Followers

Thursday, September 19, 2019

ಮಧ್ವಾಚಾರ್ಯರು


ಸರ್ವೊತ್ತಮನಾದ ಶ್ರೀಪತಿಯಾದ ಪರಮಾತ್ಮನ ಅದೇಶವನ್ನು ಪಾಲಿಸಲು ಜೀವೋತ್ತಮನಾದ ಪವಮಾನನು ಶ್ರೀಮದಾನಂದತೀರ್ಥರಾಗಿ ಜನಿಸಿದರು. ಶ್ರೀ ಮಧ್ವಾಚಾರ್ಯರು ಉಡುಪಿಯ ಹತ್ತಿರದಲ್ಲಿರುವ ಪಾಜಕ ಗ್ರಾಮದಲ್ಲಿ ತಂದೆ ಮಧ್ಯಗೇಹ ಭಟ್ಟ ಮತ್ತು ತಾಯಿ ವೇದವತಿಗೆ ಜನಿಸಿದರು (ಕಥೆಯಂತೆ, ನಾದ್ದಾಂತಿಲ್ಲಾಯಾ ಹಾಗೂ ವೇದವತಿ ದಂಪತಿಗಳಿಗೆ ಮದುವೆಯಾಗಿ ಬಹು ಸಮಯದವರೆಗೂ ಸಂತಾನವಾಗಿರಲಿಲ್ಲ. ದೇವರ ಪರಮ ಭಕ್ತರಾದ ದಂಪತಿಗಳು ಸಂತಾನ ಭಾಗ್ಯಕ್ಕಾಗಿ ದೇವರಲ್ಲಿ ಸಾಕಷ್ಟು ಪ್ರಾರ್ಥಿಸುತ್ತಿದ್ದರು. ಉಡುಪಿಯ ಅನಂತೇಶ್ವರನ ಸನ್ನಿಧಿಯಲ್ಲಿ ಸುಮಾರು ಹನ್ನೆರಡು ವರ್ಷಗಳ ಕಾಲ ಸತತವಾಗಿ ಪ್ರಾರ್ಥಿಸಿದುದರ ಫಲವಾಗಿ ಕ್ರಿ.ಶ. 1238 ರಲ್ಲಿ ಅವರಿಗೆ ಗಂಡು ಸಂತಾನವಾಯಿತು. ಆ ಸಂತಾನವೆ ಶ್ರೀ ಮಧ್ವಾಚಾರ್ಯರು). ತಂದೆ ತಾಯಿ ವಾಸುದೇವನೆಂದು ಹೆಸರಿಟ್ಟಿದ್ದರು. ಬಾಲ್ಯದಲ್ಲೆ ಅಸಾಧಾರಣ ಪ್ರತಿಭೆ ತೋರಿದ ವಾಸುದೇವ, ತನ್ನ ಹನ್ನೆರಡೆನೆಯ ವಯಸ್ಸಿನಲ್ಲಿ ವಿಧ್ಯಾಭ್ಯಾಸ ಮತ್ತು ವೇದಾಭ್ಯಾಸಗಳೆರಡನ್ನು ಮುಗಿಸಿ ಗುರು ಅಚ್ಯುತ ಪ್ರಜ್ಞ ಸನ್ಯಾಸವನ್ನು ಪಡೆದು ಪೂರ್ಣಪ್ರಜ್ಞರೆಂಬ ಹೆಸರು ಪಡೆದರು. ಶ್ರೀಮಧ್ವಾಚಾರ್ಯರಿಗೆ ಗುರುಗಳು ವೈದಿಕ ಸಾಮ್ರಾಜ್ಯದಲ್ಲಿ ಪಟ್ಟಾಭಿಶೇಕ ನೆರವೆರಿಸಿ ಇಟ್ಟ ನಾಮ ಆನಂದತೀರ್ಥ.
ವೇದಾಂತ ದರ್ಶನದಲ್ಲಿ, ಮಧ್ವಚಾರ್ಯರು ದ್ವೈತ ಸಿದ್ಧಾಂತದ ಉಗ್ರ ಪ್ರತಿಪಾದಕರು. ಅವರು ಹದಿಮೂರು ಹದಿನಾಲ್ಕನೇ [೧೨೩೮-೧೩೧೭] ಶತಮಾನದಲ್ಲಿ ಇದ್ದವರು. ಅವರು ಭಕ್ತಿ ಮಾರ್ಗದ ಪ್ರವರ್ತಕರಲ್ಲಿ ಪ್ರಮುಖರು. ಅವರು ವಾಯುವಿನ ಅವತಾರದಲ್ಲಿ ಮೂರನೆಯವರಾದ ಮಾರುತಿ ಭೀಮರ ನಂತರ ಬಂದ ಅವತಾರವೆಂದು ಹೇಳುತ್ತಾರೆ (ಮಹಾಭಾರತ ತಾತ್ಪರ್ಯನಿರ್ಣಯದಲ್ಲಿ ಅವರೇ ಹೇಳಿಕೊಂಡಿದ್ದಾರೆ).

ಮಧ್ವರು ಉಡುಪಿಯ ಹತ್ತಿರ ಪಾಜಕದಲ್ಲಿ ವಿಜಯ ದಶಮಿಯಂದು ಕ್ರಿ.ಶ.೧೨೩೮ ರಲ್ಲಿ ಒಂದು ಚಿಕ್ಕ ಕುಟೀರದಲ್ಲಿ ಜನಿಸಿದರು. ಅವರ ತಂದೆ ನದಿಲ್ಲಾಯ ನಾರಾಯಣ ಭಟ್ಟ, ತಾಯಿ ವೇದಾವತಿ. ಅವರು ಆ ಮಗುವಿಗೆ ವಾಸುದೇವನೆಂದು ನಾಮಕರಣ ಮಾಡಿದರು. ನಂತರ ಮಧ್ವರು ಪೂರ್ಣಪ್ರಜ್ಞ, ಪೂರ್ಣ ಬೋಧ, ಆನಂದ ತೀರ್ಥ, ಮಧ್ವಾಚಾರ್ಯ ಎಂಬ ಹೆಸರುಗಳಿಂದ ಪ್ರಸಿದ್ಧರಾದರು. ಅವರ ಜನನಕ್ಕೆ ಮುಂಚೆ ಅವರ ತಾಯಿ ತಂದೆ ಪೇಟೆಗೆ ಹೋಗಿದ್ದಾಗ ಒಬ್ಬ ಭಿಕ್ಷುಕ ಧ್ವಜ ಸ್ಥಂಬ ವನ್ನು ಏರಿ, 'ಈ ಊರಿನಲ್ಲಿ ವಾಯು ದೇವನು ಅವತರಿಸುವನು' ಎಂದು ಕೂಗಿ ಹೇಳಿದನೆಂದು ಪ್ರತೀತಿ.

ವಾಸುದೇವನು ಚಿಕ್ಕ ಬಾಲಕನಾಗಿದ್ದಾಗಲೇ ಅಸಾಧಾರಣ ಪ್ರತಿಭೆಯನ್ನು ತೋರಿದನು. ಅವನು ಹನ್ನೊಂದನೇ ವರ್ಷದಲ್ಲಿ ಉಡುಪಿಯಲ್ಲಿದ್ದ ಅಚ್ಯುತಪ್ರೇಕ್ಷರಿಂದ ಸಂನ್ಯಾಸ ದೀಕ್ಷೆಯನ್ನು ಸ್ವೀಕರಿಸಿದನು. ಅವರು ಅವನಿಗೆ ಸಂನ್ಯಾಸ ದೀಕ್ಷೆ ಕೊಡುವಾಗ ಪೂರ್ಣಪ್ರಜ್ಞರೆಂದು ನಾಮಕರಣ ಮಾಡಿದರು.

ಅವರು ಸಂನ್ಯಾಸ ದೀಕ್ಷೆಯನ್ನು ತೆಗೆದುಕೊಂಡ ಒಂದು ತಿಂಗಳ ನಂತರ ಪಂಡಿತೋತ್ತಮರನ್ನು ವೇದಾಂತ ತರ್ಕದಲ್ಲಿ ಸೋಲಿಸಿದರು. ಅದನ್ನು ನೋಡಿ ಅಚ್ಯುತಪ್ರೇಕ್ಷರು ಅವರಿಗೆ ವೇದಾಂತ ಸಾಮ್ರಾಜ್ಯದ ಚಕ್ರವರ್ತಿಯೆಂದು ಹೇಳಿ ಆನಂದತೀರ್ಥರೆಂಬ ಬಿರುದನ್ನು ಕೊಟ್ಟರು.

ನಂತರ ಅವರು ವೇದದ ಬಲಿಷ್ಟ ಸೂಕ್ತದಲ್ಲಿ ಇರುವ ಮಧ್ವ ಹೆಸರನ್ನು ಆಯ್ದುಕೊಂಡು ಆ ಹೆಸರಿನಲ್ಲಿ ಗ್ರಂಥ ರಚಿಸಿ, ಮಧ್ವಾಚಾರ್ಯರೆಂದು ಪ್ರಸಿದ್ಧರಾದರು. ಅವರು ಪ್ರಚುರಪಡಿಸಿದ ದ್ವೈತ ಸಿದ್ಧಾಂತ ತತ್ವವಾದ ಅಥವಾ ದ್ವೈತ ಮತವೆಂದು ಪ್ರಸಿದ್ಧವಾಗಿದೆ.

ಅವರು ದಕ್ಷಿಣ ಭಾರತ ಪ್ರವಾಸ ಕೈಕೊಂಡು ಅನಂತಶಯನ, ಶ್ರೀರಂಗಂ ಮೊದಲಾದ ಕಡೆ ತಮ್ಮ ತತ್ವವಾದ ವನ್ನು ಪ್ರಚಾರ ಮಾಡಿದರು. ಸಂಪ್ರದಾಯವಾದಿಗಳಿಂದ ಇದಕ್ಕೆ ಪ್ರಬಲ ವಿರೋಧ ಕಂಡುಬಂದಿತು. ಮಧ್ವರು ಅದಕ್ಕೆ ಜಗ್ಗದೆ ತಮ್ಮ ವಾದವನ್ನು ಸಮರ್ಥಿಸಿ ಕೊಂಡರು. ನಂತರ ಉಡುಪಿಗೆ ಹಿಂತಿರುಗಿದರು. ಅಲ್ಲಿ ಅವರು ಗೀತೆಗೆ ಭಾಷ್ಯವನ್ನು ಬರೆದರು. ತತ್ವವಾದ ಸಿದ್ಧಾಂತದ ಆಧಾರದಮೇಲೆ ೩೭ ಗ್ರಂಥಗಳನ್ನು ಬರೆದರು. ಅವನ್ನು ಸರ್ವ ಮೂಲಗ್ರಂಥ ಗಳೆಂದು ಕರೆಯುತ್ತಾರೆ. ಈ ಗ್ರಂಥಗಳ ಬಗೆಗೆ ಮತ್ತು ತತ್ವವಾದದ ಬಗೆಗೆ ಭಾರತಾದ್ಯಂತ ತೀವ್ರ ಚರ್ಚೆ ನೆಡೆಯಿತು. ಮಧ್ವರು ತಮ್ಮ ವಾದಕ್ಕೆ ಮೂರು ಬಗೆಯ ಪ್ರಮಾಣಗಳನ್ನು ಆಧಾರವಾಗಿ ತೆಗೆದುಕೊಂಡಿದ್ದಾರೆ. ಅವು ಪ್ರತ್ಯಕ್ಷ, ಅನುಮಾನ [ತಾರ್ಕಿಕ], ಮತ್ತು ಆಗಮ.

ಅವರು ಕೆಲವು ಕಾಲದ ನಂತರ ತಮ್ಮ ತತ್ವವಾದ ಪ್ರಚಾರಕ್ಕಾಗಿ ಉತ್ತರ ಭಾರತದ ಯಾತ್ರೆ ಕೈಗೊಂಡರು. ಅವರು ಬದರಿಕಾಶ್ರಮಕ್ಕೆ ಹೋಗಿ ಅಲ್ಲಿ ವೇದ ವ್ಯಾಸರ ಆಶ್ರಮದಲ್ಲಿ ವ್ಯಾಸಮಹರ್ಷಿಗಳನ್ನು ಕಂಡು ಅವರಿಗೆ ತಮ್ಮ ಗೀತೆಯ ಭಾಷ್ಯವನ್ನು ತೋರಿಸಿ ಅವರ ಮೆಚ್ಚುಗೆಯನ್ನು ಪಡೆದುದಾಗಿ ಹೇಳುತ್ತಾರೆ. ಅವರು ಗೀತಾ ಪೀಠಿಕೆಯಲ್ಲಿ ಒಂದುವಾಕ್ಯವನ್ನು ಮಾತ್ರಾ ಬದಲಾಯಿಸಿದುದಾಗಿ ಹೇಳುತ್ತಾರೆ. "ನಾನು ಅವನ (ದೇವನ) ಪೂರ್ಣ ಸಾಮರ್ಥ್ಯ ಉಪಯೋಗಿಸಿ ಬರೆದಿದ್ದೇನೆ" ಎಂಬುದನ್ನು, "ನಾನು ಅವನ ಅಲ್ಪವೇ ಸಾಮರ್ಥ್ಯವನ್ನು ಉಪಯೋಗಿಸಿ ಬರೆದಿದ್ದೇನೆ" ಎಂದು ಬದಲಾಯಿಸಿರುವುದಾಗಿ ಹೇಳಿದ್ದಾರೆ.

ಅವರು ಬದರಿಯಿಂದ ಹಿಂತಿರುಗಿದ ಮೇಲೆ ಬ್ರಹ್ಮ ಸೂತ್ರ ಭಾಷ್ಯವನ್ನು ಬರೆದರು. ಅವರು ಆನಂತರ ಅನೇಕ ಗ್ರಂಥಗಳನ್ನು ರಚಿಸಿದರೂ, ಅದನ್ನು ಓಲೆಗರಿಯ ಗ್ರಂಥದಲ್ಲಿ ಲಿಪಿಕಾರರಾಗಿ ಬರೆದವರು ಅವರ ಶಿಷ್ಯರಾದ ಸತ್ಯ ತೀರ್ಥರು. ಆನಂತರ ಅವರ (ಮಧ್ವಾಚಾರ್ಯರ) ಕೀರ್ತಿ ದೇಶಾದ್ಯಂತ ಹರಡಿ ಅನೇಕರು ಅವರ ಶಿಷ್ಯರಾದರು. ಅನೇಕರು ಅವರಿಂದ ಸಂನ್ಯಾಸ ಸ್ವೀಕಾರ ಮಾಡಿದರು.

ಬದರಿಯಿಂದ ಬಂದ ಅವರು ಉಡುಪಿಯಲ್ಲಿ ನೆಲೆಸಿ ದಶ ಉಪನಿಷತ್ತುಗಳಿಗೆ ಭಾಷ್ಯವನ್ನು ಬರೆದರು. ಋಗ್ವೇದದ ೪೦ ಸೂಕ್ತಗಳಿಗೆ ವಿಶ್ಲೇಷಣೆಯನ್ನು(commentary) ಬರೆದರು. ಭಾಗವತ (ಮಹಾಭಾರತ ?) ತಾತ್ಪರ್ಯ ನಿರ್ಣಯವನ್ನು ಬರೆದರು. ಪಶ್ಚಿಮ ಸಮುದ್ರ ತೀರದಲ್ಲಿ ಸಿಕ್ಕಿದ ಶ್ರೀ ಕೃಷ್ಣನ ಮೂರ್ತಿಯನ್ನು ಇದೇ ಸಮಯದಲ್ಲಿ ಪ್ರತಿಷ್ಟಾಪಿಸಿದರು. ಫುನಃ ಎರಡನೇ ಬಾರಿ ಬದರಿಗೆ ಪ್ರಯಾಣ ಮಾಡಿದರು.

