ಞೆಯಂತಹ ದಿಟ್ಟ ಗುಣಗಳನ್ನು ಕಾಣಬಹುದು. ಕಲ್ಯಾಣ ಕ್ರಾಂತಿಯ ಆಶಯಗಳನ್ನು ಹೊತ್ತ ನೈಜ ವಿಚಾರಗಳು ಇಲ್ಲಿವೆ. ಲಕ್ಕಮ್ಮ ಮಹಾಮನೆಯಲ್ಲಿ ಅಕ್ಕಿ, ಬೇಳೆ, ಕಾಳು ಹಸನು ಮಾಡುವ ಕಾರ್ಯದಲ್ಲಿ ನಿರತಳಾದ ಮಹಾ ಶರಣೆ. ಆಕೆಯ ವಚನಾಂಕಿತ ‘ಮಾರಯ್ಯ ಪ್ರಿಯ ಅಮರೇಶ್ವರ ಲಿಂಗ. ಇನ್ನು ಮಾರಯ್ಯನವರ ಲಭ್ಯ ವಚನಗಳು 32. ಅವರ ವಚನಾಂಕಿತ ‘ಅಮರೇಶ್ವರ ಲಿಂಗ.’ ಅವರು ಶ್ರದ್ಧೆ ನಿಷ್ಠೆಯಿಂದ ಕಲ್ಯಾಣದ ಮಹಾಮನೆಗೆ ಬರುವ ಕಾಳು, ಅಕ್ಕಿ, ಬೇಳೆ, ಬೆಲ್ಲ ಹಾಗೂ ಇತರೆ ಆಹಾರ ಮೂಟೆಗಳನ್ನು ಹೊತ್ತು ತಂದು ಉಗ್ರಾಣದಲ್ಲಿ ಇಳಿಸುವ ಕೂಲಿ ಕೆಲಸ ಮಾಡುತ್ತಿದ್ದರು. ನಿಜ ಅರ್ಥದಲ್ಲಿ ಕಾಯಕದ ಮಹತ್ವವನ್ನು ಶರಣ ಸಂಕುಲಕ್ಕೆ ತಿಳಿಸಿದ ಮೊದಲ ಪುರುಷ ಮಾರಯ್ಯ. ಅದನ್ನು ಈ ಕೆಳಗಿನ ವಚನದಲ್ಲಿ ಕಾಣಬಹುದು.

ಕಾಯಕದಲ್ಲಿ ನಿರತನಾದರೆ ಗುರು
ದರುಶನವಾದರೂ ಮರೆಯಬೇಕು;
ಲಿಂಗಪೂಜೆಯಾದರೂ ಮರೆಯಬೇಕು;
ಜಂಗಮ ಮುಂದಿದ್ದಡೂ ಹಂಗು ಹರಿಯಬೇಕು ;
ಕಾಯಕವೇ ಕೈಲಾಸವಾದ ಕಾರಣ,
ಅಮರೇಶ್ವರ ಲಿಂಗವಾಯಿತ್ತಾದಡೂ ಕಾಯಕದೊಳಗು !

ಮಾರಯ್ಯ ದಂಪತಿಗಳಿಬ್ಬರೂ ಕಾಯಕ ನಿಷ್ಠೆಯುಳ್ಳವರಾಗಿದ್ದರು. ಶರಣ ಸಂಸ್ಕೃತಿಯ ತತ್ವವಾದ ದುಡಿಮೆಗೆ ಪ್ರಾಶಸ್ತ್ಯ ನೀಡಿ “ಕಾಯಕವೇ ಕೈಲಾಸ” ಎಂಬ ಮಾತನ್ನು ನಡೆಯಿಸಿಕೊಂಡು ಬಂದ ಆದರ್ಶವಾದಿಗಳು. ಅವರು ಬರೆದ ಈ ವಚನವು ಕಾಯಕದ ಬಗ್ಗೆ ಬರೆದ ಶಾಸನದಂತಿದೆ. ಕಾಯಕ ಮಾಡುವಾಗ ಒಮ್ಮೊಮ್ಮೆ ಗುರುದರುಶನವಾಗಲಿ, ಲಿಂಗಪೂಜೆಯ ಸಮಯವಾಗಿರಲಿ ಅಥವಾ ಜಂಗಮ ಮುಂದೆ ಬಂದು ನಿಂತರೂ ನಾವು ನಮ್ಮ ಕಾಯಕ ಮಾಡಬೇಕೆ ವಿನಃ ಅದನ್ನು ಬಿಟ್ಟು ಬಂದವರನ್ನು ಉಪಚರಿಸುವತ್ತ ಗಮನ ಕೊಟ್ಟು, ಎದುರಿಗೆ ಬಂದವರನ್ನು ಮೆಚ್ಚಿಸುವ ಸಲುವಾಗಿ ಕಾಯಕವನ್ನು ಅರ್ಧದಲ್ಲಿಯೇ ಬಿಡಬಾರದು. ಕಾಯಕದಲ್ಲಿ ಮಗ್ನನಾದವನ ಮನಸ್ಸು ಏಕಾಗ್ರತೆಯಲ್ಲಿರಬೇಕು. ಚಿತ್ತ ಚಂಚಲವಾಗಬಾರದು. ಮಾಡುವ ಕಾಯಕವನ್ನು ನಿರ್ವಂಚನೆಯಿಂದ ಮಾಡಿದಾಗಲೇ ಅದು ಕೈಲಾಸವಾಗುತ್ತದೆ. ಇದರ ಹೊರತು ಬೇರೆ ಕೈಲಾಸವಿಲ್ಲ ಎನ್ನುತ್ತಾರೆ ಮಾರಯ್ಯ.

