Followers

Wednesday, August 14, 2019

ಅಲ್ಲಮಪ್ರಭು


12ನೇ ಶತಮಾನ ಭಾರತದ ಇತಿಹಾಸದಲ್ಲಿ ಧಾರ್ಮಿಕ ಸುವರ್ಣಕಾಲ. ಕರ್ನಾಟಕದ ಮಟ್ಟಿಗೆ ವಿಚಾರಕ್ರಾಂತಿಗೆ, ತನ್ಮೂಲಕ ಸಾಮಾಜಿಕ, ಸಾಹಿತ್ಯಿಕ ಕ್ರಾಂತಿ ವಿಜೃಂಭಿಸಿದ ಕಾಲ. ಕನ್ನಡನಾಡಿನ ಕೇಂದ್ರ ಕಲ್ಯಾಣದಲ್ಲಿ ರಾಜ್ಯವಾಳುತ್ತಿದ್ದ ಬಿಜ್ಜಳ ರಾಜನ ಮಂತ್ರಿಯಾಗಿ ದೇಶವನ್ನು ಸುಭಿಕ್ಷದೆಡೆಗೆ ಕೊಂಡೊಯ್ದ ಭಗವಾನ್ ಬಸವೇಶ್ವರರು ಕ್ರಾಂತಿಯ ಕೇಂದ್ರ ಬಿಂದು. ಕ್ರಾಂತಿ ದೀಪಕ್ಕೆ ತಾತ್ವಿಕ ನೆಲಗಟ್ಟನ್ನು ನೀಡಿ ಬೆಳಗಿಸಿದವರು ಅನುಪಮ ಚರಿತ ಅಲ್ಲಮಪ್ರಭುದೇವರು. ಬಸವಣ್ಣನವರು ಪ್ರತಿಪಾದಿಸಿದ ಸತ್ಯಶುದ್ಧ ಕಾಯಕ, ದಾಸೋಹಗಳು ಕಲ್ಯಾಣ ರಾಜ್ಯದ ಕೀರ್ತಿಯನ್ನು ನಾಡಿನಾದ್ಯಂತ ಬಿತ್ತರಿಸಿದವು. ಕಲ್ಯಾಣ ರಾಜ್ಯದಲ್ಲಿ ಆರ್ಥಿಕ ಕ್ರಾಂತಿಗೆ ಕಾರಣವಾಯಿತು. ಮೇಲುವರ್ಗದ, ಪುರೋಹಿತಶಾಹಿಗಳ ಸ್ವತ್ತಾಗಿದ್ದ ದೇವರು, ದೇವಾಲಯಗಳನ್ನು ಜನ ಸಾಮಾನ್ಯರ ಬಳಿಗೆ ತಂದು, ಇಷ್ಟ ಲಿಂಗಧಾರಣೆ ಮೂಲಕ ದೇಹವನ್ನೇ ದೇವಾಲಯವನ್ನಾಗಿಸಿದವರು ಭಗವಾನ್ ಬಸವೇಶ್ವರರು. ತಾವೇ ಏರಬಹುದಾಗಿದ್ದ ಶೂನ್ಯಪೀಠವನ್ನು, ಕೆಳವರ್ಗದಿಂದ ಬಂದ ಮದ್ದಳೆಕಾಯಕದ ಅಲ್ಲಮಪ್ರಭು ದೇವರನ್ನು ಪೀಠಾಧ್ಯಕ್ಷರನ್ನಾಗಿಸಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ.