ಬದರಿಯ ಎರಡನೇ ಯಾತ್ರೆಯಲ್ಲಿ ಅವರು ಗಂಗಾನದಿಯನ್ನು ದಾಟಿ ಮುಸ್ಲಿಮರ ದೊರೆ ಇದ್ದ ರಾಜ್ಯದ ಮೂಲಕ ಹೋಗಬೇಕಿತ್ತು. ಹಾಗೆ ಗಂಗೆಯನ್ನು ದಾಟಿದಾಗ ರಾಜ ಭಟರು ಅವರನ್ನು ಮುಸ್ಲಿಮರ ದೊರೆಯ ಎದುರಿಗೆ ಎಳದೊಯಿದರು. ಆದರೂ ಇವರು ಸ್ವಲ್ಪವೂ ಭಯ ಪಡಲಿಲ್ಲ. ಆಗ ಆ ದೊರೆಯು ಇವರ ಧೈರ್ಯವನ್ನು ಕಂಡು ಬೆರಗಾದಾಗ, ಇವರು ವಿಶ್ವವನ್ನು ಬೆಳಗುವ ಆ ದೇವನಾದ ತಂದೆಯನ್ನು ನೀನೂ ಪೂಜಿಸುತ್ತೀಯೆ ಹಾಗೇ ನಾನೂ ಪೂಜಿಸುತ್ತೇನೆ, ನನಗೆ ಭಯವೇಕೆ ಎಂದರು, ಅವನು ಇವರ ಮಾತಿಗೆ ಮೆಚ್ಚಿ ಅನೇಕ ಕೊಡುಗೆಗಳನ್ನು ನೀಡಿದನು. ಆದರೆ ಅವರು ಅದನ್ನೆಲ್ಲಾ ನಿರಾಕರಿಸಿ ಬದರಿಗೆ ಪ್ರಯಾಣ ಬೆಳಸಿದರು. ಅಲ್ಲಿ ಅವರು ಪುನಃ ವ್ಯಾಸರನ್ನೂ ನಾರಾಯಣನನ್ನೂ ದರ್ಶನ ಮಾಡಿ ಹಿಂತಿರುಗಿದರು. ಧರಿಯಲ್ಲಿ ಕಾಶಿಗೆ ಹೋಗಿ ಅಲ್ಲಿ ಅಮರೇಂದ್ರ ಪುರಿ ಎಂಬ ಅದ್ವೈತಿಯನ್ನು ವಾದದಲ್ಲಿ ಸೋಲಿಸಿದರು.

ಅಲ್ಲಿಂದ ಕುರುಕ್ಷೇತ್ರಕ್ಕೆ ಬಂದರು. ಅಲ್ಲಿ ನಡೆದ ಒಂದು ಕಥೆ ಇದೆ. ಅವರು ಒಂದು ಸ್ಥಳದಲ್ಲಿ ತಮ್ಮ ಶಿಷ್ಯರಿಗೆ ಅಗೆಯಲು ಹೇಳಿದರು. ಅವರು ಅಲ್ಲಿ ಅಗೆದಾಗ ಅವರಿಗೆ ಅಲ್ಲಿ ಒಂದು ದೊಡ್ಡ ಗದೆ ಕಂಡಿತು. ಅದು ದ್ವಾಪರದಲ್ಲಿ ಭೀಮನು ಉಪಯೋಗಿಸಿದ ಗದೆಯೆಂದು ತಿಳಿಸಿ ಅದನ್ನು ಪುನಃ ಹಾಗೆಯೇ ಮಣ್ಣಿನಲ್ಲಿ ಮುಚ್ಚಿಸಿದರು. ನಂತರ ಗೋವಾಕ್ಕೆ ಬಂದು ಉಡುಪಿಗೆ ಹಿಂತಿರುಗಿದರು. ಆಗ ಅವರು ತಮ್ಮ ವಿದ್ವತ್ಪೂರ್ಣ ಸಂಗೀತದಿಂದ ಜನರನ್ನು ರಂಜಿಸಿದುದಾಗಿ ಹೇಳುತ್ತಾರೆ.

ಅವರು ನಂತರ ದಕ್ಷಿಣ ಯಾತ್ರೆಯನ್ನು ಮಾಡಿ ಕಾಸರಗೊಡಿನ ಪದ್ಮ ತೀರ್ಥರನ್ನೂ ಪುಂಡರೀಕ ಪುರಿಗಳನ್ನೂ ವಾದದಲ್ಲಿ ಸೋಲಿಸಿದರು. ಪದ್ಮತೀರ್ಥರು ಪೇಜತ್ತಾಯ ಶಂಕರ ಪಂಡಿತರ ಮೂಲಕ ಮಧ್ವರ ಗ್ರಂಥಗಳನ್ನು ಅಪಹರಿಸಿದ್ದರೆಂದೂ ಮಧ್ವರೊಡನೆ ವಾದವಾದ ನಂತರ ಆ ಗ್ರಂಥಗಳನ್ನು ಹಿಂತಿರುಗಿಸಿದರೆಂದೂ ಹೇಳುತ್ತಾರೆ. ಅವರಿಬ್ಬರ ವಾದ ಸಾರಾಂಶವನ್ನು ವಾದ ಅಥವಾ ತತ್ವೋದ್ಯೋತ ಗ್ರಂಥವಾಗಿ ರಚಿಸಿರುವುದಾಗಿ ಹೇಳುತ್ತಾರೆ. ಅವರು ಆನಂತರ ಆಸ್ಥಾನ ಪಂಡಿತರಾದ ತ್ರಿವಿಕ್ರಮ ಪಂಡಿತರನ್ನು ೧೫ ದಿನಗಳಕಾಲ ವಾದ ಮಾಡಿ ಸೋಲಿಸಿದರೆಂದು ಹೇಳುತ್ತಾರೆ. {ತ್ರಿವಿಕ್ರಮ ಪಂಡಿತರು ನಂತರ ಮಧ್ವರ ಬ್ರಹ್ಮಸೂತ್ರಕ್ಕೆ ವಿಶ್ಲೇಷಣೆಯನ್ನು(commentary) ಬರೆದರು. ನಾಲ್ಕು ಭಾಗಗಳಲ್ಲಿರುವ ಇದನ್ನು ನಾಲ್ಕು ಶಿಷ್ಯರಿಗೆ ಏಕ ಕಾಲದಲ್ಲಿ ಬಿಡುವಿಲ್ಲದೆ ಹೇಳಿ ಬರೆಸಿದರೆಂದು ಹೇಳುತ್ತಾರೆ}. ಅದೇ ಸಮಯದಲ್ಲಿ ಮಧ್ವರು ನ್ಯಾಯವಿವರಣವೆಂಬ ಗ್ರಂಥವನ್ನೂ ರಚಿಸಿದ್ದಾಗಿ ಹೇಳುತ್ತಾರೆ.

ಸುಮಾರು ೭೦ ವರ್ಷ ವಯಸ್ಸಾದ ಮಧ್ವರು ತಮ್ಮ ಸೋದರನಿಗೆ ಸನ್ಯಾಸ ದೀಕ್ಷೆ ಕೊಟ್ಟು ಅವರನ್ನು ಸೋದೆ ಮಠ ಮತ್ತು ಸುಬ್ರಹ್ಮಣ್ಯ ಮಠಕ್ಕೆ ಅಧಿಪತಿಗಳನ್ನಾಗಿಮಾಡಿದರು.

ಇದೇ ಸಮಯದಲ್ಲಿ ಉಡುಪಿಯ ಅಷ್ಟ ಮಠಗಳಿಗೆ ತಮ್ಮ ಶಿಷ್ಯರಿಗೆ ದೀಕ್ಷೆ ಕೊಟ್ಟು ಮಠಾಧಿಪತಿಗಳಾಗಿ ನೇಮಿಸಿದರು.

೧. ಹೃಷೀಕೇಶ ತೀರ್ಥ (ಫಲಿಮಾರು ಮಠ), ೨. ನರಸಿಂಹ ತೀರ್ಥ (ಆದಮಾರು ಮಠ), ೩. ಜನಾರ್ಧನ ತೀರ್ಥ (ಕೃಷ್ಣಾಪುರ ಮಠ), ೪. ಉಪೇಂದ್ರ ತೀರ್ಥ (ಪುತ್ತಿಗೆ ಮಠ), ೫. ವಾಮನ ತೀರ್ಥ (ಶಿರೂರು ಮಠ), ೬. ವಿಷ್ಣು ತೀರ್ಥ (ಸೋದೆ ಮಠ), ೭. ಶ್ರೀರಾಮ ತೀರ್ಥ (ಕಾಣಿಯೂರು ಮಠ), ೮. ಅಧೋಕ್ಷಜ ತೀರ್ಥ (ಪೇಜಾವರಮಠ), ಮಧ್ವರ ಇನ್ನಿಬ್ಬರು ಪ್ರಸಿದ್ಧ ಶಿಷ್ಯರು - ೯. ಪದ್ಮನಾಭ ತೀರ್ಥ; ೧೦. ನರಹರಿತೀರ್ಥ.

ನಂತರ ಉಡುಪಿಯ ಸುತ್ತ ಮುತ್ತ ಸಂಚರಿಸಿ ಉಜಿರೆಯ ಬ್ರಾಹ್ಮಣರೊಡನೆ ಚರ್ಚಿಸಿ ಪೂಜಾವಿಧಿಗೆ ಸಂಬಂಧಪಟ್ಟಂತೆ ಕರ್ಮನಿಯಮ ರಚಿಸಿದರು ಇದು ಖಂಡಾರ್ಥ ನಿರ್ಣಯವೆಂದು ಹೆಸರು ಪಡೆದಿದೆ. ನಂತರ ಪರಂತಿಯಲ್ಲಿರುವ ಪಂಚಲಿಂಗೇಶ್ವರ ದೇವಾಲಯವನ್ನು ಜೀರ್ಣೋದ್ಧಾರ ಮಾಡಿದರು.

ತಮ್ಮ ೭೯ನೇ ವಯಸ್ಸಿನಲ್ಲಿ ಕಲಿ ೪೪೧೮ [ಕ್ರಿ.ಶ.೧೩೧೭]ರಲ್ಲಿ ಒಬ್ಬರೇ ಬದರಿಕಾಶ್ರಮಕ್ಕೆ ಪ್ರಯಾಣ ಬೆಳಸಿದರು. ಈ ದಿನವನ್ನು ಮಧ್ವ ನವಮಿ ಎಂದು ಇಂದಿಗೂ ಆಚರಿಸುತ್ತಾರೆ.

ಕಾಲಕ್ರಮೇಣ ಇವರ ತತ್ವವಾದವು ಭಕ್ತಿ ಪಂಥಕ್ಕೂ, ಹರಿದಾಸ ಪಂಥಕ್ಕೂ ದಾರಿಮಾಡಿ ಕೊಟ್ಟಿತು. ಸಂಗೀತದ ಪ್ರೋತ್ಸಾಹಕ್ಕೂ, ಕನ್ನಡದಲ್ಲಿ ದಾಸ ಪಂಥದ ಮಾರ್ಗ ಬೆಳೆಯಲೂ ಇವರ ದರ್ಶನ ಸ್ಪೂರ್ತಿನೀಡಿತು. ಇವರ ಶಿಷ್ಯರಾದ ನರಹರಿ ತೀರ್ಥರು ಯಕ್ಷಗಾನ ಹಾಗೂ ಕೂಚುಪುಡಿ ನೃತ್ಯ ಪ್ರಾಕಾರಗಳ ಪುನರುತ್ಥಾನಕ್ಕೂ, ಬೆಳವಣಿಗೆಗೂ ಪ್ರೋತ್ಸಾಹಿಸಿದರು.

ಹದಿನಾರನೇ ಶತಮಾನದಲ್ಲಿದ್ದ ಶ್ರೀ ರಾಘವೇಂದ್ರ ಸ್ವಾಮಿಗಳು ಇವರ ಪರಂಪರೆಯವರಾಗಿದ್ದು ಬಹಳ ಪ್ರಸಿದ್ಧರಾಗಿದ್ದಾರೆ. ಮಧ್ವ ಮಠಗಳು ಭಾರತದ ಅನೇಕ ನಗರಗಳಲ್ಲಿ ಸ್ಥಾಪನೆಗೊಂಡಿವೆ. ಈಗೀಗ ಮಧ್ವಮಠಗಳನ್ನೂ ದೇಶ ವಿದೇಶಗಳಲ್ಲಿ ಸ್ಥಾಪಿಸಿ ಮಧ್ವ ತತ್ವ ಪ್ರಸಾರ, ಅನೇಕ ಶಿಕ್ಷಣ ಸಂಸ್ಥೆಗಳ ಮೂಲಕ ಸಮಾಜ ಸೇವೆ ಮಾಡುತ್ತಿವೆ. ಅನೇಕ ಕಡೆ ವೇದ ಪಾಠಶಾಲೆಗಳನ್ನು ನಡೆಸುತ್ತಿವೆ. ಮೇಲೆ ತಿಳಿಸಿದ ಉಡುಪಿಯ ಅಷ್ಟ ಮಠಗಳು ಪ್ರಸಿದ್ಧವಾಗಿವೆ. ಮಧ್ವರು ತಾವು ಮುಖ್ಯ ಪ್ರಾಣನಾದ ಹನುಮನ, ಭೀಮನ, ನಂತರದ ಮೂರನೇ ಅವತಾರವೆಂದು ಹೇಳಿಕೊಂಡಿದ್ದಾರೆ.

ಭಾರತದಲ್ಲೆಡೆ ದ್ವೈತಮತವನ್ನು ಪ್ರಚಾರಿಸಿದರು. ಎರಡು ಬಾರಿ ಬದರಿ ಯಾತ್ರೆ ಮಾಡಿ ವೇದವ್ಯಾಸ ರೂಪಿಯಾದ ಪರಮಾತ್ಮನನ್ನು ಕಂಡು, ಪರಮಾತ್ಮನಿಂದ ವೇದಗಳನ್ನು ಕಲಿತು ಉಡುಪಿಗೆ ಹಿಂದಿರುಗಿದರು. ಮಧ್ವಾಚಾರ್ಯರು ಒಂಬತ್ತು ಜನರಿಗೆ ಸನ್ಯಾಸಿ ದೀಕ್ಷೆಯನ್ನು ನೀಡಿದರು, ಕೃಷ್ಣ ಮಠದಲ್ಲಿ ಶ್ರೀ ಕೃಷ್ಣನ ವಿಗ್ರಹವನ್ನು ಸ್ಥಾಪಿಸಿದರು.