ಆಯ್ದಕ್ಕಿ ಲಕ್ಕಮ್ಮ ಮತ್ತು ಮಾರಯ್ಯ ಮಹಾಮನೆಯಲ್ಲಿ ಸತ್ಯ ಶುದ್ಧ ಕಾಯಕ ಮಾಡುತ್ತಿದ್ದರು ಎನ್ನುವುದಕ್ಕೆ ಲಕ್ಕಮ್ಮನ ಈ ವಚನವು ಸ್ಪಷ್ಟ ಉದಾಹರಣೆಯಾಗುತ್ತದೆ.

ಆಯಿದೆಹೆನೆಂಬ ಕಾಯಕದ ಅರಿಕೆ ಹಿಂಗಿತೆ?
ನಾ ಮಾಡಿದೆಹೆನೆಂಬ ತವಕ ಹಿಂಗಿತೆ?
ಉಭಯದ ಕೈಕೂಲಿ ಹಿಂಗಿ,
ಮಾರಯ್ಯಪ್ರಿಯ ಅಮರೇಶ್ವರ ಲಿಂಗಕ್ಕೆ ಆಲಸಿಕೆಯಾಯಿತು.

ಹೀಗಿರಲಾಗಿ ಒಮ್ಮೆ ಬಸವಣ್ಣನಿಗೆ, ಮಾರಯ್ಯ ದಂಪತಿಗಳ ನಿಷ್ಕಲ್ಮಶ ಕಾಯಕ ಭಕ್ತಿಯನ್ನು ಜಗತ್ತಿಗೆ ತೋರಿಸಬೇಕು ಎನ್ನಿಸಿತು. ಒಂದು ದಿನ ಒಂದಷ್ಟು ಅಕ್ಕಿಯನ್ನು ಅಂಗಳದಲ್ಲಿ ಚೆಲ್ಲಿಸಿ ಏನೂ ತಿಳಿಯದವನಂತೆ ಬಸವಣ್ಣ ಸುಮ್ಮನಿದ್ದನು. ಎಂದಿನಂತೆ ಕೆಲಸ ಮುಗಿಸಿ ಬಂದ ಮಾರಯ್ಯ ಅಂಗಳವನ್ನೆಲ್ಲಾ ಗುಡಿಸಿ, ಚೆಲ್ಲಿದ್ದ ಅಕ್ಕಿಯನ್ನೆಲ್ಲಾ ಆರಿಸಿ ಮನೆಗೆ ತೆಗೆದುಕೊಂಡು ಹೋದನು. ಎಂದಿಗಿಂತ ಅಕ್ಕಿ ತುಸು ಹೆಚ್ಚೇ ಇರುವುದು ಲಕ್ಕಮ್ಮನ ಗಮನಕ್ಕೆ ಬಂತು. ಅದರಿಂದ ಅವಳಿಗೆ ಖುಷಿಯಾಗದೇ ಗಂಡನ ಮೇಲೆ ಕೋಪವುಂಟಾಯಿತು. ಲಕ್ಕಮ್ಮ ಮುಂದುವರೆದು ‘ಆಸೆ ಎಂಬುದು ರಾಜರಿಗೆ ಸರಿ. ಶಿವಭಕ್ತರಿಗೇಕೆ ಬೇಕು? ಇಷ್ಟೊಂದು ಅಕ್ಕಿಯಾಸೆ ನಮಗೇಕೆ? ಇದನ್ನು ಶಿವನು ಒಪ್ಪುವುದಿಲ್ಲ. ಇದರಿಂದ ಮಾಡಿದ ಪ್ರಸಾದವನ್ನೂ ಶಿವನು ಒಪ್ಪುವುದಿಲ್ಲ ಎಂದು ಹೇಳುತ್ತಾಳೆ:

ಆಶೆಯೆಂಬುದು ಅರಸಿಂಗಲ್ಲದೆ
ಶಿವ ಭಕ್ತರಿಗುಂಟೆ ಅಯ್ಯಾ?
ರೋಷವೆಂಬುದು ಯಮದೂತರಿಗಲ್ಲದೆ ,
ಅಜಾತರಿಗುಂಟೆ ಅಯ್ಯಾ?
ಈಸಕ್ಕಿಯಾಸೆ ನಿಮಗೇಕೆ ಈಶ್ವರನೊಪ್ಪ
ಮಾರಯ್ಯಪ್ರಿಯ ಅಮರೇಶ್ವರ ಲಿಂಗಕ್ಕೆ ದೂರ ಮಾರಯ್ಯ .