ಅಲ್ಲಮಪ್ರಭು ೧೨ನೆಯ ಶತಮಾನದ ವಚನಕಾರರಲ್ಲಿ ಪ್ರಸಿದ್ಧನಾದವರು. ಅತ್ಯಂತ ನೇರ ನಿಷ್ಠುರವಾದಿ. ಅನೇಕ ಶಿವಶರಣ, ಶಿವಶರಣೆಯರಿಗೆ ಭಕ್ತಿ-ವೈರಾಗ್ಯವನ್ನು ಬೋಧಿಸಿದರು. ಅಲ್ಲಮನ ವಚನಚಂದ್ರಿಕೆಯಲ್ಲಿ ೧೨೯೪ ವಚನಗಳು ಲಭ್ಯವಾಗಿವೆ. ಅಲ್ಲಮಪ್ರಭು ತನ್ನ ಕೊನೆಯ ದಿನಗಳಲ್ಲಿ ಶ್ರೀಶೈಲ‍ಕ್ಕೆ ಹೋಗಿ ಅಲ್ಲಿಯ ವನದಲ್ಲಿ ಶಿವೈಕ್ಯನಾದನೆಂದು ಪ್ರತೀತಿ. ಬಸವಣ್ಣನವರ ಸಮಕಾಲೀನನಾದ ಅಲ್ಲಮಪ್ರಭುವಿನ ವಚನಗಳ ಅಂಕಿತ 'ಗುಹೇಶ್ವರ' ಅಥವಾ 'ಗೊಹೇಶ್ವರ'. ಈತನ ವಚನಗಳಲ್ಲಿ ಗಹನವಾದ ಆಧ್ಯಾತ್ಮ ಹಾಗೂ ತಾತ್ವಿಕ ವಿಚಾರಗಳಿವೆ. ಅಲ್ಲಮನ ಆಧ್ಯಾತ್ಮಿಕ ಅನುಭವಗಳ ಅಸಾಮಾನ್ಯತೆಯಿಂದ ಅವನ ವಚನಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಅವನದು ಬಹುಮಟ್ಟಿಗೆ ರೂಪಕ ಭಾಷೆ. ಈ ಭಾಷೆ ಅವನ ವೈಶಿಷ್ಟ್ಯವೂ ಹೌದು. 
ವೈರಾಗ್ಯಮೂರ್ತಿ ಅಲ್ಲಮಪ್ರಭು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವಿಯಲ್ಲಿ (ಆಗಿನ ಬನವಾಸಿ ಎಂಬ ಪ್ರಾಂತ್ಯದ ಒಂದು ಹಳ್ಳಿ). ಇದೇ ಬಳ್ಳಿಗಾವೆಯ ಹತ್ತಿರವಿರುವ ಕೋಡಿಮಠ ಕಾಳಾಮುಖ ಶೈವರ ಪ್ರಮುಖ ಕೇಂದ್ರ. ಅಲ್ಲಮನ ಬಾಲ್ಯದ ದಿನಗಳ ಬಗ್ಗೆಯಾಗಲೀ ತಂದೆ-ತಾಯಿಗಳ ಬಗ್ಗೆಯಾಗಲೀ ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ. ಕೆಲವು ವೀರಶೈವ ಕಾವ್ಯಗಳಲ್ಲಿ ಅಲ್ಲಮನ ತಂದೆಯ ಹೆಸರು; ನಿರಹಂಕಾರ, ತಾಯಿ ಸುಜ್ಞಾನದೇವಿ. ನಿರಹಂಕಾರನು ಮೂಲತಃ ಕರುವೂರಿನವನು. ಬಳ್ಳಿಗಾವೆಗೆ ಬಂದು ಅಲ್ಲಿನ ರಾಜನ ಅರಮನೆಯಲ್ಲಿ ಅಂತಃಪುರದ ಅಧಿಕಾರಿಯಾಗಿದ್ದನು. ನಿರಹಂಕಾರ ಮತ್ತು ಸುಜ್ಞಾನದೇವಿಯರಿಬ್ಬರೂ ಶಿವಭಕ್ತರಾಗಿದ್ದರು. ಅಲ್ಲಮಪ್ರಭುವು ದೇವಾಲಯದಲ್ಲಿ ಮದ್ದಳೆ ಬಾರಿಸುವವರಾಗಿದ್ದರು. ಭಾರತೀಯ ಪರಂಪರಾಗತ ಪದ್ಧತಿಯಂತೆ ಅಲ್ಲಮ ಪ್ರಭುವನ್ನೂ ಅವತಾರ ಪುರುಷರನ್ನಾಗಿ ಚಿತ್ರಿಸಿದ್ದಾರೆ. ಬಳ್ಳಿಗಾವಿಯ ಕೇದಾರೇಶ್ವರದಲ್ಲಿ ಮದ್ದಳೆ ನುಡಿಸುತ್ತಿದ್ದ ಅಲ್ಲಮನನ್ನು ಆ ಊರಿನ ರಾಜನ ಮಗಳು, ಮಾಯಾದೇವಿ ಕಂಡು ವಿಭ್ರಾಂತಿಗೊಳಗಾಗುತ್ತಾಳೆ. ಅವನನ್ನು ಮೋಹಿಸಿ, ಕಾಮಿಸುತ್ತಾಳೆ. ಅಲ್ಲಮ ಆಕೆಯ ಪ್ರೇಮಭಿಕ್ಷೆಯನ್ನು ನಿರಾಕರಿಸುತ್ತಾನೆ. ವಿರಾಗ ಜೀವನದತ್ತ ಒಲವು ಹೊಂದಿದ್ದ ಅಲ್ಲಮ ಮಾಯೆಯನ್ನು, ಬಳ್ಳಿಗಾವಿಯನ್ನು ತೊರೆದು ಜಂಗಮನಾಗಿ ದೇಶದ ತುಂಬ ಸಂಚರಿಸುತ್ತಾ, ಶಿವಯೋಗಿಯಾಗಿ ಅಂತರಂಗದ ಸಾಧನೆಯಲ್ಲಿ ತೊಡಗುತ್ತಾರೆ.