ಶ್ರೀ ಮಧ್ವಾಚಾರ್ಯರು ಅನೇಕ ಕೃತಿಗಳನ್ನು ಸಂಸ್ಕೃತದಲ್ಲಿ ಬರೆದಿದ್ದಾರೆ. ಅವರ ಗ್ರಂಥಗಳನ್ನು ಸರ್ವಮೂಲಗ್ರಂಥಗಳು ಎಂದು ಕರೆಯಲಾಗುತ್ತದೆ. ಅವುಗಳಲ್ಲಿ ಇಂದು ಉಪಲಬ್ಧವಾದವುಗಳು ಹೀಗಿವೆ:

ಗೀತಾಭಾಷ್ಯ, ಗೀತಾತಾತ್ಪರ್ಯ, ಬ್ರಹ್ಮಸೂತ್ರ ಭಾಷ್ಯ, ಅನುವ್ಯಾಖ್ಯಾನ, ನ್ಯಾಯವಿವರಣ, ಅಣುಭಾಷ್ಯ, ದಶೋಪನಿಷದ್ಭಾಷ್ಯಗಳು, ಮಹಾಭಾರತತಾತ್ಪರ್ಯನಿರ್ಣಯ, ಯಮಕಭಾರತ, ದಶಪ್ರಕರಣಗಳು, ತಂತ್ರಸಾರ ಸಂಗ್ರಹ, ದ್ವಾದಶ ಸ್ತೋತ್ರ, ಕೃಷ್ಣಾಮೃತಮಹಾರ್ಣವ, ಸದಾಚಾರ ಸ್ಮೃತಿ, ಜಯಂತೀ ನಿರ್ಣಯ, ಪ್ರಣವಕಲ್ಪ, ನ್ಯಾಸಪದ್ಧತಿ, ತಿಥಿನಿರ್ಣಯ, ಕಂದುಕಸ್ತುತಿ.

ಶ್ರೀ ಮಧ್ವಾಚಾರ್ಯರ ಶಿಷ್ಯವರ್ಗ ಅಪಾರವಾದುದಾಗಿತ್ತು. ಅವರಲ್ಲಿ ಪ್ರಮುಖರಾದ ಕೆಲವರನ್ನು ಹೀಗೆ ಗುರುತಿಸಬಹುದು
ಶ್ರೀ ಪದ್ಮನಾಭ ತೀರ್ಥರು, ಶ್ರೀ ಸತ್ಯತೀರ್ಥರು, ಉಡುಪಿಯ ಅಷ್ಟಮಠಗಳ ಮೂಲಯತಿಗಳು, ಶಂಕರ ಪಂಡಿತಾಚಾರ್ಯರು, ತ್ರಿವಿಕ್ರಮ ಪಂಡಿತಾಚಾರ್ಯರು, ಜಯಸಿಂಹ ರಾಜ, ನಾರಾಯಣಾಚಾರ್ಯರು, ಮಾಧವ ತೀರ್ಥರು, ಅಕ್ಷೋಭ್ಯ ತೀರ್ಥರು.

ಇವರು ಜನಿಸಿದ ಪಾಜಕ ಕ್ಷೇತ್ರವು ಕರ್ನಾಟಕದ ಉಡುಪಿ ನಗರದಿಂದ ಸುಮಾರು ಹನ್ನೆರಡು ಕಿ.ಮೀ ಗಳಷ್ಟು ದೂರದಲ್ಲಿದ್ದು ಸುಲಭವಾಗಿ ತಲುಪಬಹುದಾಗಿದೆ. ಕುಂಜಾರು ಬೆಟ್ಟಕ್ಕೆ ಹತ್ತಿರದಲ್ಲಿರುವ ಪಾಜಕ ಕ್ಷೇತ್ರವು ಪ್ರಾಕೃತಿಕವಾಗಿಯೂ ಸಾಕಷ್ಟು ನಯನಮನೋಹರವಾದ ಕ್ಷೇತ್ರವಾಗಿದೆ. ಕುಂಜಾರು ಬೆಟ್ಟದ ತುದಿಯಲ್ಲಿ ದುರ್ಗಾ ದೇವಿಯ ದೇಗುಲವಿದ್ದು ಇದನ್ನು ದುರ್ಗಾ ಬೆಟ್ಟ ಎಂಬ ಹೆಸರಿನಿಂದಲೂ ಸಹ ಕರೆಯಲಾಗುತ್ತದೆ. ಕುಂಜಾರುಬೆಟ್ಟದ ನಾಲ್ಕು ದಿಕ್ಕುಗಳಲ್ಲೂ ಪವಿತ್ರವಾದ ತೀರ್ಥಗಳಿವೆ. ಇಲ್ಲಿರುವ ನಾಲ್ಕು ತೀರ್ಥಗಳೆಂದರೆ ಪೂರ್ವಕ್ಕಿರುವ ಪರಶು ತೀರ್ಥ, ದಕ್ಷಿಣಕ್ಕಿರುವ ಧನುಶ ತೀರ್ಥ, ಪಶ್ಚಿಮಕ್ಕಿರುವ ಗದಾ ತೀರ್ಥ ಹಾಗೂ ಉತ್ತರಕ್ಕಿರುವ ಬಾಣ ತೀರ್ಥ.
------------------------------------------------------------------------------------------------------------------
ಶ್ರೀ ಮಧ್ವಾಚಾರ್ಯರು ಆ ಪಾಜಕದ ಮನೆಯಲ್ಲಿ ಬೆಳೆದ, ಬೆಳೆಯುತ್ತಿದ್ದ ರೀತಿ ಅದ್ಭುತ. ಒಂದು ಕೋಲಿನಿಂದ ಭೂಮಿಯನ್ನು ಕೆತ್ತಿ ಮನೆಯ ಹಿಂಬದಿಯಲ್ಲಿ ಸರೋವರವನ್ನು ನಿರ್ಮಿಸಿ ಬಿಟ್ಟರು. ಅದೇ ತರಹದ ಒಂದು ಕೋಲನ್ನು ನೆಟ್ಟು ಅದಕ್ಕೆ ನೀರೆರದು ಚಿಗುರಿಸಿ ಬೆಳೆಸಿದರು. ಮಧ್ಯಗೇಹಾರ್ಯರನ್ನು ವಿಸ್ಮಯದ ಕಡಲಿನಲ್ಲಿ ಮುಳುಗಿಸಿ ಬಿಟ್ಟರು. ಗಿಡವೊಂದನ್ನು ತಲೆಕೆಳಕಾಗಿ ನೆಟ್ಟು ಗಾಳಿಯಲ್ಲಿ ಬೇರು ಬೆಳೆಯುವಂತೆ ಮಾಡಿದರು. ಇವತ್ತಿಗೂ ಅದನ್ನು ನೋಡಿದ ಜನ ಮಾತು ಹೊರಡದೇ ವಿಸ್ಮಿತರಾಗಿ ನಿಂತು ಬಿಡುತ್ತಾರೆ. ಕಾಡಿನ ಮಧ್ಯದಲ್ಲಿ ತೋಟಂತಿಲ್ಲಾಯರ ಮಗ, ತನ್ನ ಗೆಳೆಯ, ಆತನ ಹೆಸರೂ ವಾಸುದೇವನೆಂದೇ, ಅವನು ತಲೆ ನೋವಿನಿಂದ ಚೀರಿ ಕುಸಿದು ಕೆಳಗೆ ಬಿದ್ದರೆ, ಅವನನ್ನು ತೊಡೆಯ ಮೇಲೆ ಮಲಗಿಸಿಕೊಂಡು, ಕಿವಿಯಲ್ಲಿ ಒಮ್ಮೆ ಜೋರಾಗಿ ಗಾಳಿಯೂದಿ ಅವನ ಖಾಯಿಲೆಯನ್ನು ಕಳೆದವರು. ನನ್ನ ಈ ಗೆಳೆಯ ಸಾಮಾನ್ಯ ಮನುಷ್ಯನಲ್ಲ, ಜಗತ್ಪ್ರಾಣನಾದ ಮುಖ್ಯಪ್ರಾಣ ಎಂದು ತಿಳಿದಾಗ ಆ ವಾಸುದೇವ ಕುತೂಹಲದಿಂದ ತಾನು ಹಿಂದಿನ ಜನ್ಮಗಳನ್ನು ತಿಳಿಯುವ ಬಯಕೆಯನ್ನು ತೋರಿದರೆ ಅವನಿಗೆ ಅವನ ಅನಂತ ಜನ್ಮಗಳನ್ನು ನೆನಪಿಗೆ ತಂದು ಕೊಟ್ಟು ಅವನ್ನು ಆಶ್ಚರ್ಯದ ಕಡಲಿನಲ್ಲಿ ಮುಳುಗಿಸಿ ಬಿಟ್ಟವರು.

ಅವರ ನಡಿಗೆ ಅದ್ಭುತ. ಹಿಮಾಲಯದ ಬದರಿಯ ಯಾತ್ರೆಗೆ ಹೋದಾಗ, ಆ ಬದರಿಯಿಂದ ಮಹಾಬದರಿಗೆ ಹೋಗುವ ಮನಸ್ಸಾಗಿ ಆ ಹಿಮಾಲಯದ ದುರ್ಗಮವಾದ ಪರ್ವತಗಳನ್ನು ಮೆಟ್ಟಿಲುಗಳನ್ನು ಹತ್ತುವವರ ಹಾಗೆ, ಕಲ್ಲುಗಳನ್ನು ದಾಟುವವರ ಹಾಗೆ ಆಟವಾಡಿಕೊಂಡು ನಡೆದು ಹೋದ ಶ್ರೀ ಮಧ್ವಾಚಾರ್ಯರನ್ನು ಕಂಡ ಸತ್ಯತೀರ್ಥರು ತಾವು ಕಂಡು ಆಶ್ಚರ್ಯವನ್ನು ದಾಖಲಿಸಿ ಇಟ್ಟಿದ್ದಾರೆ.

ಅವರ ಧ್ವನಿ ಅದ್ಭುತ. ಭೋರ್ಗರೆವ ಸಮುದ್ರದ ತೀರದಲ್ಲಿ ಅವರು ಕುಳಿತು ಶಿಷ್ಯರಿಗೆ ಪಾಠ ಹೇಳುತ್ತಿದ್ದರೆ ಕಿವಿಗಡಚಿಕ್ಕುವ ಆ ಸಮುದ್ರದ ಧ್ವನಿಯನ್ನೂ ಮೀರಿಸುವ ಧ್ವನಿ ಅವರದಾಗಿತ್ತು. ಅಷ್ಟು ಗಂಭೀರವಾದ ಧ್ವನಿಯಾದರೂ, ಹತ್ತಿರದಲ್ಲೇ, ಎದುರಿನಲ್ಲೇ ಕುಳಿತ ಶಿಷ್ಯರಿಗೆ ಸುಶ್ರಾವ್ಯವಾಗಿ ಮಧುರವಾಗಿ ಕೇಳಿಸುತ್ತಿತ್ತು. ಪಕ್ಕದಲ್ಲಿ ಕುಳಿತವರಿಗೆ ಮತ್ತೆ ಮತ್ತೆ ಕೇಳಬೇಕನ್ನುವಷ್ಟು ಇಂಪು. ಇದಕ್ಕಿಂತ ಅದ್ಭುತವೆಂದರೆ ಈ ಎರಡೂ ಗುಣಗಳೂ ಒಂದೇ ಬಾರಿಗೆ ಅವರ ಧ್ವನಿಯಲ್ಲಿ ತೋರುತ್ತಿದ್ದವು. ಮತ್ತೂ ಅದ್ಭುತವೆಂದರೆ, ತತ್ವವನ್ನು ತಿಳಿಯಲಿಕ್ಕೆ ಯೋಗ್ಯರಲ್ಲದ ಜನ ಆಚಾರ್ಯರ ಪ್ರವಚನವನ್ನು ಕೇಳಿದರೆ ಅವರಿಗೆ ಶಬ್ದಗಳು ಕೇಳದೇ ಕೇವಲ ಒಂದು ಧ್ವನಿ ಮಾತ್ರ ಕೇಳಿಸುತ್ತಿತ್ತಂತೆ.

ಒಮ್ಮೆ ಅವರು ಶಿಷ್ಯರ ಪ್ರಾರ್ಥನೆಯಂತೆ ಸಭೆಯಲ್ಲಿ ಕುಳಿತು ಹಾಡುಗಳನ್ನು ಹಾಡುತ್ತಾರೆ. ಒಂದೊಂದು ರಾಗವೂ ಒಂದೊಂದು ವಿಸ್ಮಯವನ್ನು ಹುಟ್ಟು ಹಾಕುತ್ತಿರುತ್ತದೆ. ಇಡಿಯ ಜಗತ್ತಿಗೆ ಚೈತನ್ಯಪ್ರದರಾದ ಅವರ ಗಾನದಿಂದ ಬರಡಾಗಿದ್ದ ಮರವೊಂದು ಚಿಗುರೊಡೆಯಿತು. ಎಲೆ ಮೂಡಿತು. ಹೂ ಬಿಟ್ಟಿತು. ಕಾಯಿ ಹುಟ್ಟಿತು. ಆ ಕಾಯಿ ಹಣ್ಣಾಯಿತು. ಇಷ್ಟೆಲ್ಲ ನಡೆದದ್ದು ಒಂದೇ ರಾಗವನ್ನು ಹಾಡಲು ಆರಂಭಿಸಿ ಮುಗಿಸುವಷ್ಟರಲ್ಲಿ. ಮತ್ತೊಂದು ಮನಮೋಹಕ ರಾಗವನ್ನು ಹಾಡಲಾರಂಭಿಸಿದರೆ ಕೇಳುಗರೆಲ್ಲಾ ಇಹದ ಪರಿವೆಯನ್ನು ಮರೆತು ತನ್ಮಯರಾಗಿ ಬಿಟ್ಟಿರು. ಆನಂದದ ಪಾರವಶ್ಯದಲ್ಲಿ ಮೈಮರೆತು ನಿದ್ರೆ ಮಾಡಿ ಬಿಟ್ಟರು. ತಾಯಿಯ ಮಡಿಲಲ್ಲಿ ಜೋಗುಳ ಕೇಳುತ್ತಾ ಮಲಗಿ ಬಿಡುವ ಮಗುವಿನ ಹಾಗೆ.

ಅದರೆ, ಅವರ ಮೈಮಾಟ ಪರಮಾದ್ಭುತವಾಗಿತ್ತು. ಅಲೌಕಿಕವಾಗಿತ್ತು. ಶ್ರೀಮದಾಚಾರ್ಯರು, ಸಂನ್ಯಾಸವನ್ನು ತೆಗೆದುಕೊಂಡ ದಿವಸ, ಕಾವಿ ಬಣ್ಣದ ಕೌಪೀನವೊಂದನ್ನೇ ಮೈಮೇಲೆ ಧರಿಸಿ, ಕೈಯಲ್ಲೊಂದು ಒಣಗಿದ ಕೋಲನ್ನು ಹಿಡಿದು, ತಲೆಯ ಮೇಲಿನ ಕೂದಲನ್ನೆಲ್ಲಾ ತೆಗಿಸಿ, ಊಧ್ವ ಪುಂಡ್ರಗಳನ್ನು ಧರಿಸಿ ನಿಂತಿದ್ದರೆ ಸಂನ್ಯಾಸ ನೀಡಿದ ಅಚ್ಯುತಪ್ರೇಕ್ಷಾಚಾರ್ಯರೇ ಎವೆಯಿಕ್ಕದೇ ಅವರ ಸೌಂದರ್ಯವನ್ನು ಆಸ್ವಾದಿಸುತ್ತ ನಿಂತು ಬಿಟ್ಟರಂತೆ. ಸುತ್ತಲಿದ್ದವರೆಲ್ಲ ಇದೆಂಥ ಅನುಪಮ ಮೈಮಾಟ ಎಂದು ಬೆರಗಾಗಿ ನಿಂತರಂತೆ. ಈ ಶ್ರೀಮದಾಚಾರ್ಯರನ್ನು ನೋಡಲಿಕ್ಕೆಂದೇ ಜನ ಸಾಲುಗಟ್ಟಿ ನಿಲ್ಲುತ್ತಿದ್ದರಂತೆ, ಗುಂಪುಗಟ್ಟಿಕೊಂಡು ಬರುತ್ತಿದ್ದರಂತೆ.