ಇದಕ್ಕೆ ಮಾರಯ್ಯ ಪ್ರತಿರೋಧ ತೋರಿಸಿ ಇದು ತನ್ನ ಶ್ರಮದ ಗಳಿಕೆಯೆನ್ನುತ್ತಾನೆ. ಕುಪಿತಗೊಂಡ ಲಕ್ಕಮ್ಮನಿಗೆ ಬಸವಣ್ಣನ ಮೇಲೆ ಅನುಮಾನ ಬಂದು, ಇದು ಬಸವನ ಕೆಲಸವೇ ಎಂಬುದು ಅವಳ ಮನಸ್ಸಿಗೆ ಹೊಳೆದು ಹೋಗಿತ್ತು. ಗಂಡನಿಗೆ ‘ಒಮ್ಮನವ ಮೀರಿ ಇಮ್ಮನದಲ್ಲಿ ತಂದಿರಿ, ಇದು ನಿಮ್ಮ ಮನವೋ, ಬಸವಣ್ಣನ ಅನುಮಾನದ ಚಿತ್ತವೋ?’ ಎಂದು ಪ್ರಶ್ನಿಸುತ್ತಾಳೆ. ಗಂಡನಿಗೂ ಇದು ಬಸವನ ಕೆಲಸ ಎಂಬುದು ಮನವರಿಕೆಯಾಗಿ ಬಸವಣ್ಣ ನಮ್ಮನ್ನು ಪರೀಕ್ಷಿಸಲೆಂದೇ ಈ ಕೆಲಸ ಮಾಡಿದ್ದಾನೆ ಎಂಬುದೂ ಗೊತ್ತಾಗುತ್ತದೆ. "ನಮಗೆ ನಿತ್ಯ ದೊರೆಯುತ್ತಿದ್ದಷ್ಟೇ ಅಕ್ಕಿ ಸಾಕು. ತೆಗೆದುಕೊಂಡು ಹೋಗಿ ಇದನ್ನು ಅಲ್ಲಿಯೇ ಚೆಲ್ಲಿ ಬನ್ನಿ" ಎಂಬ ಹೆಂಡತಿಯ ಯೋಚನೆಗೆ ತಲೆದೂಗಿದ ಮಾರಯ್ಯ ಹೆಚ್ಚಿನ ಅಕ್ಕಿಯೊಂದಿಗೆ ಹೊರಟುನಿಂತ. ಆಗ ಲಕ್ಕಮ್ಮನಿಗೆ ‘ತಮ್ಮನ್ನು ತೂಗಬೇಕೆನಿಸಿದ ಬಸವಣ್ಣನನ್ನೇ ಮನೆಗೆ ಪ್ರಸಾದಕ್ಕೆ ಕರೆಯಬೇಕೆನ್ನಿಸಿ ಗಂಡನಿಗೆ ‘ಬಸವನಿಗೆ ಹೇಳಿ. ಬೇಕಾದರೆ ತನ್ನ ಸುತ್ತಣ ಜಂಗಮರನ್ನೆಲ್ಲಾ ಕರೆದುಕೊಂಡು ನಮ್ಮ ಮನೆಗೆ ಊಟಕ್ಕೆ ಬರಲಿ’ ಎಂದು ಆಹ್ವಾನ ಕೊಡಲು ಹೇಳಿದಳು.

ಒಮ್ಮನವ ಮೀರಿ ಇಮ್ಮನದಲ್ಲಿ ತಂದಿರಿ,
ಇದು ನಿಮ್ಮ ಮನವೊ, ಬಸವಣ್ಣನನ ಅನುಮಾನದ ಚಿತ್ತವೋ ?
ಈ ಮಾತು ಮಾರಯ್ಯಪ್ರಿಯ ಅಮರೇಶ್ವರ ಲಿಂಗಕ್ಕೆ ಸಲ್ಲದ ಬೋನ.
ಅಲ್ಲಿಯೇ ಸುರಿದು ಬನ್ನಿರಿ ಮಾರಯ್ಯ. 

ಹೀಗೆ ಬಸವಣ್ಣನವರ ಮನೆಗೆ ಬಂದು ಮಾರಯ್ಯ ಅಕ್ಕಿಯನ್ನು ಹಿಂತಿರುಗಿಸುತ್ತಾರೆ. ಬಸವಣ್ಣನವರು ವ್ಯಾಕುಲಗೊಂಡು ಮರಳಿ ಒಯ್ಯಲು ವಿನಂತಿಸುತ್ತಾರೆ. ಆಗ ಮಾರಯ್ಯ-

ಎನಗೆ ಮನೆ ಇಲ್ಲ , ಎನಗೆ ಧನವಿಲ್ಲ ,
ಮಾಡುವದೇನು? ನೀಡುವದೇನು?
ಮನೆ ಧನ ಸಕಲ ಸಂಪದ ಸೌಖ್ಯವುಳ್ಳ
ನಿಮ್ಮ ಶರಣರ ತಪ್ಪಲಕ್ಕಿಯ ತಂದು,
ಎನ್ನೊಡಲ ಹೊರೆವೇನಾಗಿ,
ಅಮರೇಶ್ವರ ಲಿಂಗಕ್ಕೆ ನೀಡುವ ಬಯಕೆ ಎನಗಿಲ್ಲ ಸಂಗನ ಬಸವಣ್ಣಾ.