ಅಲ್ಲಮಪ್ರಭು, ಹಠಯೋಗ, ಲಯಯೋಗ, ರಾಜಯೋಗ ಸಾಧಕರಾಗಿ, ಶಿವಯೋಗದ ಸಿದ್ಧಿಯನ್ನು ಪಡೆಯುತ್ತಾರೆ. ಬಳ್ಳಿಗಾವಿ ಸಮೀಪದ ಅನಿಮಿಷಾರಣ್ಯದಲ್ಲಿ ಶಿವಯೋಗ ನಿರತರಾಗಿದ್ದ ಅನಿಮಿಷ ಗುರುಗಳಿಂದ ಲಿಂಗದೀಕ್ಷೆಯನ್ನು ಪಡೆಯುತ್ತಾರೆ. ಪರಿವ್ರಾಜಕರಾಗಿ ನಾಡಿನಲ್ಲೆಲ್ಲ ಸಂಚರಿಸುತ್ತಾ ಗೊಗ್ಗಯ್ಯ, ಮುಕ್ತಾಯಕ್ಕ, ಸಿದ್ಧರಾಮ, ಗೋರಕನಾಥ ಮುಂತಾದವರಿಗೆ ಶಿವಯೋಗ ಸಾಧನೆಯ ಮಾರ್ಗ ತೋರುತ್ತಾರೆ. ಅಹಂಕಾರವನ್ನು ಜಯಿಸಿದ ಅಲ್ಲಮ ಪ್ರಭುದೇವರುನಾನೆಂಬ ಅಹಂಕಾರದಲ್ಲಿ ನಾನುಂಡೆನಾದರೆ ನನಗದೇ ಭಂಗ, ಸ್ತುತಿನಿಂದೆಗೆನೊಂದೆನಾದರೆ, ಅಂಗೈಯಲ್ಲಿರ್ಪ ಗುಹೇಶ್ವರ ಲಿಂಗಕ್ಕೆ ದೂರಎಂದಿದ್ದಾರೆ. “ಕಾಮವನ್ನು ಸುಟ್ಟವನೇ ಯೋಗಿ, ಕಾಮನ ಬಲೆಗೆ ಬಿದ್ದವನೇ ಭೋಗಿಎನ್ನುವ ಅಲ್ಲಮಪ್ರಭು, ಕಾಮನನ್ನು ಗೆದ್ದರೆ ಮಾಯೆಯನ್ನು ಗೆದ್ದಂತೆಯೇ ಸರಿ ಎನ್ನುತ್ತಾರೆ.