ಮದ್ವಾಚಾರ್ಯರು ನೋಡಲು ಹೇಗಿದ್ದರು? ಅವರ ಆ ಪರಮಾದ್ಭುತ ದೇಹವೇ ಹಾಗಿತ್ತು. ಎಂಟಡಿ ಎತ್ತರದ, ನಿಖರವಾಗಿ ೯೬ ಅಂಗುಲದ ಎತ್ತರದ ದೇಹ. ಬಂಗಾರದ ಮೈಬಣ್ಣ. ಆ ದೇಹಕ್ಕೆ ತಕ್ಕುದಾದ ಹದಿಮೂರು ಮುಕ್ಕಾಲು ಅಂಗುಲದಷ್ಟು ಉದ್ದನೆಯ ಪಾದ. ದುಂಡಗೆ ದಪ್ಪಗಾಗಿ ಹೋಗುವ ನೀಳವಾದ ಕಾಲುಗಳು. ತೆಳುವಾದ ಹೊಟ್ಟೆ. ಆಳವಾದ ಪ್ರದಕ್ಷಿಣಾಕಾರದ ನಾಭಿ. ಉಬ್ಬಿನಿಂತ ವಿಶಾಲವಾದ ಎದೆ. ಸುಮ್ಮನೆ ಸಹಜವಾಗಿ ನಿಂತರೆ ಮೊಣಕಾಲನ್ನು ಮುಟ್ಟುವ ದಪ್ಪ ಹಾವಿನಂತಹ ಕೈಗಳು. ಮೊಣಕೈಯಿಂದ ಲೆಕ್ಕ ಹಾಕಿದರೆ ಬೆರಳಿನವರೆಗೆ ಸರಿಯಾಗಿ ಎರಡು ಅಡಿಗಳು. ನುಣುಪಾದ ದುಂಡಗಿನ ಕಂಠ. ಅದಕ್ಕೆ ಶೋಭೆ ನೀಡುವಂತೆ ಸ್ವಾಭಾವಿಕವಾಗಿ ಮೂಡಿರುವ ಮೂರುಗೆರೆಗಳು. ಅದ್ಭುತ ಕಳೆಯನ್ನು ಹೊತ್ತು ನಿಂತ ಮುಖ. ಎಂಥ ದುಃಖದಲ್ಲಿ ಬಿದ್ದವನನ್ನೂ ಸಂತಸದಲ್ಲಿ ಮುಳುಗಿಸಿಬಿಡುವ ಮಂದಹಾಸ. ಕೆಂಪಾದ ತುಟಿಗಳು. ಮಾಣಿಕ್ಯದ ಕಟ್ಟಿನಲ್ಲಿ ಜೋಡಿಸಿಟ್ಟ ಮುತ್ತುಗಳಂತೆ, ಅವುಗಳ ಮಧ್ಯದಲ್ಲಿ ಹಲ್ಲುಗಳು. ನೀಳವಾದ ನಾಸಿಕ. ಅನಂತ ಜ್ಞಾನದ ಹೊಳಪನ್ನು ತುಂಬಿಕೊಂಡ ಪ್ರಕಾಶಮಯವಾದ ಕಣ್ಣುಗಳು. ಸಂಶಯ, ಅಜ್ಞಾನ, ಭ್ರಾಂತಿಗಳನ್ನು ನಿರ್ಮೂಲ ಮಾಡಿ ಬಿಡುವ ನೋಟ. ತಿದ್ದಿ ತೀಡಿದಂತಹ ಹುಬ್ಬುಗಳು. ವಿಶಾಲವಾದ ಹಣೆ. ಇಡಿಯ ದೇಹಕ್ಕೆ ಮತ್ತಷ್ಟು ಮೆರಗು ನೀಡಿದ ಊರ್ಧ್ವ ಪುಂಢ್ರಗಳು.

ಆಚಾರ್ಯರನ್ನು ಪರೀಕ್ಷಿಸಲು ಹೋಗಿ ಬಸವಳಿದು ಬಂದ ಜಟ್ಟಿಗಳಿದ್ದರು. ಅದೆಂಥದೋ ಕೋಡಿಂಜಾಡಿ ಎಂಬ ತೌಳವ ಹೆಸರಿನ ಒಬ್ಬ ಜಟ್ಟಿ ಕಾಂತಾವರದ ದೇವಸ್ಥಾನದಲ್ಲಿರುವ ಧ್ವಜಸ್ತಂಭವನ್ನು - ಸುಮಾರು ಮೂವತ್ತು ಜನ ಕೂಡಿದರೆ ಮಾತ್ರ ಎತ್ತಲಿಕ್ಕಾಗುವಂಥ ಧ್ವಜಸ್ತಂಭವನ್ನು - ಒಬ್ಬನೇ ಎತ್ತಿ ತಂದ್ದಿದ್ದವನಂತೆ, ತನ್ನ ತಮ್ಮನ ಜತೆಯಲ್ಲಿ ಆಚಾರ್ಯರನ್ನು ಪರೀಕ್ಷಿಸಬೇಕೆಂದೇ ಬರುತ್ತಾನೆ, ಆಚಾರ್ಯರು ಪಾಠ ಹೇಳುತ್ತಾ ಕುಳಿತಿದ್ದ ಸಮಯದಲ್ಲಿ. ಅವನನ್ನು ಕರೆತಂದವರು, ಆಚಾರ್ಯರ ಮೈಬಲವನ್ನು ಕಾಣಬೇಕೆಂದಿದ್ದವರು ಎಲ್ಲರೂ ಅವನ ಬಯಕೆಯನ್ನು ಆಚಾರ್ಯರಿಗೆ ತಿಳಿಸಿದರು. ಒಪ್ಪಿದ ಆಚಾರ್ಯರು ಹೇಳಿದರಂತೆ, ‘‘ಶಾಸ್ತ್ರಪಾಠವನ್ನು ಮಧ್ಯದಲ್ಲಿ ನಿಲ್ಲಿಸುವದು ಸಾಧ್ಯವಿಲ್ಲ. ಇವರ ಜತೆಯಲ್ಲಿ ಕುಸ್ತಿಯಾಡಲಿಕ್ಕೆ ನನ್ನ ಬಳಿ ಸಮಯವಿಲ್ಲ. ಬೇಕಾದರೆ ಈಗಲೇ ಬರಲಿ, ಪಾಠ ಹೇಳುತ್ತಿರುತ್ತೇನೆ, ನನ್ನ ಕಂಠವನ್ನು ಬಿಗಿಯಾಗಿ ಅದುಮಿ ನನ್ನ ಮಾತು ನಿಲ್ಲುವಂತೆ ಮಾಡಿದಲ್ಲಿ ಅವರು ಗೆದ್ದಂತೆ, ನಾನು ಸೋತಂತೆ'' ಆಚಾರ್ಯರ ಆಹ್ವಾನವನ್ನು ಸ್ವೀಕರಿಸಿ, ‘ಇದು ಯಾತರದ್ದು' ಅಂದುಕೊಂಡು ಆ ಗಂಡವಾಟ (ಕೋಡಿಂಜಾಡಿ) ಶಿಷ್ಯರಿಗೆ ಪ್ರಶಾಂತವಾಗಿ ಪಾಠ ಹೇಳುತ್ತಿದ್ದ ಆಚಾರ್ಯರ ಹಿಂಬದಿಯಲ್ಲಿ ನಿಂತು ಅವರ ಕಂಠವನ್ನು ಬಿಗಿಯಾಗಿ ಅದುಮಲಿಕ್ಕಾರಂಭಿಸುತ್ತಾನೆ. ಆಚಾರ್ಯರ ಧ್ವನಿಯಲ್ಲಿ ಎಳ್ಳಷ್ಟೂ ವಿಕಾರವಿಲ್ಲ. ತನ್ನನ್ನು ಯಾರೂ ಮುಟ್ಟಿಯೇ ಇಲ್ಲವೇನೋ ಎಂಬಂತೆ ಆಚಾರ್ಯರು ನಿರಾಯಾಸವಾಗಿ ಪಾಠ ಹೇಳುತ್ತಿದ್ದಾರೆ. ಸುತ್ತಲಿದ್ದ ಜನ ವಿಸ್ಮಯದಿಂದ ಕಣ್ಣರಳಿಸಿ ಈ ಆಶ್ಚರ್ಯವನ್ನು ನೋಡುತ್ತಿದ್ದಾರೆ. ಜಟ್ಟಿಗಳೇನು, ಸುಮ್ಮನೇ ಪ್ರೀತಿಯಿಂದ ಗಟ್ಟಿಯಾಗಿ ತಬ್ಬಿಕೊಂಡರೇ ಉಸಿರು ಬಿಗಿಯಾಗಿ ಬಿಡುತ್ತದೆ, ಅಷ್ಟು ಮೃದುವಾದದ್ದು ಕಂಠದ ಪ್ರದೇಶ, ಅದನ್ನು ಈ ಜಟ್ಟಿ, ಮೂವತ್ತು ಜನರ ಬಲಕ್ಕೆ ಸಾಟಿಯಾದವನು ಗಟ್ಟಿಯಾಗಿ ಹಿಡಿದು ಹಿಸುಕುತ್ತಿದ್ದರೂ ಆಚಾರ್ಯರ ಕಂಠದಲ್ಲಿ ಧ್ವನಿಯಲ್ಲಿ ಕಣ್ಣಿನಲ್ಲಿ ವಿಕಾರವಿಲ್ಲ. ನೆರೆನಿಂತವರಿಗೆ ಆಶ್ಚರ್ಯವಾಗದೇ ಮತ್ತೇನಾಗಬೇಕು. ಆದರೆ ಆ ಗಂಡವಾಟ ಅಷ್ಟು ಸುಲಭವಾಗಿ ಸೋಲನ್ನೊಪ್ಪಿಕ್ಕೊಳ್ಳುವದಿಲ್ಲ. ತನ್ನ ತಮ್ಮನನ್ನೂ ಕರೆಸಿಕೊಳ್ಳುತ್ತಾನೆ. ಇಬ್ಬರೂ ಅಕ್ಕಪಕ್ಕದಲ್ಲಿ ನಿಂತು ತಮ್ಮ ಒರಟು ಕೈಗಳಿಂದ ಆಚಾರ್ಯರ ಕಂಠವನ್ನು ಆವರಿಸಿ ಹಿಸುಕಲಿಕ್ಕಾರಂಭಿಸುತ್ತಾರೆ. ತಮ್ಮ ಇಡಿಯ ದೇಹದ ಬಲವನ್ನೆಲ್ಲಾ ಕೈಗೆ ತಂದುಕೊಂಡು ಅದುಮುತ್ತಿದ್ದಾರೆ. ಆದರೆ ಆಚಾರ್ಯರಿಗೆ ಏನೂ ಆಗುತ್ತಿಲ್ಲ. ಆದರೆ ಈ ಜಟ್ಟಿಗಳೂ ಸೋಲನ್ನೊಪ್ಪಿಕ್ಕೊಳ್ಳುತ್ತಿಲ್ಲ. ಹುಟ್ಟಿನಿಂದ ಗರಡಿಮನೆಯಲ್ಲಿ ಮೈಯನ್ನು ಹುರಿಗಟ್ಟಿಸಿ, ಮತ್ತೊಬ್ಬರಿಗಾಗದ್ದನ್ನು ಮಾಡಿ ತೋರಿಸಿ, ಭಾರೀ ಬಲದವರು ಎಂದು ನಾಡಲ್ಲೆಲ್ಲಾ ಹೆಸರು ಮಾಡಿ ಈಗ ಹಾಲಿನನ್ನವನ್ನು ತಿಂದು ಬದುಕುವ ಒಬ್ಬ ಸಂನ್ಯಾಸಿಯ ಕತ್ತು ಹಿಸುಕಲಿಕ್ಕಾಗಲಿಲ್ಲವೆಂದರೆ ಎಂಥ ಅವಮಾನ! ಅದರ ಭಯದಿಂದ ಮತ್ತಷ್ಟು ಜೋರಾಗಿ ಅದುಮಲು ಮೊದಲು ಮಾಡುತ್ತಾರೆ. ಆಚಾರ್ಯರು, ಅವರನ್ನು ಕಾಡಿಸಲಿಕ್ಕಾಗಿಯೇ ಧ್ವನಿಯನ್ನು ತಾರಕಕ್ಕೇರಿಸಿ ಮಾತನಾಡಲು ಆರಂಭಿಸುತ್ತಾರೆ. ಅವರು ಒತ್ತಿದಷ್ಟೂ ಒತ್ತಿದಷ್ಟೂ ಧ್ವನಿಯನ್ನ ಗಟ್ಟಿ ಮಾಡುತ್ತಾ ಹೋಗುತ್ತಾರೆ. ಜಟ್ಟಿಗಳ ಮೈಯಲ್ಲಿ ಬೆವರು ಸುರಿಯಲು ಮೊದಲಾಯಿತು. ಆಚಾರ್ಯರೇ ಇಬ್ಬರು ಶಿಷ್ಯರನ್ನು ಕರೆಯಿಸಿ ಅವರಿಗೆ ಗಾಳಿ ಬೀಸಲು ಹೇಳಿದರು. ಆ ಇಬ್ಬರು ಹುಡುಗರು, ನಸುನಗುತ್ತಾ ಈ ಜಟ್ಟಿಗಳಗೆ ಗಾಳಿ ಬೀಸುತ್ತಿದ್ದಾರೆ. ಏನಾದರೂ, ಅವರಿಬ್ಬರಿಗೆ ಅಚಾರ್ಯರ ಕಂಠವನ್ನು ಅದುಮಲಿಕ್ಕೆ ಸಾಧ್ಯವಾಗುವದಿಲ್ಲ. ದೇಹದಲ್ಲಿನ ತ್ರಾಣವನ್ನೆಲ್ಲಾ ಕಳೆದುಕೊಂಡು ಆಯಾಸದಿಂದ ಕುಸಿದು ಕುಳಿತುಬಿಡುತ್ತಾರೆ. ಇದೊಂದು ಸಣ್ಣ ನಿದರ್ಶನ. ಟನ್ನುಗಟ್ಟಲೆ ಭಾರವಿದ್ದ ಬಂಡೆಯನ್ನು ಆಚಾರ್ಯರು ಭದ್ರಾನದಿಯ ಅಡ್ಡಲಾಗಿ ಇಟ್ಟದ್ದನ್ನು ನಾವು ಇಂದಿಗೂ ಕಾಣುತ್ತೇವೆ.
-----------------------------------------------------------------------------------------------------------------
ಗಂಗೆಯ ತೀರದ ಒಂದು ಊರು. ಆಚೆಯ ತಡಿಯಲ್ಲಿ ಮುಸ್ಲಿಂ ದೊರೆಯೊಬ್ಬನ (ಈತ ಜಲಾಲುದ್ದೀನ್ ಖಿಲ್ಜಿ ಇರಬೇಕು ಎಂದು ವಿದ್ವಾಂಸರ ಅಭಿಪ್ರಾಯ) ರಾಜ್ಯ. ನದಿಯ ಸುತ್ತ ಸೈನಿಕರ ಭದ್ರಕಾವಲು. ದಾಟಲು ದೋಣಿಯ ವ್ಯವಸ್ಥೆಯೂ ಇಲ್ಲ. ಎಲ್ಲಿ ನೆರೆಯ ಹಿಂದೂ ರಾಜನ ಗೂಢಚಾರರು ಬಂದುಬಿಡುತ್ತಾರೋ ಎನ್ನುವ ಭಯ! ಈಚೆಯ ತಡಿಯಲ್ಲಿ ಧೀರ ಸನ್ಯಾಸಿಯೊಬ್ಬರು ಶಿಷ್ಯ ಪರಿವಾರದೊಡನೆ ನಿಂತಿದ್ದಾರೆ. ಮುಂದೆ ಸಾಗುವ ಬಗೆ ಹೇಗೆ? ಶಿಷ್ಯರಿಗೆ ಚಿಂತೆ. ಶಿಷ್ಯರ ಕಳವಳ ಗುರುವಿಗೆ ಅರಿವಾಯಿತು. ಅವರು ತಮ್ಮ ವ್ಯಕ್ತಿತ್ವದಷ್ಟೆ ಗಂಭೀರವಾದ ದನಿಯಿಂದ ನುಡಿದರು. “ಹೆದರಬೇಡಿ. ನಾವು ಸಂಸಾರದ ನದಿಯನ್ನೇ ದಾಟಿಸುವೆವು, ಹೀಗಿರುವಾಗ ಗಂಗೆಯನ್ನು ದಾಟಿಸಲಾರೆವೆಂದು ತಿಳಿದಿರಾ? ನನ್ನ ಬೆನ್ನ ಹಿಂದೆಯೆ ನೀರಿಗಿಳಿದು ಧೈರ್ಯವಾಗಿ ನಡೆದು ಬನ್ನಿ.” ನೀರಿನಲ್ಲಿ ನಡೆದು ಬರುತ್ತಿದ್ದ ಸಂನ್ಯಾಸಿಗಳನ್ನು ಕಂಡು ಸೈನಿಕರು ಕೂಗಿದರು “ಇತ್ತ ಬರಬೇಡಿ ಬಂದು ಸಾಯಬೇಡಿ” ಇತ್ತಕಡೆಯಿಂದ ಮಧ್ವರು ಕೂಗಿ ಹೇಳಿದರು “ಹೆದರಬೇಡಿ!”. ಜೊತೆಯಿದ್ದವರೋ ಕೆಲವೊಂದು ಸಂನ್ಯಾಸಿಗಳು. ಅತ್ತ ಕಡೆಯೋ ಶಸ್ತ್ರಸಜ್ಜಿತ ಸಾವಿರಾರು ಸೈನಿಕರು. ಆದರೆ ಈ ಸಂನ್ಯಾಸಿ ಹೇಳುತ್ತಿದ್ದಾರೆ “ಹೆದರಬೇಡಿ” ಎಂದು. ಸಿಕ್ಕವರನ್ನೆಲ್ಲಾ ತುಂಡರಿಸಿ ಅತ್ತಕಡೆ ಬಾರದಂತೆ ಮಾಡುತ್ತಿದ್ದ ಸೈನಿಕರಿಗೆ ಈ ಯತಿಯ ಮಾತು ಕೇಳಿ ವಿಸ್ಮಯ. ಇಂತಹ ನಿರ್ಭಯ ವ್ಯಕ್ತಿತ್ವವನ್ನು ಅವರು ಕಂಡದ್ದೇ ಇಲ್ಲ. ಏನೂ ಮಾಡುವುದು ತಿಳಿಯದೆ, ದಡಕ್ಕೆ ಸೇರಿದೊಡನೆ ದೊರೆಯ ಬಳಿ ಕರೆದೊಯ್ದು ವಿಷಯ ತಿಳಿಸಿದರು. ದೊರೆಗೂ ಅಚ್ಚರಿ. ಕೇಳಿದ, “ಇಷ್ಟೊಂದು ಸೈನಿಕರಿರುವಾಗ ನಿಮಗೆ ಇಲ್ಲಿಯವರೆಗೆ ಬರಲು ಧೈರ್ಯ ಬಂದದ್ದಾದರೂ ಹೇಗೆ?” ಆಚಾರ್ಯ ಮಧ್ವರು ನುಡಿದರು “ನಿನ್ನ ತಂದೆ ನನ್ನ ತಂದೆ ಒಂದೇ ಆಗಿರುವಾಗ ಹೆದರಿಕೆಯಾದರೂ ನಮಗೇಕೆ?”. ಆಚಾರ್ಯರ ಮಾತು ಕೇಳಿ ದೊರೆ ದಂಗುಬಡಿದು ಹೋದ. ಆಚಾರ್ಯರು ನಗುತ್ತ ವಿವರಿಸಿದರು “ನಿನ್ನ, ನನ್ನ, ನಮ್ಮೆಲ್ಲರ ದೇವರು ? ಜಗತ್ತನ್ನೆ ಬೆಳಗುವ ಭಗವಂತ ಅಲ್ಲಿದ್ದಾನೆ. ನಿನಗೆ ಅವನು ಅಲ್ಲಾ. ನನಗೆ ನಾರಾಯಣ. ಯಾವ ಹೆಸರಿನಿಂದ ಕರೆದರೂ ಓಗೊಡುವ ದೇವರು ಒಬ್ಬನೇ. ತಲೆಗೊಬ್ಬ ದೇವರಿಲ್ಲ. ನೀನು, ನಾನು, ನಾವೆಲ್ಲ ಅವನ ರಾಜ್ಯದ ಪ್ರಜೆಗಳು. ಅವನ ಅನುಗ್ರಹದಿಂದಲೇ ನಾವು ದೋಣಿ ಇಲ್ಲದೆ ನದಿಯನ್ನು ದಾಟಿದೆವು; ಕೊಲ್ಲ ಬಂದ ನಿನ್ನ ಸೈನಿಕರ ಮನವೊಲಿಸಿ ಇತ್ತ ಬಂದೆವು. ಇದೆಲ್ಲ ಅವನ ಕರುಣೆ. ನಾವು ನಿನ್ನ ರಾಜ್ಯದ ಮಾರ್ಗವಾಗಿ ಉತ್ತರಕ್ಕೆ ಹೊರಟವರು??..” ಆ ಗಾಂಭೀರ್ಯ, ಎದೆಗಾರಿಕೆ, ಆತ್ಮಶಕ್ತಿ, ದಿವ್ಯ ತೇಜಸ್ಸು ಕಂಡು, ಆ ಮೋಡಿಯ ಮಾತುಗಳನ್ನು ಕೇಳಿ ಮುಸ್ಲಿಂ ದೊರೆ ಬೆರಗಾದ. ಅಟ್ಟದಿಂದ ಇಳಿದು ಬಂದು ಸಂನ್ಯಾಸಿಯನ್ನು ಪರಿಪರಿಯಾಗಿ ಸತ್ಕರಿಸಿದ. ತನ್ನ ರಾಜ್ಯದಲ್ಲೇ ಬಹುದೊಡ್ಡ ಜಹಗೀರನ್ನು ಬಿಟ್ಟು ಕೊಡುತ್ತೇನೆ, ಎಲ್ಲ ಸೌಕರ್ಯವನ್ನೂ ಮಾಡಿಕೊಡುತ್ತೇನೆ, ಅಲ್ಲೆ ಆಶ್ರಮ ಕಟ್ಟಿಕೊಂಡಿರುವಂತೆ ಭಿನ್ನವಿಸಿಕೊಂಡ. ಈ ಧೀರ ಸಂನ್ಯಾಸಿ ರಾಜನ ಈ ಕೊಡುಗೆಯನ್ನು ಸೌಜನ್ಯದಿಂದಲೆ ಬೇಡವೆಂದರು. ಶಿಷ್ಯ ಪರಿವಾರದೊಡನೆ ಉತ್ತರಾಭಿಮುಖವಾಗಿ ಬದರಿಯತ್ತ ಹೊರಟೇಬಿಟ್ಟರು.
-------------------------------------------------------------------------------------------------------------------
“ದೇವರನ್ನು ಹೇಗೆ ಕರೆಯಲಿ ಎಂದು ಗೊಂದಲವೇಕೆಬೇಕು.. ಯಾವ ಭಾಷೆಯ ಯಾವ ಹೆಸರಿನಿಂದಲೂ ಅವನನ್ನು ಕರೆಯಬಹುದು. ಏಕೆಂದರೆ ಅವನ ಹೆಸರಿಲ್ಲದ ಯಾವ ನುಡಿಯೂ ಈ ಜಗತ್ತಿನಲ್ಲಿಲ್ಲ. ನಮ್ಮ ಆಡು ಮಾತಷ್ಟೆ ಅಲ್ಲ ? ಇಡಿಯ ಪ್ರಕೃತಿಯೇ ಭಗವಂತನ ಗುಣಗಾನಕ್ಕೆ ಶ್ರುತಿ ಹಿಡಿದಿದೆ. ಸಮುದ್ರದ ಮೊರೆತ, ಗಾಳಿಯ ಸುಯಿಲು, ಹಕ್ಕಿಗಳ ಚಿಲಿಪಿಲಿ, ಪ್ರಾಣಿಗಳ ಕೂಗು ? ಜಗತ್ತಿನ ಎಲ್ಲ ನಾದವೂ ಭಗವಂತನ ಗುಣಗಾನ. ಎಲ್ಲ ನಾದದಲ್ಲಿ ಭಗವಂತನ ಹಿರಿಮೆಯನ್ನು, ಎಲ್ಲಡೆಯಲ್ಲೂ ಭಗವಂತನ ಇರವನ್ನು ಕಾಣಲು ಕಲಿಯಿರಿ; ಭಗವನ್ಮಯವಾಗಿ ಬಾಳಿರಿ.”