ಪ್ರಾಯಶಃ ಒಬ್ಬ ದಿನಗೂಲಿ ಶರಣ ಮಾರಯ್ಯ ಅಂದಿನ ಬಹುದೊಡ್ಡ ರಾಜ್ಯದ ಪ್ರಧಾನ ಮಂತ್ರಿ ಪದವಿಯಲ್ಲಿದ್ದ ಬಸವಣ್ಣನವರಿಗೆ ಈ ರೀತಿಯಾಗಿ ಪ್ರಶ್ನಿಸಿ ತಾನು ಗಳಿಸಿದ ಅಗತ್ಯಕ್ಕಿಂತ ಹೆಚ್ಚಿನ ಅಕ್ಕಿಯನ್ನು ಹಿಂದಿರುಗಿಸಿದ ಅತ್ಯಂತ ವಿರಳ ಘಟನೆ ನೋಡಿದರೆ ಕಾಯಕ ಮತ್ತು ದಾಸೋಹಕ್ಕೆ ಎಷ್ಟು ಮಹತ್ವವನ್ನು ಶರಣರು ನೀಡಿದ್ದರು ಎಂದು ಗೊತ್ತಾಗುತ್ತದೆ.

ಬಸವಣ್ಣನವರು ಈ ವಿಷಯವನ್ನು ಅನುಭವ ಮಂಟಪಕ್ಕೆ ಒಯ್ಯುತ್ತಾರೆ. ಕಾರಣ ದುಡಿದ ಶ್ರಮಕ್ಕೆ ತಕ್ಕ ಆದಾಯವನ್ನು ನೀಡಿ ಆದಾಯವಾದ ಅಕ್ಕಿಯನ್ನು ಕಳುಹಿಸಿ ಕೊಟ್ಟರೆ ಅದನ್ನು ವಿನಮ್ರವಾಗಿ ನಿರಾಕರಿಸುವ ಚಿಂತನೆ ಮಾಡಿದ ದಂಪತಿಗಳ ನಿಲುವನ್ನು ಬಸವಣ್ಣನವರು ಅನುಭವ ಮಂಟಪದಲ್ಲಿ ಚರ್ಚೆಗೆ ಅನುವು ಮಾಡಿಕೊಡುತ್ತಾರೆ. ಅಲ್ಲಿ ಶರಣರು ಮತ್ತು ಜ್ಞಾನಿಗಳು ಅಲ್ಲಮರ ಅಧ್ಯಕ್ಷತೆಯಲ್ಲಿ ಚರ್ಚೆ ನಡೆಸುತ್ತಾರೆ. ಅಲ್ಲಮರು ಮಾರಯ್ಯನವರಿಗೆ ಪ್ರಶ್ನಿಸಲು ಅವರು ಈ ರೀತಿ ಉತ್ತರಿಸುತ್ತಾರೆ.

ಗೆಜ್ಜಲು ಮನೆ ಮಾಡಿ ಸರ್ಪನಗಿಂಬಾದಂತೆ
ನಾನತ್ತಣ ದ್ರವ್ಯವ ತಂದು ಇತ್ತ ಮಾಡಿದಡೆ .
ನನಗಿನ್ನೆತ್ತಣ ಮುಕ್ತಿ ಅಮರೇಶ್ವರ ಲಿಂಗ !


ಗೆದ್ದಲು ಮನೆಯ ಮಾಡಿ ಸರ್ಪನಿಗೆ ಬಿಟ್ಟು ಕೊಟ್ಟಂತೆ ತಾನು ಸಮಾಜದಲ್ಲಿನ ಪ್ರತಿಯೊಬ್ಬರ ಆದಾಯದ ಕಣಕಣವನ್ನು ತಂದು ಪ್ರಸಾದವ ಮಾಡಿದರೆ ನನಗೆ ಮುಕ್ತಿ ಸಿಗಲು ಸಾಧ್ಯವೆ? ಎಂದು ನಯವಾಗಿ ತಮ್ಮನ್ನು ಸಮರ್ಥಿಸಿಕೊಳ್ಳುತ್ತಾರೆ. ತನ್ನ ನಿಲುವನ್ನು ತಿಳಿಸಲು ಅಲ್ಲಮರು ಲಕ್ಕಮ್ಮನನ್ನು ಕೇಳುತ್ತಾರೆ. ಆಗ ಲಕ್ಕಮ್ಮ-