ಗುಹೇಶ್ವರ ಲಿಂಗದ ವಿರಹದಲ್ಲಿ ಬೆಂದವರ ಮರಳಿ ಸುಡಲುಂಟೆ ಮರುಳೇ? ಎಂದಿದ್ದಾರೆ. ಅಲ್ಲಮ ಪ್ರಭುವಿನ ಅನುಭಾವ ಜ್ಞಾನ ಪೂರ್ಣವಾದದ್ದು. ಆತ ಯ್ಯೋಮ ಮೂರ್ತಿ, ಪರಿಪೂರ್ಣ ಅನುಭಾವಿ. ಗುರು ಕರುಣೆಯಿಂದ ದೇಹ ಶುದ್ಧ, ತನು ಶುದ್ಧ. ಇಷ್ಟಲಿಂಗ ಅನುಷ್ಠಾನದಿಂದ ಪ್ರಾಣಲಿಂಗ, ಭಾವಲಿಂಗದ ಅರಿವು. ಗುರುಲಿಂಗ ಜಂಗಮದಿಂದ ಐಕ್ಯ ಸ್ಥಳವನ್ನು ಸಾಧಿಸಬೇಕು.
ಅನುಭಾವದಿಂದ ಹುಟ್ಟಿತ್ತು ಲಿಂಗ, ಅನುಭಾವದಿಂದ ಹುಟ್ಟಿತ್ತು ಜಂಗಮ, ಅನುಭಾವದಿಂದ ಹುಟ್ಟಿತ್ತು ಪ್ರಸಾದ, ಅನುಭಾವದನುವಿನಲ್ಲಿ ಗುಹೇಶ್ವರಲಿಂಗ ಅನುಪಮ ಸುಖಿಎಂದಿದ್ದಾರೆ. “ನಾನೆಂಬುದು ಅಜ್ಞಾನ, ನೀನೆಂಬುದು ಮಾಯೆ, ನಾನೆನ್ನದೆ, ನೀನೆನ್ನದೆ ಬೇಕೆನ್ನದೆ, ಬೇಡವೆನ್ನದೆ, ಅಹುದೆನ್ನದೆ, ಅಲ್ಲವೆನ್ನದೆ, ತನ್ನ ತಾ ತಿಳಿದು ತಾನನ್ಯವಲ್ಲವೆಂದರಿತು ವ್ಯವಹರಿಸುವುದೇ ನಿರ್ಲಿಪ್ತತೆ. ಅದು ಪರಮ ಸುಖದ ಬೀಡು, ಅದೇ ಲಿಂಗಾನಂದ ಮುಕ್ತಿ”.
ಲಿಂಗ ದೇವನಲ್ಲಿ ನಿಷ್ಠೆ ಉಳ್ಳ ಭಕ್ತ ಐಕ್ಯಸ್ಥಳ ತಲುಪಿದಾಗ ಪರಮಾನಂದ. ಅಲ್ಲಿಂದ ಮುಂದೆ ಪುನರ್ಜನ್ಮ ಇಲ್ಲ ಎನ್ನುತ್ತಾರೆ. “ಅರಿದೆನೆಂಬುದು ತಾ ಬಯಲು, ಅರಿಯೆನೆಂಬುದು ತಾ ಬಯಲು, ಅರಿವಿನ ಕುರುಹಿನ, ಮರಹಿನೊಳಗೆ ಗುಹೇಶ್ವರನೆಂಬುದು ತಾ ಬಯಲುಇಂತಹ ಚಿಕ್ಕ ಪದಗಳನ್ನು ಬಳಸಿ, ಅಧ್ಯಾತ್ಮದ ಉನ್ನತ ಹಂತವನ್ನು ಪರಿಣಾಮಕಾರಿಯಾಗಿ ತಿಳಿಸುವುದು ಅಲ್ಲಮಪ್ರಭುವಿನ ವಿಶಿಷ್ಟತೆ.
ಮೂಲ: ವಿವಿಧ ಆನ್ಲೈನ್ ಮೂಲಗಳಿಂದ ಕ್ರೋಢಿಕರಿಸಿ ರಚಿಸಿದ ಬರಹ 

1 comment:

ಪುತ್ತೂರ್ ಅಜ್ಜ

  ರಾಮಚಂದ್ರ ಭಟ್ರವರ ಹೆತ್ತವರು   ರಾಮೇಶ್ವರಕ್ಕೆ ತೀರ್ಥಯಾತ್ರೆಗೆ ತೆರಳಿ ಬಂದ   ತರುವಾಯ 1916 ರ ಜೂನ್ 15 ರಂದು ನೆಟ್ಟಾರಿನಲ್ಲಿ   ರಾಮಚಂದ್ರರ ಜನನವಾಯಿತು ...