ಪ್ರಾಚೀನ ದಾಖಲೆಗಳಲ್ಲಿ ಕಂಡುಬರುವಂತೆ ಉಡುಪಿಯಲ್ಲಿ ಕೃಷ್ಣಪ್ರತಿಷ್ಠೆಯ ಕಥೆ ಹೀಗಿದೆ: ದ್ವಾರಕೆಯಿಂದ ಹಡಗೊಂದು ಹೊರಟಿತು. ಸಾಮಾನಿನ ಜೊತೆಗೆ ಕೆಲವು ಗೋಪಿಚಂದನದ ಗಟ್ಟಿಗಳನ್ನು ಅದರಲ್ಲಿರಿಸಿದ್ದರು. ಉಡುಪಿಯಿಂದ ಮೂರು ಮೈಲಿ ಪಶ್ಚಿಮದಲ್ಲಿ ಮಲ್ಪೆಯ ಸಮುದ್ರತೀರದಲ್ಲಿ ಈ ದೋಣಿ ಸಾಗುತ್ತಿದ್ದಾಗ ಗಾಳಿಯ ಸುಳಿಗೆ ಸಿಕ್ಕ ದೋಣಿ ದಾರಿ ತಪ್ಪಿ ಬಂಡೆಯೊಂದಕ್ಕೆ ಬಡಿಯಿತು. ದೋಣಿ ಒಡೆದು ಸಮುದ್ರತಳವನ್ನು ಸೇರಿತು. ಒಂದು ದಿನ ಧ್ಯಾನಯೋಗದಿಂದ ಎದ್ದ ಆಚಾರ್ಯರು ಇದ್ದಕ್ಕಿದ್ದಂತೆ ಮಲ್ಪೆಯತ್ತ ಹೊರಟರು. ಸಮುದ್ರತಳದಲ್ಲಿ ಮುಳುಗಿದ್ದ ಭಗವಂತನನ್ನು ಉಪ್ಪುನೀರಿನಿಂದ ತೆಗೆಸಿ ಉಡುಪಿಗೆ ಹೊತ್ತು ತಂದರು. ಜಲಾಧಿವಾಸದ ಅನಂತರ ತನ್ನ ಮಠದಲ್ಲಿ ಪ್ರತಿಷ್ಠಿಸಿದರು. ಹೀಗೆ ಹಲವು ವರ್ಷಗಳ ಕಾಲ ಶ್ರೀಕೃಷ್ಣನನ್ನು ಆಚಾರ್ಯರು ಸ್ವಯಂ ಪೂಜಿಸಿದರು. ಹೀಗೆ ಏಳು ಶತಕಗಳಿಂದ ಶ್ರೀಕೃಷ್ಣ ಉಡುಪಿಯ ಅಧಿದೈವವಾಗಿ ನಾಡಿನ ಭಕ್ತರಿಗೆ-ಭಾವುಕರಿಗೆ ಅಭೀಷ್ಟ ಪ್ರಧಾನ ದೀಕ್ಷಿತನಾಗಿ ಉಡುಪಿಯಲ್ಲಿ ನೆಲೆಸಿದ್ದಾನೆ. ಇದು ಅತ್ಯಂತ ಪುರಾತನ ಪುರಾವೆಗಳಲ್ಲಿ ದೊರೆಯುವ, ಸಂಪ್ರದಾಯಜ್ಞರು ಒಪ್ಪಿಕೊಂಡು ಬಂದ ಐತಿಹ್ಯ.

ಆಚಾರ್ಯರು ಮುಂದಿನ ಪೀಳಿಗೆಗಾಗಿ ನಲ್ವತ್ತು ಗ್ರಂಥಗಳನ್ನು ಬರೆದಿಟ್ಟರು. ಅವು ಮೇಲುನೋಟಕ್ಕೆ ಮಕ್ಕಳಿಗೂ ಅರ್ಥವಾಗುವಂಥ ಸರಳ ಗ್ರಂಥಗಳು; ಓದಿದಷ್ಟೂ ಆಳಕ್ಕೆ ಕೊಂಡೊಯ್ಯಬಲ್ಲ, ಪಂಡಿತರಿಗೂ ದುರೂಹ್ಯವಾದ ಮಹಾಗ್ರಂಥಗಳು. ಸಂನ್ಯಾಸಿಯಾದ ತರುಣದಲ್ಲೇ ಕನ್ಯಾಕುಮಾರಿ, ರಾಮೇಶ್ವರ, ಅನಂತ ಶಯನ, ಶ್ರೀರಂಗ ಇತ್ಯಾದಿ ದಕ್ಷಿಣದ ಎಲ್ಲ ಕ್ಷೇತ್ರಗಳನ್ನೂ ಸಂದರ್ಶಿಸಿದರು. ಒಟ್ಟು ಮೂರು ಬಾರಿ ಉತ್ತರದ ತುತ್ತತುದಿಯ ಬದರಿಯ ತನಕ ಸಂಚರಿಸಿ ಬಂದರು. ಉಡುಪಿಯಲ್ಲಿ ಬರೆದ ಪ್ರಥಮ ಕೃತಿ ಗೀತಾ ಭಾಷ್ಯವನ್ನು ಬದರಿಯಲ್ಲಿ ಗುರು ವೇದವ್ಯಾಸರಿಗೆ ಅರ್ಪಿಸಿದರು. ಅಲ್ಲೇ ನಿಂತು ಬ್ರಹ್ಮ ಸೂತ್ರಗಳಿಗೆ ಭಾಷ್ಯ ಬರೆದರು. ಆಚಾರ್ಯರು ದೇಶದಾದ್ಯಂತ ಸಂಚರಿಸಿ ಉಡುಪಿಗೆ ಮರಳಿ ಬಂದಾಗ ಶಿಷ್ಯನ ಭಾಷ್ಯಕೃತಿಯನ್ನು ಗುರು ಅಚ್ಯುತಪ್ರಜ್ಞರೂ ಓದಿದರು. ಆಚಾರ್ಯರೊಡನೆ ಚರ್ಚೆ ನಡೆಸಿ ತಮ್ಮ ಸಂಶಯಗಳನ್ನು ಪರಿಹರಿಸಿಕೊಂಡು ತಾವೂ ಆಚಾರ್ಯರ ಸಿದ್ಧಾಂತದ ಅನುಯಾಯಿಯಾದರು. ಗುರುವಿಗೇ ಸಿದ್ಧಾಂತದ ದೀಕ್ಷೆಕೊಟ್ಟ ಶಿಷ್ಯನೆನಿಸಿದರು.