ಗರ್ವದಿಂದ ಮಾಡಿದ ಭಕ್ತಿ ದ್ರವ್ಯದ ಕೇಡು:
ನಡೆಯಿಲ್ಲದ ನುಡಿ ಅರಿವಿಂಗೆ ಹಾನಿ :
ಕೊಡದೆ ತ್ಯಾಗಿ ಎನಿಸಿಕೊಂಬುದು ಮುಡಿಯಿಲ್ಲದ ಶೃಂಗಾರ :
ಧೃಢವಿಲ್ಲದ ಭಕ್ತಿ ಆದಿ ಒಡೆದ ಕುಂಭದಲ್ಲಿ ಸುಜಲವ ತುಂಬಿದಂತೆ
ಮಾರಯ್ಯ ಪ್ರಿಯ ಅಮರೇಶ್ವರ ಲಿಂಗವ ಮುಟ್ಟದ ಭಕ್ತಿ.


ಗರ್ವದಿಂದ ಮಾಡಿದ ಭಕ್ತಿ ದ್ರವ್ಯಕ್ಕೆ ಕೇಡು; ಆಸ್ತಿಗೆ ಹಾನಿ, ನಡೆಯಿಲ್ಲದ ನುಡಿಯು ಅರಿವಿನ ಹಾನಿ, ಕೊಡದೆ ತ್ಯಾಗಿ ಎನ್ನಿಸಿಕೊಳ್ಳುವವ ಮುಡಿಯಿಲ್ಲದೆ ಶೃಂಗಾರವ ಮಾಡಿಕೊಂಬಂತೆ ಇಂತಹ ದೃಢವಿಲ್ಲದವನ ಭಕ್ತಿಯು ಒಡೆದ ಮಡಿಕೆಯೊಳಗೆ ಸುಜಲವ ಹಾಕಿದಂತೆ ಎಂದು ವ್ಯಂಗ್ಯವಾಡುತ್ತಾಳೆ.

ಮುಂದುವರೆದು ಲಕ್ಕಮ್ಮ ಹೀಗೆ ವಾದಿಸುತ್ತಾಳೆ.

ಭಕ್ತನಿಗೆ ಬಡತನವುಂಟೆ? ನಿತ್ಯಂಗೆ ಮರಣವುಂಟೆ?
ಭಕ್ತರು ಬಡವರೆಂದು ಮತ್ತೊಂದ ಕೊಟ್ಟೆಹೆನೆಂದಡೆ ,
ಮಾರಯ್ಯ ಪ್ರಿಯ ಅಮರೇಶ್ವರ ಲಿಂಗವು ಸತ್ತಂದಿಗಲ್ಲದೆ ಬಡತನವಿಲ್ಲ.


ಭಕ್ತನು ಬಡವನಾಗುವುದಿಲ್ಲ, ನಿತ್ಯ ಸಂಘರ್ಷಕ್ಕಿಳಿಯುವವ ಸಾಯುವುದಿಲ್ಲ. ಭಕ್ತರು ಬಡವರೆಂದು, ಮತ್ತೊಂದು ವಸ್ತು ಕೊಟ್ಟಡೆ ಅದು ವ್ಯಕ್ತಿಯ ಸಾವು ಎಂದು ಉತ್ತರಿಸುತ್ತಾಳೆ. “ಕಾಯಕವೇ ಕೈಲಾಸವಾದ ಕಾರಣ ಮಾರಯ್ಯನವರು ತಾವು ಮಾಡಿದ ಕೂಲಿಗೆ ತಮ್ಮ ಪಾಲಿನ ಆದಾಯವನ್ನು ಪಡೆಯಲೇ ಬೇಕು” ಎಂದು ಬಸವಣ್ಣನವರು ಒತ್ತಾಯಿಸುತ್ತಾರೆ.

ಆಗ ಲಕ್ಕಮ್ಮ- “ಮಾಡಿ ನೀಡಿ ಹೋದೆನೆಂಬಾಗ ಕೈಲಾಸವೇನು ಕೈಕೂಲಿಯೆ?” ಎಂದು ಪ್ರಶ್ನಿಸುತ್ತಾಳೆ. ಸಮಾಜವು ಒಪ್ಪದ ಹೆಚ್ಚಿನ ಹಣ ಅಥವಾ ದವಸ ಧಾನ್ಯ ಪಡೆಯುವದು ಘೋರ ಪಾಪವೆಂದು ಹೇಳುತ್ತಲೇ ಕೈಲಾಸವೇನು ಕೈಕೂಲಿ ಮಾಡಿ ಸಂಪಾದಿಸಲು ಸಾಧ್ಯವೇ? ಸತ್ಯ ಶುದ್ಧವಾದ ಕಾಯಕದಿಂದ ಮಾಡಿ ಅಗತ್ಯದಷ್ಟೇ ಪಡೆದು ಸಮಾಜ ಸೇವೆ ಮಾಡಬೇಕೆಂಬುದು ಲಕ್ಕಮ್ಮನ ಪ್ರಬಲವಾದ ಮಂಡನೆ. ಅದೇ ತತ್ವವನ್ನು ಮಾರಯ್ಯನವರು ಪ್ರತಿಪಾದಿಸುತ್ತಾರೆ:

ನೇಮವ ಮಾಡಿಕೊಂಡು ಭಕ್ತರ ಭವನಂಗಳ ಹೊಕ್ಕು
ಕಾಯಕ ಸತ್ತು, ಹಣ ಹೊನ್ನ ಬೇಡೆಹೆನೆಂಬುದು ಕಷ್ಟವಲ್ಲದೆ ಸದ್ಭಕ್ತನಿಗೆ .
ಆ ಗುಣ ಅಮರೇಶ್ವರ ಲಿಂಗಕ್ಕೆ ದೂರ.


ಒಂದು ವ್ರತ ಆಚರಣೆ ನೇಮವ ಮಾಡಿಕೊಂಡು ಅದನ್ನು ಈಡೇರಿಸಲು ಭಕ್ತರು ಭವನಂಗಳ ಹೊಕ್ಕು, ಕಾಯಕ ಕೊಂದು, ಹಣ ಹೊನ್ನ ಬೇಡೆಹೆನೆಂಬುದು ಕಷ್ಟವಲ್ಲದೆ ಸದ್ಭಕ್ತನಿಗೆ; ಇಂತಹ ಗುಣ ಅಮರೇಶ್ವರ ಲಿಂಗಕ್ಕೆ ದೂರ, ಸಮಾಜದಿಂದ ದೂರವಾಗುವ ಸಂದರ್ಭವೆಂದು ಹೇಳುತ್ತಾರೆ. ಇಂತಹ ಸುದೀರ್ಘ ಸಮಾಲೋಚನೆ ಇನ್ನೂ ಜೀವಂತವಿದ್ದಾಗಲೆ ಲಕ್ಕಮ್ಮ ತನ್ನ ಸಮಯ ಪ್ರಜ್ಞೆ ಮೆರೆಯುವ ಪ್ರಸಂಗವನ್ನು ತೋರುತ್ತಾಳೆ:

ಕಾಯಕವು ನಿಂದಿತ್ತು ಹೋಗಯ್ಯಾ ಎನ್ನಾಳ್ದನೆ.
ಭಾವ ಶುದ್ಧವಾಗಿ ಮಹಾ ಶರಣ ತಿಪ್ಪೆಯ ತಪ್ಪಲ ಅಕ್ಕಿಯ ತಂದು
ನಿಶ್ಚೈಸಿ ಮಾಡಬೇಕು ಮಾರಯ್ಯ ಪ್ರಿಯ ಅಮರೇಶ್ವರ ಲಿಂಗಕ್ಕೆ.
ಬೇಗ ಹೋಗು ಮಾರಯ್ಯ.

ಅನುಭವ ಮಂಟಪದಲ್ಲಿ ವೈಚಾರಿಕ ಚರ್ಚೆ ಗಂಭೀರವಾಗಿ ನಡೆದಾಗ ಲಕ್ಕಮ್ಮ, ತನ್ನ ಪತಿ ಮಾರಯ್ಯನವರಿಗೆ ಕಾಯಕದ ವೇಳೆಯ ಬಗ್ಗೆ ಜ್ಞಾಪಿಸುತ್ತಾಳೆ. ಇಂತಹ ವ್ಯರ್ಥ ಚರ್ಚೆ ಶ್ರಮಿಕರಿಗೆ ಸಲ್ಲದು. ಕಾಯಕ ಜೀವಿಗಳಾದ ನಾವು ಮೊದಲು ಕಾಯಕಕ್ಕೆ ಆದ್ಯತೆ ಕೊಡಬೇಕೆಂದು, ಕಾಯಕಕ್ಕೆ ನಡೆ ಎಂದು ಪತಿಯನ್ನು ಭಿನ್ನವಿಸುತ್ತಾಳೆ.

ಬಸವಣ್ಣ ಚೆನ್ನ ಬಸವಣ್ಣ ಪ್ರಭುದೇವ ಮೊದಲಾದ
ನೇಮ ನಿತ್ಯ ಕೃತ್ಯ ಸಕಲ ಸಮೂಹ ನಿತ್ಯ ನೇಮವ
ಜಂಗಮ ಭಕ್ತರು ಗಣಂಗಳು ಮುಂತಾದ ಸಮೂಹ ಪದಕ್ಕೆ
ನೈವೇದ್ಯಕ್ಕೆ ವೇಳೆಯೆಂದು ಹೇಳಿ ಬಾರಯ್ಯ ,
ಅಮರೇಶ್ವರಲಿಂಗದ ಮನೆಯಲ್ಲಿ ಆದಿತೆಂದು.