ಭಗವದ್ಗೀಗೀತೆಗೆ ಬರೆದ ಭಾಷ್ಯದಲ್ಲಿ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಸಾಗಿ ಹೀಗೆ ಸಾರಿದ್ದಾರೆ: “ಜಾತಿಪದ್ಧತಿ ಎನ್ನುವುದು ದೇಹಕ್ಕಿಂತ ಹೆಚ್ಚು ಸ್ವಭಾವಕ್ಕೆ ಸಂಬಂಧಿಸಿದ್ದು. ಹುಟ್ಟಿನಿಂದ ಒಬ್ಬನು ಯಾವ ಜಾತಿ ಎನ್ನುವುದು ಮುಖ್ಯವಲ್ಲ. ಅವನ ಸ್ವಭಾವವೇ ಅವನ ಜಾತಿಯ ನಿರ್ಣಾಯಕ. ಮೂಲತಃ ಜಾತಿಪದ್ಧತಿ ಎನ್ನುವುದು ಮನುಷ್ಯನ ಸ್ವಭಾವದ ವಿಭಾಗ. ಅಧ್ಯಾತ್ಮದ ಗಂಧ ಗಾಳಿಯೂ ಇಲ್ಲದ ವೇಷಮಾತ್ರ ಬ್ರಾಹ್ಮಣನಿಗಿಂತ ಆಧ್ಯಾತ್ಮದ ದಾರಿ ತುಳಿದ ಚಂಡಾಲ ಮೇಲು” ಜಾತಿ-ಮತ ಪದ್ಧತಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದ ಹದಿಮೂರನೆಯ ಶತಕದ ಸಂಪ್ರದಾಯಬದ್ಧ ಭಾರತದಲ್ಲಿ ಬದುಕಿದ್ದ ಆಚಾರ್ಯರು ಇಂಥ ಪ್ರಗತಿಶೀಲ ವಿಚಾರಗಳನ್ನು ಮಂಡಿಸಿದ್ದರು ಎನ್ನುವುದು ತುಂಬಾ ಆಶ್ಚರ್ಯದ ಸಂಗತಿ. ತಮ್ಮ ತತ್ತ್ವವಾದವನ್ನು ಜನರಿಗೆ ತಿಳಿಯಪಡಿಸಲು ಆಚಾರ್ಯರು ‘ಪ್ರಸ್ಥಾನತ್ರಯ’ (ಗೀತೆ, ದಶೋಪನಿಷತ್ತುಗಳು ಮತ್ತು ಬ್ರಹ್ಮಸೂತ್ರ)ಗಳಿಗೆ ಭಾಷ್ಯ ಬರೆದರು. ಮಹಾಭಾರತ, ಪುರಾಣಗಳ ತಾತ್ತ್ವಿಕ ವಿಮರ್ಶೆಗಾಗಿ “ಮಹಾಭಾರತ ತಾತ್ಪರ್ಯ ನಿರ್ಣಯ” ಬರೆದರು. ಭಾಗವತಕ್ಕೆ ತಾತ್ಪರ್ಯ ಬರೆದರು. ಋಗ್ವೇದಕ್ಕೆ ಭಾಷ್ಯ ಬರೆದರು. ಯಮಕ ಕಾವ್ಯವೊಂದನ್ನೂ ಹಾಡು ಗಬ್ಬಗಳನ್ನೂ ರಚಿಸಿದರು. ಪುರಾಣ ಶ್ಲೋಕಗಳನ್ನು ಸಂಗ್ರಹಿಸಿ ‘ಕೃಷ್ಣಾಮೃತ ಮಹಾರ್ಣವ’ ಬರೆದರು. ವಾಸ್ತುಶಿಲ್ಪ -ಪ್ರತಿಮಾಶಿಲ್ಪದ ಅಪೂರ್ವ ವಿವರಗಳನ್ನೊಳಗೊಂಡ ‘ತಂತ್ರಸಾರಸಂಗ್ರಹ’ ಬರೆದರು. ಅಪೂರ್ವ ಗಣಿತ ಗ್ರಂಥ ‘ತಿಥಿ ನಿರ್ಣಯ’ವನ್ನೂ ಬರೆದರು. ಇನ್ನೂ ಅನೇಕ ಗ್ರಂಥಗಳನ್ನು ಬರೆದರು. ಇಷ್ಟೆ ಅಲ್ಲ, ಸಂಗೀತದಲ್ಲೂ ಅವರ ವಿದ್ವತ್ತು ಅಸಾಧಾರಣವಾಗಿತ್ತು. ಶ್ರೇಷ್ಠ ಗೇಯಕಾವ್ಯವಾದ ದ್ವಾದಶ ಸ್ತೋತ್ರಗಳ ರಚನೆ, ಇಷ್ಟೇ ಅಲ್ಲದೆ ಅವನ ಜೀವನದ ಒಂದು ಘಟನೆಯೂ ಇದಕ್ಕೆ ಸಾಕ್ಷಿ ಹೇಳುತ್ತದೆ. ಗೋವೆಯಿಂದ ಹೊರಟ ಆಚಾರ್ಯರು ಪಶುಪೆ ಎಂಬಲ್ಲಿ ತಂಗಿದ್ದರು. ಆಚಾರ್ಯರ ಕಂಠ ಮಾಧುರ್ಯ - ಸಂಗೀತ ಪಾಂಡಿತ್ಯಗಳ ಬಗೆಗೆ ಕೇಳಿ ತಿಳಿದಿದ್ದ ಜನ ಅವರ ಸಂಗೀತವನ್ನೆ ಕೇಳಬಯಸಿದರು. ಜನರ ಬಯಕೆಯಂತೆ ಆಚಾರ್ಯರು ಹಾಡತೊಡಗಿದರು. ಕೇಳಿದ ಜನ ಮೈಮರೆಯುವಂತಹ ಮಾಧುರ್ಯ. ಹೀಗೆ ಆಚಾರ್ಯರು ತಮ್ಮ ಜೀವನದುದ್ದಕ್ಕೂ ಭಗವಂತನ ಗುಣಗಾನವನ್ನು ಮಾಡಿದರು. ಈ ಕಾರ್ಯಕ್ಕೆ ಎದುರಾದ ಅಡ್ಡಿ-ಆತಂಕಗಳನ್ನು ಧೀರತೆಯಿಂದ ಎದುರಿಸಿದರು. ಚಿಕ್ಕ ಹುಡುಗನಾಗಿದ್ದಾಗಲೆ ತಮ್ಮನ್ನು ಕಡಿಯಲೆಂದು ಬಂದ ಕಾಳಿಂಗ ಸರ್ಪವನ್ನು ಕಾಲಲ್ಲಿ ಹೊಸಕಿ ಹಾಕಿದ ಆಚಾರ್ಯರಿಗೆ ಭಯವೆಂದರೇನೆಂದು ತಿಳಿಯದು. ಅವರು ಯಾವ ಆತಂಕಕ್ಕೂ ಎದೆಗೆಡಲಿಲ್ಲ. ಎಂದೂ ಇನ್ನೊಬ್ಬರಿಗೆ ತಲೆಬಾಗಲಿಲ್ಲ. ತಮ್ಮ ಜೀವನದ ಉದ್ದೇಶ ಅವರಿಗೆ ಸ್ಫುಟವಾಗಿತ್ತು. ಅದನ್ನು ಸಾಧಿಸುವ ಬಗೆಯೂ ತಿಳಿದಿತ್ತು. ತಾವು ಧೀರ ಸಂನ್ಯಾಸಿಯಾಗಿ ಬದುಕಿದರು. ತನ್ನ ಬಳಿ ಬಂದವರಿಗೆಲ್ಲ ಭರವಸೆಯನ್ನು ತುಂಬಿದರು. ೭೯ ವರ್ಷಗಳ ಕಾಲ ಇಂಥ ಸಾರ್ಥಕ ಬದುಕನ್ನು ಬಾಳಿ ಪಿಂಗಲ ಸಂವತ್ಸರದ (ಕ್ರಿ.ಶ. ೧೩೧೭) ಮಾಘ ಶುಕ್ಲ ನವಮಿಯಂದು ಎಲ್ಲ ಶಿಷ್ಯರನ್ನು ಬೀಳ್ಕೊಟ್ಟು ಬದರಿಗೆಂದು ತೆರಳಿದರು. ಅನಂತರ ಅವರನ್ನು ಕಂಡವರಿಲ್ಲ. ಇಂದಿಗೂ ಈ ದಿನವನ್ನು ‘ಮಧ್ವನವಮಿ’ ಎಂದು ಅವರ ಪುಣ್ಯತಿಥಿಯನ್ನಾಗಿ ಆಚರಿಸಲಾಗುತ್ತಿದೆ. 
----------------------------------------------------------------------------------------------------------
ವಿದ್ಯಾಭ್ಯಾಸದ ಅವಧಿಯಲ್ಲಿಯೇ ಆಚಾರ್ಯರಿಗೆ ಆಗ ಸಿದ್ಧಾಂತವೆಂದು ಪ್ರಸಿದ್ಧವಾಗಿದ್ದ ಅದ್ವೈತ ವಿಚಾರದಲ್ಲಿ ಸಂಶಯಗಳು ತಲೆದೋರಿದವು. ಈ ನಿಲುವು ವೇದಶಾಸ್ತ್ರ ಸಮ್ಮತವಲ್ಲವೆಂದು ತೋರಿದಾಗ ಅವರ ವಿದ್ಯಾಗುರುಗಳಿಗೂ ಅವರಿಗೂ ಭಿನ್ನಾಭಿಪ್ರಾಯ ಮೂಡಿತು. ಗುರುಗಳಿಂದಲೂ ಲಿಕುಚ (ಪೇಜತ್ತಾಯ) ವಂಶದ ಹಿರಿಯ ಯತಿಯೊಬ್ಬರಿಂದಲೂ ಪ್ರೇರಿತರಾಗಿ ಆಚಾರ್ಯರು ಭಗವದ್ಗೀತ ಪ್ರಸ್ಥಾನಕ್ಕೆ ತಮ್ಮ ಸಿದ್ಧಾಂತದ ಪ್ರಕಾರ ಭಾಷ್ಯವೊಂದನ್ನು ಬರೆದು ಗುರುಗಳಿಗೆ ಒಪ್ಪಿಸಿ ಉತ್ತರದೇಶದ ಯಾತ್ರೆ ಕೈಗೊಂಡರು. ಹಿಮಾಲಯ ಪ್ರಾಂತ್ಯದ ಬದರಿಕಾಶ್ರಮದಲ್ಲಿ ಬ್ರಹ್ಮಸೂತ್ರಗಳಿಗೆ ದ್ವೈತ ಪರವಾದ ಭಾಷ್ಯಸಿದ್ಧಪಡಿಸಿ ಉಡುಪಿಗೆ ಹಿಂತಿರುಗಿದರು. ಆಗ ಅನಂತೇಶ್ವರನ ಗುಡಿಯ ಸಮೀಪದಲ್ಲಿ ಕೃಷ್ಣನ ಮಂದಿರ ಕಟ್ಟಲು ವ್ಯವಸ್ಥೆ ಮಾಡಿದರು. ಈಗ ಪ್ರಸಿದ್ಧವಾಗಿರುವ ಉಡುಪಿ ಕೃಷ್ಣನ ಗುಡಿ ಇದೇ.

ಆಚಾರ್ಯರು ತಮ್ಮ ಸಿದ್ಧಾಂತವನ್ನು ಪ್ರತಿಪಾದಿಸುವ ಮೂವತ್ತೇಳು ಗ್ರಂಥಗಳನ್ನು ರಚಿಸಿದರು. ಇವಕ್ಕೆ ಒಟ್ಟಾಗಿ ಸರ್ವಮೂಲ ಎಂಬ ಹೆಸರಿದೆ. ಬ್ರಹ್ಮಸೂತ್ರ ಪ್ರಸ್ಥಾನದ ಮೇಲೆ ಭಾಷ್ಯ, ಅನುವ್ಯಾಖ್ಯಾನ, ಅನುಭಾಷ್ಯ, ನ್ಯಾಯವಿವರಣ- ಈ ನಾಲ್ಕು ಗ್ರಂಥಗಳು; ಉಪನಿಷತ್ ಪ್ರಸ್ಥಾನದ ಮೇಲೆ ದಶೋಪ ನಿಷದ್ಭಾಷ್ಯಗಳು; ಗೀತಾ ಪ್ರಸ್ಥಾನದ ಮೇಲೆ ಭಗವದ್ಗೀತಾಭಾಷ್ಯ ಮತ್ತು ಗೀತಾ ತಾತ್ಪರ್ಯ ನಿರ್ಣಯ- ಈ ಎರಡು ಗ್ರಂಥಗಳು : ದಶಪ್ರಕರಣಗಳು (ಅಂದರೆ ಪ್ರಮಾಣ ಲಕ್ಷಣ, ಕಥಾಲಕ್ಷಣ, ಉಪಾದಿ ಖಂಡನ, ಮಾಯಾವಾದ ಖಂಡನ, ಪ್ರಪಂಚ ಮಿಥ್ಯಾತ್ವಾನುವಾದ ಖಂಡನ, ತತ್ತ್ವಸಂಖ್ಯಾನ, ತತ್ವೋದ್ಯೋತ. ಕರ್ಮನಿರ್ಣಯ, ವಿಷ್ಣುತತ್ತ್ವನಿರ್ಣಯ, ತತ್ತ್ವವಿವೇಕ,); ಭಾರತ ಮತ್ತು ಭಾಗವತಗಳಿಗೆ ತಾತ್ಪರ್ಯ ನಿರ್ಣಯಗಳು; ಯಮಕಭಾರತ, ಋಗ್ಬಾಷ್ಯ, ಜಯಂತೀ ನಿರ್ಣಯ, ಯತಿಪ್ರಣವಕಲ್ಪ, ಕೃಷ್ಣಾಮೃತಮಹಾರ್ಣವ, ಸದಾಚಾರಸ್ಮøತಿ, ತಂತ್ರಸಾರಸಂಗ್ರಹ, ದ್ವಾದಶಸ್ತೋತ್ರ, ನಖಸ್ತುತಿ- ಇವು ಮಧ್ವಾಚಾರ್ಯರ ಕೃತಿಗಳು.

ಮಧ್ವಾಚಾರ್ಯರ ಸಿದ್ಧಾಂತ ದ್ವೈತವಾದ. ಸ್ವತಂತ್ರನಾದ ಬ್ರಹ್ಮಪರ ತಂತ್ರಗಳಾದ ಜೀವ, ಜಡ ಈ ಎರಡೂ ಬೇರೆಬೇರೆ ತತ್ತ್ವಗಳೆಂಬುದು ಸಿದ್ಧಾಂತದ ಮೂಲ ಅಂಶ. ಇವುಗಳಲ್ಲಿ ಭೇದವನ್ನು ಪ್ರತಿಪಾದಿಸುವುದರಿಂದ ಇವರ ಸಿದ್ಧಾಂತಕ್ಕೆ ಭೇದವಾದವೆಂಬ ಹೆಸರು ಇದೆ. ಜೀವ-ಈಶ್ವರ, ಜೀವ-ಜೀವ, ಜಡ-ಜೀವ, ಜಡ-ಈಶ್ವರ, ಜಡ-ಜಡ ಎಂಬ ಪಂಚಭೇದಗಳು ನಿತ್ಯಸತ್ಯಗಳೆಂಬ ಪ್ರತಿಪಾದನೆಯನ್ನು, ಅದರಲ್ಲೂ ಬಲುಮುಖ್ಯವಾದ ಜೀವ- ಈಶ್ವರ ಭೇದವನ್ನು ಪ್ರತ್ಯಕ್ಷ, ಅನುಮಾನ ಮತ್ತು ಆಗಮ ಪ್ರಮಾಣಗಳಿಂದ ಪ್ರತಿಪಾದಿಸಿದ್ದಾರೆ. ಪ್ರಪಂಚ ಸತ್ಯ, ವಿಷ್ಣುಸರ್ವೋತ್ತಮ. ದೇವ, ಜೀವ, ಜಡ, ಎಲ್ಲದರಲ್ಲೂ ತರತಮತ್ವವಿದೆ ಎಂಬುದು ಈ ಸಿದ್ಧಾಂತದ ಇತರ ಮುಖ್ಯಾಂಶಗಳು.

ಉಡುಪಿಯಲ್ಲಿ ಕೃಷ್ಣನನ್ನು ಪ್ರತಿಷ್ಠೆ ಮಾಡಿದ ಅನಂತರ ಆಲಯದಲ್ಲಿ ಪೂಜೆ ಅವ್ಯಾಹತವಾಗಿ ನಡೆಯುವ ಉದ್ದೇಶದಿಂದ ಆಚಾರ್ಯರು ಪರ್ಯಾಯ ಪದ್ಧತಿಯನ್ನು ಏರ್ಪಡಿಸಿದರು. ಇದು ಈಗಲೂ ನಡೆದು ಬರುತ್ತಿದೆ. ಗುಡಿಯಲ್ಲಿ ಪೂಜೆಯನ್ನೂ ಕೃಷ್ಣಮಠದ ನಿರ್ವಹಣೆಯನ್ನೂ ಎರಡು ವರ್ಷಗಳಿಗೊಮ್ಮೆ ಪರ್ಯಾಯಕ್ರಮದಲ್ಲಿ ಎಂಟು ಮಠಗಳು ಕೈಗೊಳ್ಳುತ್ತವೆ. ಆಚಾರ್ಯರು ಏರ್ಪಡಿಸಿದ್ದ ಅಷ್ಟಮಠಗಳು ಫಲಿಮಾರು, ಆದಮಾರು, ಪುತ್ತಿಗೆ, ಶೀರೊರು, ಕಾಣಿಯೂರು, ಪೇಜಾವರ, ಸೋದೆಮಠಗಳೆಂದು ಪ್ರಸಿದ್ಧವಾಗಿವೆ. ಈ ಎಂಟರಲ್ಲಿ ದ್ವಂದ್ವ ಮಠಗಳೆಂಬ ಕಲ್ಪನೆಯೂ ಉಂಟು. ಅಂತೂ ಕೃಷ್ಣನ ಗುಡಿಯೂ ಕೃಷ್ಣಮಠವೂ ಯಾವೊಂದು ಮಠ ಅಥವಾ ಮಠಾಧೀಶರ ಸ್ವಾಮ್ಯವೂ ಆಗಿರದೆ, ಒಂದೊಂದು ಮಠವೂ ಎರಡು ವರ್ಷಗಳು ಮಾತ್ರ ಅದರ ಅಧಿಕಾರವನ್ನೂ ಹೊಣೆಗಾರಿಕೆಯನ್ನೂ ವಹಿಸಿಕೊಳ್ಳುವುದು ಸ್ವಾರಸ್ಯವಾದ ಪದ್ಧತಿ. ಮೊದಲು ಎರಡು ತಿಂಗಳ ಅವಧಿಯಿದ್ದುದನ್ನು ಎರಡು ವರ್ಷಗಳಿಗೆ ಮಾರ್ಪಡಿಸಿ ಈಗಿನ ಪರ್ಯಾಯದ ವಿವರಗಳನ್ನು ನಿರ್ದೇಶಿಸಿದವರು ಸೋದೆ ಮಠದ ವಾದಿರಾಜರೆಂದು ಪ್ರತೀತಿ ಇದೆ.

ಉಡುಪಿಯ ಎಂಟು ಮಠಗಳಲ್ಲದೆ ಉತ್ತರಾಧಿಮಠ, ವ್ಯಾಸರಾಯಮಠ, ರಾಘವೇಂದ್ರಮಠ, ಮುಳಬಾಗಿಲುಮಠ, ಮಾಧವತೀರ್ಥಮಠ ಮೊದಲಾದ ಇತರ ಮಠಗಳೂ ಮಧ್ವಾಚಾರ್ಯರ ಪರಂಪರೆಗೆ ಸೇರಿವೆ. ಕರ್ನಾಟಕವಲ್ಲದೆ ತಮಿಳುನಾಡು. ಆಂಧ್ರ ಪ್ರದೇಶ, ಮಹಾರಾಷ್ಟ್ರಗಳಲ್ಲೂ ಮಧ್ವಾಚಾರ್ಯರ ಅನುಯಾಯಿಗಳು ಇದ್ದಾರೆ. ಬಂಗಾಲದ ಕಡೆ ಗೌಡೀಯ ಪಂಥದವರಿಗೂ ಮಧ್ವಚಾರ್ಯರು ಗುರುಗಳು.

  1. ವಿವಿಧ ಆನ್ಲೈನ್ ಮೂಲಗಳಿಂದ ಕ್ರೋಢಿಕರಿಸಿ ರಚಿಸಿದ ಬರಹ
  2. ಬನ್ನಂಜೆ ಗೋವಿಂದಾಚಾರ್ಯರ ಮಾತು ಮತ್ತು ರಾಷ್ಟ್ರೋತ್ಥಾನ ಪ್ರಕಟಿಸಿದ ಬರಹ



Tuesday, September 17, 2019

ಚನ್ನಬಸವಣ್ಣ

ಹನ್ನೆರಡನೆಯ ಶತಮಾನ ಶರಣ ಸಮೂಹದಲ್ಲಿ ಅಗ್ರಗಣ್ಯವಾದ ಹೆಸರುಗಳಲ್ಲಿಚನ್ನಬಸವಣ್ಣನವರದು ಬಹು ಪ್ರಮುಖವಾದುದುಇವರ ಜೀವಿತ ಕಾಲಾವಧಿ ತೀರಾ ಕಡಿಮೆಚನ್ನಬಸವಣ್ಣನವರು ಬದುಕಿದ್ದುದು ಕೇವಲ ಇಪ್ಪತ್ತುನಾಲ್ಕು ವರ್ಷಗಳು ಮಾತ್ರಹನ್ನೆರಡನೆಯ ಶತಮಾನದ ಯುಗಪುರುಷನೂಸಾಮಾಜಿಕ ಬದಲಾವಣೆಗಳ ಹರಿಕಾರನೂಅಸಮಾನತೆಯ ವಿರುದ್ದ ದನಿಯೆತ್ತಿವ್ಯವಸ್ಠೆಯ ಆಕ್ರೋಶಕ್ಕೆ ಗುರಿಯಾದಬಸವಣ್ಣನವರ ಸೋದರಳಿಯ ಚನ್ನಬಸವಣ್ಣ.ಬಸವಣ್ಣನವರ ಸೋದರಳಿಯನೆಂಬುದಕ್ಕಿಂತಲೂಸ್ವ ಸಾಮರ್ಥ್ಯ ಮತ್ತು ಸಾಧನೆಗಳಿಂದ ಕೀರ್ತಿವಂತವಾದ ವ್ಯಕ್ತಿತ್ವ ಚನ್ನಬಸವಣ್ಣನದು.

ಚನ್ನ ಬಸವಣ್ಣನವರ ತಾಯಿ ಅಕ್ಕನಾಗಾಯಿ ಅಥವಾ ನಾಗಲಾಂಬಿಕೆ. ಸ್ವತಃ ಚನ್ನಬಸವಣ್ಣನವರ ವಚನಗಳಿಂದಇತರ ವಚನಕಾರರ ಉಕ್ತಿಗಳಿಂದ ಮತ್ತು ಪುರಾಣಗಳಿಂದ ಚನ್ನಬಸವಣ್ಣನವರ ತಾಯಿಯ ಬಗ್ಗೆ ವಿವರಗಳು ಸಾಕಷ್ಟು ದೊರಕುತ್ತವೆಆದರೆ ಚನ್ನಬಸವಣ್ಣನವರ ತಂದೆಯ ಬಗ್ಗೆ ಸಿಗುವ ವಿವರಗಳುಹೆಚ್ಚು ಕಾಲ್ಪನಿಕವಾಗಿವೆಕ್ರಿ.೧೪೨೫ ವರೆಗೆ ಚನ್ನಬಸವಣ್ಣನವರ ಜನನದ ಬಗ್ಗೆ ಸರಿಯಾದ ವಿವರಗಳಿಲ್ಲಸು೧೪೨೫ರಲ್ಲಿ ಲಕ್ಕಣ್ಣ ದಂಡೇಶನು ತನ್ನ ಶಿವ ತತ್ವ ಚಿಂತಾಮಣಿಯಲ್ಲಿ ಶರಣರ ಪ್ರಸಾದ ಸೇವನೆಯಿಂದ ನಾಗಲಾಂಬಿಕೆ ಗರ್ಭ ಧರಿಸತ್ತಾಳೆ ಎಂದು ಬರೆಯುತ್ತಾನೆ.

ಇನ್ನೂ ಹಲವರು ಬಸವನ ಒಕ್ಕುಮಿಕ್ಕ ಪ್ರಸಾದದಿಂದ, ಇನ್ನೂ ಹಲವರು ಡೋಹರ ಕಕ್ಕಯ್ಯನ ಒಕ್ಕು ಮಿಕ್ಕ ಪ್ರಸಾದದಿಂದ ಚನ್ನಬಸವಣ್ಣನ ಜನ್ಮವಾಯಿತೆಂದೂ ಕಲ್ಪಿಸುತ್ತಾರೆಕಾಲಮಾನಗಳು ಶರಣರ ಜೀವಿತಾವಧಿಗಳಿಗೆ ಇವಾವೂ ಸಹ ಐತಿಹಾಸಿಕ ವಾಗಿ ಹೊಂದಿಕೆಯಾಗುವುದಿಲ್ಲ. ಒಕ್ಕು ಮಿಕ್ಕ ಪ್ರಸಾದದ ಕಥೆಗಳನ್ನು ನಂಬುವುದಾದರೆ ಚನ್ನಬಸವಣ್ಣನ ಜನನ ಕಲ್ಯಾಣದಲ್ಲಿ ಸಂಭವಿಸಿತೆಂದು ಒಪ್ಪಬೇಕಾಗುತ್ತದೆ. ಇದಕ್ಕೆ ಕಾಲದ ಹೊಂದಾಣಿಕೆಯಾಗುವುದಿಲ್ಲ. ಬಸವಣ್ಣನು ಕಲ್ಯಾಣಕ್ಕೆ ಬರುವ ವೇಳೆಗೆ ಚನ್ನಬಸವಣ್ಣನಿಗೆ ಕನಿಷ್ಟ ೧೦-೧೨ ವರ್ಷಗಳಾದರೂ ಆಗಿರಲೇಬೇಕಾಗುತ್ತದೆ.

ಅಂದರೆ ಚನ್ನಬಸವಣ್ಣನ ಜನನ ಕೂಡಲ ಸಂಗಮದಲ್ಲಿಯೇ ಆಗಿರುವುದು ಸಹಜವಾಗಿ ಖಚಿತಪಡುತ್ತದೆ. ಸುಮಾರು ಕ್ರಿ.. ೧೫೦೦ರರಲ್ಲಿ ರಚನೆಯಾದ ಸಿಂಗಿರಾಜ ಸಿಂಗಿರಾಜಪುರಾಣದಲ್ಲಿ ಚನ್ನಬಸವೇಶ್ವರನ ತಂದೆ ಶಿವಸ್ವಾಮಿ ಅಥವಾ ಶಿವದೇವ ಎಂದು ಸ್ಪಷ್ಟವಾಗಿ ಬರುತ್ತದೆ. ಸಾಮಾನ್ಯವಾಗಿ ಉಳಿದ ಲಿಂಗಾಯತ ಪುರಾಣಕಾರರಿಗಿಂತ ಸಿಂಗಿರಾಜನು ಐತಿಹಾಸಿಕ ವಿಷಯಗಳಲ್ಲಿ ಕಲ್ಪನೆಗಳಿಗಿಂತ ವಾಸ್ತವಕ್ಕೆ ಹೆಚ್ಚು ನಿಷ್ಟನಾಗಿರುವುದರಿಂದ, ಸಿಂಗಿರಾಜ ಪುರಾಣದ ವಿವರಣೆಗೆ ಬಲ ಬರುತ್ತದೆ.

ಕಾಲಜ್ಞಾನ ವಚನಗಳ ಪ್ರಕಾರ , ಚನ್ನಬಸವಣ್ಣನ ಜನನ, ನಂದನ ನಾಮ ಸಂವತ್ಸರದ ವೈಶಾಖ ಶುದ್ದ ಪಾಡ್ಯ ಮಂಗಳವಾರ ಪ್ರಾತಃಕಾಲ ಕೃತ್ತಿಕಾ ನಕ್ಷತ್ರದಲ್ಲಿ (ಕ್ರಿ.. ೧೧೪೪) ಎಂದು ತಿಳಿದು ಬರುತ್ತದೆ. ರಾಕ್ಷಸ ನಾಮ ಸಂವತ್ಸರದ ಕಾರ್ತೀಕ ಮಾಸದಲ್ಲಿ ಉಳವಿ ಯಲ್ಲಿ ಲಿಂಗೈಕ್ಯ (ಕ್ರಿ..೧೧೬೮). ಎರಡರ ನಡುವಣ ಕಾಲಾವಧಿ ಕೇವಲ ೨೪ ವರ್ಷಗಳು.

"ಚನ್ನಬಸವಣ್ಣ"ನು ಸು ಕ್ರಿ.. ೧೧೫೬ರಲ್ಲಿ ಸ್ಥಾಪಿಸಲಾದ ಶಿವಾನುಭವ ಮಂಟಪದಲ್ಲಿ ಸಕ್ರಿಯವಾಗಿ ಪಾತ್ರ ವಹಿಸುತ್ತಾನೆ, ಆಗ ಅವನಿಗೆ ಕೇವಲ ಹನ್ನೆರಡು ವರ್ಷ ಇರಬಹುದು. ಲಿಂಗಾಯತ ಧರ್ಮ ಸಾಂಪ್ರದಾಯಕ ವಚನಗಳನ್ನು ಪರಿಷ್ಕರಿಸಿಷಟ್ಸ್ಥಲ ಸಂಪ್ರದಾಯಕ್ಕೆ ನೆಲೆಯನ್ನು ಕಲ್ಪಿಸಿದ ಪ್ರಮುಖರಲ್ಲಿ, ಚನ್ನಬಸವಣ್ಣನವರ ಹೆಸರು ಮೊದಲನೆಯದುಚನ್ನ ಬಸವಣ್ಣನವರ ವಚನಗಳೂ ಸಹ ತುಂಬಾ ಅನುಭಾವಪೂರ್ಣವಾಗಿಲಿಂಗಾಯತ ಸಿದ್ದಾಂತವನ್ನು ವಿವರಿಸುತ್ತವೆ.