ಶರಣ ಸಮೂಹವನ್ನು ಪ್ರಸಾದಕ್ಕೆ ಆಮಂತ್ರಿಸುತ್ತಾರೆ ಕಾಯಕ ದಂಪತಿಗಳು. ಬಸವಣ್ಣ, ಚೆನ್ನಬಸವಣ್ಣ, ಪ್ರಭುದೇವ ಮೊದಲಾದವರಿಗೆ ತಮ್ಮ ಗುಡಿಸಲಿನಲ್ಲಿ ಪ್ರಸಾದಕ್ಕೆ ಕರೆದು ಬರಲು ಲಕ್ಕಮ್ಮ ಗಂಡನಿಗೆ ಹೇಳುವದಲ್ಲದೆ ಪ್ರಸಾದದ ಸ್ಥಳವು ಅಮರೇಶ್ವರಲಿಂಗದ ಮನೆಯಲ್ಲಿ ಆದಿತೆಂದು ಹೇಳುತ್ತಾಳೆ. ಇಂತಹ ಪ್ರಸಂಗ ಕಲ್ಯಾಣದಲ್ಲಿ ನಡೆದಿದೆಯೆಂದರೆ ಅದಕ್ಕೆ ಕಾರಣ ಬಸವಣ್ಣನವರು ಮಹಿಳೆಯರಿಗೆ ಬಡವರಿಗೆ ದಲಿತರಿಗೆ ಕೊಟ್ಟ ಮುಕ್ತ ಅವಕಾಶ ಸಮಾನತೆ ಮತ್ತು ವೃತ್ತಿ ಗೌರವ.

ಲಕ್ಕಮ್ಮನ ಪವಾಡ/ಶಿವನಿಷ್ಠೆ:
ಲಕ್ಕಮ್ಮ 'ಹಿಡಿಯಕ್ಕಿ' ಯಿಂದಲೇ ಒಂದು ಲಕ್ಷದ ತೊಂಬತ್ತಾರು ಸಾವಿರದ ಜಂಗಮರಿಗೆ ಊಟ ನೀಡಿ ಬಸವಣ್ಣನವರಿಂದ "ಸೈ"ಎನಿಸಿಕೊಂಡವಳು. ಶರಣರೆಲ್ಲ ಆಕೆಯ ಪವಾಡಕ್ಕೆ ಮೂಕ ವಿಸ್ಮಿತ ರಾಗಿ 'ಭಕ್ತಿಯ ಮುಂದೆ ಎಲ್ಲವೂ ಮಿಥ್ಯ'ವೆಂದು ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ಒಮ್ಮೆ ಸಾಕ್ಷಾತ್ ಶಿವನೇ ಜಂಗಮ ರೂಪದಲ್ಲಿ ಬಂದು, ಅಸಾಧ್ಯ ಚಳಿಯನ್ನೂ ಸೃಷ್ಠಿಸಿ ನಡುಗುತ್ತಾ, ಶಿವಭಕ್ತರಾದ ಇವರಿಬ್ಬರು ಉಟ್ಟ ಬಟ್ಟೆಯೇ ಬೇಕೆಂದು ಕೇಳಿ ತೊಟ್ಟುಕೊಂಡು ಅವರ ಭಕ್ತಿಗೆ ಮೆಚ್ಚುಗೆ ಸೂಚಿಸಿದನಂತೆ. ಆಯ್ದಕ್ಕಿ ಲಕ್ಕಮ್ಮನ ವಚನಗಳಲ್ಲಿ ಆತ್ಮೋದ್ಧಾರ, ಲೋಕೋದ್ಧಾರ ಗಳೆಂಬ ದ್ವಿಮುಖ ಆಶಯ, ಕಾಯಕತತ್ವ, ನಿಶ್ಚಲ ನಿಲುವು, ಜ್ಞಾನದ ಅರಿವು, ಸಮತಾಭಾವ, ಅತಿಯಾಸೆ ಒಳ್ಳೆಯದಲ್ಲವೆಂಬ ನಿಲುವು,

‘ಮನಶುದ್ಧವಿಲ್ಲದವಂಗೆ ದ್ರವ್ಯದ ಬಡತನವಲ್ಲದೆ
ಚಿತ್ತ ಶುದ್ಧದಲ್ಲಿ ಕಾಯಕವ ಮಾಡುವಲ್ಲಿ
ಸದ್ಭಕ್ತಂಗೆ ಎತ್ತ ನೋಡಿದಡತ್ತ ಲಕ್ಷ್ಮಿ ತಾನಾಗಿಪ್ಪಳು
ಮಾರಯ್ಯ ಪ್ರಿಯ ಅಮರೇಶ್ವರ ಲಿಂಗದ ಸೇವೆಯುಳ್ಳನ್ನಕ್ಕರ.’

ಲಕ್ಕಮ್ಮನು ‘ಕಾಯಕಯುಕ್ತ ಭಕ್ತಿ’ಯ ಸಿದ್ಧಾಂತದ ಬಗ್ಗೆ ಮಾತನಾಡುತ್ತಿದ್ದಾಳೆ. ಭಕ್ತಿ ಯಿಲ್ಲದ ಕಾಯಕ ಮತ್ತು ಕಾಯಕವಿಲ್ಲದ ಭಕ್ತಿ ಅವಳಿಗೆ ಅರ್ಥಹೀನ. ಕಾಯಕದಿಂದ ಮಾತ್ರವೇ ಭಕ್ತಿಗೆ ಶಕ್ತಿ ಪ್ರಾಪ್ತವಾಗುತ್ತದೆ. ಕಾಯಕವಿಲ್ಲದವನ ಭಕ್ತಿ ವ್ಯರ್ಥವೆಂಬ ಮಾತನ್ನು ಲಕ್ಕಮ್ಮ ಆಡುತ್ತಾಳೆ. ವಚನ ಸಂಸ್ಕೃತಿಯು ಚಿತ್ತಶುದ್ಧ ಕಾಯಕದ ಬಗ್ಗೆ ಮಾತನಾಡುತ್ತದೆ. ಅವಳ ಕೆಳಗಿನ ವಚನವು ಇದಕ್ಕೆ ಸಾಕ್ಷಿಯಾಗಿದೆ.

‘ಪೂಜೆಯುಳ್ಳನ್ನಕ್ಕ ಪುಣ್ಯದ ಗೊತ್ತು ಕಾಣ ಬಂದಿತ್ತು
ಮಾಟವುಳ್ಳನ್ನಕ್ಕ ಮಹಾ ಪ್ರಮಥರ ಭಾಷೆ ದೊರೆಕೊಂಡಿತ್ತು
ಮಾಟವಿಲ್ಲದವನ ಭಕ್ತಿ ಹಾಳೂರ ವಂಕಕ್ಕೆ ಕೋಲ ಹಿಡಿದಂತಾಯಿತ್ತು
ಮಾಡುವಲ್ಲಿ ಉಭಯವಳಿದು ಮಾಡಬಲ್ಲಡೆ
ಮಾರಯ್ಯ ಪ್ರಿಯ ಅಮರೇಶ್ವರ ಲಿಂಗವ ಕೂಡುವ ಕೂಟ.

ಅತಿಯಾಸೆ ಇಲ್ಲದಿದ್ದರೆ ಮನಸ್ಸು ಯಾವಾಗಲು ಶ್ರೀಮಂತಿಕೆಯನ್ನು ಅನುಭವಿಸುತ್ತದೆ. ಬೆಟ್ಟ ಬೃಹತ್ತಾಗಿರಬಹುದು, ಉಳಿಯ ಮೊನೆಗೆ ಬಡತನವಿದ್ದೀತೆ?. ಸತ್ಪಾತ್ರನನ್ನು ದುಷ್ಕರ್ಮಿಗಳು ಕಾಡುವುದಿಲ್ಲ. ಘನ ಭಕ್ತರಿಗೆ ಬಡತನವಿಲ್ಲ. ಮಾರಯ್ಯ ಪ್ರಿಯ ಅಮಲೇಶ್ವರ ಲಿಂಗವನ್ನು ನಂಬಿರುವಾಗ ಅನ್ಯರ ಹಂಗು ನಮಗಿಲ್ಲಯೆನ್ನುವ ವಚನ:

ಅಂಗಕ್ಕೆ ಬಡತನವಲ್ಲದೆ ಮನಕ್ಕೆ ಬಡತನವುಂಟೆ ?
ಬೆಟ್ಟ ಬಲ್ಲಿತ್ತೆಂದಡೆ, ಉಳಿಯ ಮೊನೆಯಲ್ಲಿ ಬಡತನವಿದ್ದಡೆ ಒಡೆಯದೆ ?
ಘನಶಿವಭಕ್ತರಿಗೆ ಬಡತನವಿಲ್ಲ ಸತ್ಯರಿಗೆ ದುಷ್ಕರ್ಮವಿಲ್ಲ.
ಎನಗೆ ಮಾರಯ್ಯಪ್ರಿಯ ಅಮರೇಶ್ವರಲಿಂಗವುಳ್ಳನ್ನಕ್ಕ ಆರ ಹಂಗಿಲ್ಲ ಮಾರಯ್ಯಾ.
ಮೂಲ: ಆನ್ಲೈನ್ ಹಾಗೂ ಇತರ ಮೂಲಗಳಿಂದ ಸಂಗ್ರಹಿ ರಚಿಸಲಾಗಿದೆ

No comments:

Post a Comment

ಪುತ್ತೂರ್ ಅಜ್ಜ

  ರಾಮಚಂದ್ರ ಭಟ್ರವರ ಹೆತ್ತವರು   ರಾಮೇಶ್ವರಕ್ಕೆ ತೀರ್ಥಯಾತ್ರೆಗೆ ತೆರಳಿ ಬಂದ   ತರುವಾಯ 1916 ರ ಜೂನ್ 15 ರಂದು ನೆಟ್ಟಾರಿನಲ್ಲಿ   ರಾಮಚಂದ್ರರ ಜನನವಾಯಿತು ...