ಕಲ್ಯಾಣದ ಕ್ರಾಂತಿಯ ನಂತರ ಕಲ್ಯಾಣದಲ್ಲಿದ್ದ ಶರಣರಿಗೆ ನೆಲೆ ತಪ್ಪಿ, ದಿಕ್ಕು ದಿಕ್ಕಿಗೆ ಚದುರಿ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಸೊನ್ನಲಾಪುರಕ್ಕೆ, ಶ್ರೀಶೈಲಕ್ಕೆ ಹೀಗೆ ವಿವಿಧ ಸ್ಥಳಗಳಿಗೆ, ತಂಡಗಳು ತೆರಳಿದವು. ಶರಣರ ಬಹು ದೊಡ್ಡ ಗುಂಪು, ಚನ್ನಬಸವಣ್ಣನವರ ನೇತೃತ್ವದಲ್ಲಿ, ಉಳವಿಯ ಕಡೆಗೆ ಹೊರಟಿತು. ಚಿಕ್ಕ ವಯಸ್ಸಿನ ಚನ್ನಬಸಣ್ಣನವರ ಹೆಗಲ ಮೇಲೆ ಇಂಥ ಗುರುತರವಾದ ಹೊಣೆಗಾರಿಕೆ ಬಿದ್ದುದನ್ನು, ತುಂಬಾ ಕಷ್ಟದಿಂದ ಅವರು ನಿಭಾಯಿಸಿದರು.

ಮಾರ್ಗ ಮಧ್ಯದಲ್ಲಿಕಲ್ಯಾಣದ ಸೈನ್ಯ ಶರಣರನ್ನು ಅಡ್ಡಗಟ್ಟಿ ಮಾರಣ ಹೋಮವನ್ನು ನಡೆಸಿತುಆಗ ಶರಣರಿಗೆ ಅನಿರೀಕ್ಷಿತವಾದ ಸಹಾಯ ಒದಗಿಘೋರ ಯುದ್ದದಲ್ಲಿ ಕಲ್ಯಾಣದ ಸೈನ್ಯ ಸೋತು ಹಿಮ್ಮೆಟ್ಟಿತು ಅನಿರೀಕ್ಷಿತ ಸಹಾಯ ಯಾರಿಂದ ದೊರಕಿತೆಂಬುದರ ಬಗ್ಗೆ, ವಿವರಣೆಗಳು ಲಭ್ಯವಿಲ್ಲಡಾ.ಎಚ್ತಿಪ್ಪೇರುದ್ರಸ್ವಾಮಿಯವರು ತಮ್ಮ ಅಳಿವಿನಿಂದ ಉಳಿವಿಗೆ ಕಾದಂಬರಿಯಲ್ಲಿ ಕೆಲವು ವಿವರಣೆಗಳನ್ನು ಒದಗಿಸಲು ಪ್ರಯತ್ನಿಸಿದ್ದಾರೆ. ನಂತರ ಚನ್ನಬಸವಣ್ಣ ನವರು ಹೆಚ್ಚುಕಾಲ ಬದುಕಲಿಲ್ಲ ಉಳವಿಯಲ್ಲಿಯೇ ಅವರು ಶಿವೈಕ್ಯರಾದರು. ಹೀಗೆ ಚನ್ನಬಸವಣ್ಣ ಬದುಕಿದ್ದು ಸ್ವಲ್ಪ ಕಾಲವೇ ಆದರೂ; ಸಾಧಿಸಿದ್ದು, ಕೀರ್ತಿಶಾಲಿಯಾದದ್ದು ತುಂಬಾ ಹೆಚ್ಚು.

ಚೆನ್ನಬಸವಣ್ಣ ಕೂಡಲ ಸಂಗಮದಲ್ಲಿ ವಿದ್ಯಾಭ್ಯಾಸ ಮಾಡಿ ಪ್ರತಿಭಾಸಂಪನ್ನರಾದನರು ಕಲ್ಯಾಣಕ್ಕೆ ಬಂದ ನಂತರ ಬಸವಣ್ಣನ ಮಹಾಮನೆಯ ಕಾರ್ಯದಲ್ಲಿ ನೆರವಾಗಿ ಧರ್ಮೊದ್ಧಾರ ಕಾರ್ಯಗಳಲ್ಲಿ ಸಹಯಕರಾದವರು. ಅನುಭವ ಮಂಟಪದ ಎಲ್ಲಾ ಕಾರ್ಯಗಳು ಚೆನ್ನಬಸವಣ್ಣನವರ ನೇತ್ರತ್ವದಲ್ಲಿ ನಡೆಯುತ್ತಿದ್ದವು. ಅಲ್ಲಮ ಪ್ರಭುವಿನ ಅಪ್ಪಣೆ ಮೇರೆಗೆ ಕಲ್ಯಾಣಕ್ಕೆ ಬಂದ ಸಿದ್ಧರಾಮನಿಗೆ ಲಿಂಗಧಾರಣೆ ಮಾಡಿದ ಮಹಾಮಹಿಮಶಾಲಿ. ಈತ ಅನುಭವ ಮಂಟಪಕ್ಕೆ ಬಂದ ಅಕ್ಕಮಹಾದೇವಿಯ ದಿವ್ಯತ್ವವನ್ನು ಗ್ರಹಿಸಿ ಶಿವಯೋಗ ಶಕ್ತಿಯನ್ನು ಅರಿತ ಅವರು ಆಕೆಯನ್ನು ಹೀಗೆ ಸ್ತುತಿಸಿದ್ದಾರೆ.
ಅಜಕೋಟಿ ವರುಷದವರೆಲ್ಲರೂ ಹಿರಿಯರೇ
ಹುತ್ತೇರಿ ಬೆತ್ತ ಬೆಳೆದ ತಪಸ್ವಿಗಳೆಲ್ಲರೂ ಹಿರಿಯರೇ
ಮತಿಗೆಟ್ಟು ಒಂದನಾಡ ಹೋಗಿ ಒಂಬತ್ತನಾಡುವ
ಅಜ್ಞಾನಿಗಳೆಲ್ಲರೂ ಹಿರಿಯರೇ? ಅನುವರಿದು ಘನವ
ಬೆರೆಸಿ ಹಿರಿಕಿರಿದೆಂಬ ಭೇದವ ಮರೆದು ಕೂಡಲ ಚೆನ್ನ
ಸಂಗಯ್ಯನಲ್ಲಿ ಬೆರೆಸಿ ಬೇರಿಲ್ಲದಿಪ್ಪ ಹಿರಿತನ
ನಮ್ಮ ಮಹಾದೇವಿಯಕ್ಕಂಗಾಯ್ತು.”
ಚೆನ್ನಬಸವಣ್ಣ ಶಿವಪಥದಲ್ಲಿ ಆಚಾರ್ಯರಾಗಿದ್ದಂತೆಯೇ ರಾಜನೀತಿಶಾಸ್ತ್ರಜ್ಞರಾಗಿದ್ದರು, ಶೂನ್ಯಪೀಠದ ಅಧ್ಯಕ್ಷರಾದರು (ಪ್ರಭುದೇವರ ಅನಂತರ ಚನ್ನಬಸವಣ್ಣ ಶೂನ್ಯಸಿಂಹಾಸನವನ್ನೇರಿದನೆಂದು ಹೇಳಲಾಗುತ್ತದೆ). ಅಷ್ಟಾವರಣ, ಪಂಚಾಚಾರ, ಷಟ್ಸ್ಥಲ ಮುಂತಾದ ಮತ ಪ್ರಕ್ರಿಯೆಗಳನ್ನು ರೂಪಿಸಿದರು. ಅವರು 1500 ಕ್ಕೂ ಹೆಚ್ಚು ವಚನಗಳನ್ನು ರಚಿಸಿರುವರು. ಕಲ್ಯಾಣ ಕ್ರಾಂತಿಯ ನಂತರ ಶರಣರನ್ನು ಮತ್ತು ವಚನ ಸಂಪತ್ತನ್ನು ರಕ್ಷಿಸುವ ಹೊಣೆಹೊತ್ತು ಹೋರಾಡಿ ಕೊನೆಗೆ ಅವರು ಉಳವಿಯಲ್ಲಿ ಲಿಂಗೈಕ್ಯರಾದರು. ಅವರ ವಚನವೊಂದರಲ್ಲಿ ದೇವರ ನಿಲುವನ್ನು ರೀತಿ ಹೇಳಿದ್ದಾರೆ.
ಮರೀಚಿಯೊಳಡಗಿದ ಬಿಸಿಲಿನಂತಿದ್ದಿತ್ತು,
ಕ್ಷೀರದೊಳಡಗಿದ ತುಪ್ಪದಂತಿದ್ದಿತು,
ಚಿತ್ರದೊಳಡಗಿದ ಚಿತ್ರದಂತಿದ್ದಿತು,
ನುಡಿಯೊಳಗಡಗಿದ ಅರ್ಥದಂತಿದ್ದಿತು,
ಕೂಡ ಚೆನ್ನಸಂಗಯ್ಯ ನಿಮ್ಮ ನಿಲುವು.”

ಗವಿಮಠ: ಗವಿಮಠ ಎನ್ನುವ ಸ್ಥಳದಲ್ಲಿ ಕೆಲವು ಹಳೆಯ ಗುಹೆಗಳಿವೆ. ಇವು ಲಿಂಗಾಯತ ಸಾಧಕರು ವಾಸವಾಗಿದ್ದರು ಎನ್ನಲಾಗುತ್ತದೆ. ಇಲ್ಲಿ ಅಕ್ಕನಾಗಮ್ಮ ವಾಸಿಸಿದ ಗವಿ ಇದೆ ಎನ್ನುತ್ತಾರೆ.

ಉಳವಿ:
ಹನ್ನೆರಡನೆ ಶತಮಾನದಲ್ಲಿ ಕಲ್ಯಾಣದಲ್ಲಿ ಶರಣರು ಅಂತರ್ಜಾತಿ ಮದುವೆ ನಡೆಸಿದಾಗ ಕಲ್ಯಾಣ ಕ್ರಾಂತಿಯಾಗಿ ಬಸವಣ್ಣನವರು ಕೂಡಲ ಸಂಗಮಕ್ಕೆ ಹೋದರು. ಬಸವಣ್ಣನವರ ಅಳಿಯ ಚನ್ನಬಸವಣ್ಣ,ಅಕ್ಕ ನಾಗಲಾಂಬಿಕೆ ಹಾಗೂ ಇತರ ಶರಣರ ದಂಡು ಕಟ್ಟಿಕೊಂಡು ಸುರಕ್ಷಿತ ಜಾಗ ಹುಡುಕಿ ಹೊರಟರು. ಶರಣರು ರಚಿಸಿದ ವಚನ ಸಾಹಿತ್ಯ ಗಂಟುಗಳು ಶರಣರ ಹೆಗಲ ಮೇಲಿದ್ದವು. ಮುಂದಿನ ಪೀಳಿಗೆಗೆ ವಚನ ಸಾಹಿತ್ಯವನ್ನು ಸುರಕ್ಷಿತವಾಗಿ ತಲುಪಿಸುವ ಉದ್ದೇಶದಿಂದ ಹೊರಟ ಇವರು ತಲುಪಿದ್ದು ದೂರದ ಗೋವಾ ಬಳಿಯ ಕಾಡಿನ ಬೆಟ್ಟದ ಹತ್ತಿರ ಬಂದು ಉಳಿದು ಕೊಂಡರು (ಯಲ್ಲಾಪುರ ಮತ್ತು ಗಣೇಶನ ಗುಡಿ ರಸ್ತೆಯಿಂದ ಉಳುವಿಯನ್ನು ಪ್ರವೇಶಿಸಿದರು). ಬಿಜ್ಜಳನ ಸೈನಿಕರ ಜೊತೆ ಹೊಡೆದಾಡುತ್ತಲೇ ಜಾಗಕ್ಕೆ ಅವರು ಬಂದು ಮುಟ್ಟಿದ್ದರು. ಅಲ್ಲೇ ಲಿಂಗೈಕ್ಯರಾದರು. ಅಲ್ಲಿಯೇ ಚನ್ನಬಸವಣ್ಣನವರ ಸಮಾಧಿ ಯನ್ನು ಕಟ್ಟಲಾಗಿದೆ. ಚನ್ನಬಸವಣ್ಣನ ತಾಯಿ ಮತ್ತು ಬಸವಣ್ಣನ ಸೋದರಿ ಅಕ್ಕ ನಾಗಲಾಂಬಿಕೆ ಹೆಸರಿನಲ್ಲಿರುವ ಗುಹೆಯು ಪವಿತ್ರ ಸಮಾಧಿಗೆ ಹತ್ತಿರದಲ್ಲಿ ಇದೆ
ಶರಣರು ಬಂದುಉಳಿದುಕೊಂಡದ್ದರಿಂದ ಸ್ಥಳವುಉಳವಿಅಂತ ಆಯಿತು (ಆಗ ಇದನ್ನು ವೃಶಾಪುರ ಎನ್ನಲಾಗುತ್ತಿತ್ತು). ಕ್ಷೇತ್ರವು ಇಂದು ಪವಿತ್ರ ಯಾತ್ರಾ ಸ್ಥಳವಾಗಿದೆ. ಇಂದು ಅದುವೇ ಪ್ರಖ್ಯಾತ ಚನ್ನಬಸವೇಶ್ವರ ದೇವಾಲಯವಾಗಿದೆ.

ಹರಳಯ್ಯನವರ ಚಿಲುಮೆ:
ಬಿಜ್ಜಳನು ಹರಳಯ್ಯನವರನ್ನು ಅನೆ ಕಾಲಿಗೆ ಕಟ್ಟಿ ಎಳೆಸಿದಾಗ ಅವರು ಲಿಂಗೈಕ್ಕ್ಯರಾಗುತ್ತಾರೆ. ನಂತರ ಬಿಜ್ಜಳನ ಸೈನ್ಯ ಮತ್ತು ಜಾತಿ ವಾದಿಗಳು ವಚನಗಳನ್ನು ನಾಶಪಡಿಸಲು ಮುಂದಾಗುತ್ತಾರೆ. ಶರಣರು ವಚನ ಸಾಹಿತ್ಯದ ರಕ್ಷಣೆಗಾಗಿ ಉಳವಿ ತಲುಪುತ್ತಾರೆ. ಅಲ್ಲಿರುವ ಒಂದು ಚಿಲುಮೆಗೆ ಹುತಾತ್ಮರಾದ ಹರಳಯ್ಯನವರ ಹೆಸರಿಡುತ್ತಾರೆ. ನೀರಿನ ಚಿಲುಮೆ ಇನ್ನು ಇದೆ, ಅದುವೇ ಹರಳಯ್ಯನವರ ಚಿಲುಮೆ.

ವಚನ ಸಾಹಿತ್ಯದ ಉಳಿವಿಗೆ ಹೋರಾಡಿ ಮಾಡಿದವರ ನೆನಪಿಗಾಗಿ ಮಾಡಿದಂಥ ವೀರಗಲ್ಲು:
ಕಲ್ಯಾಣದ ಕ್ರಾಂತಿ ಆದಾಗ ವಚನ ಸಾಹಿತ್ಯದ ಉಳಿವಿಗೆ ಹೋರಾಡಿ ಮಾಡಿದವರ ನೆನಪಿಗಾಗಿ ಮಾಡಿದಂಥ ವೀರಗಲ್ಲು. ಉಳವಿಯ ಬಸವಣ್ಣನ ಗುಡಿಯ ಮುಂಬಾಗ ಈಗ ವೀರಗಲ್ಲನ್ನು ಕಾಣಬಹುದು. ವಚನ ಕ್ರಾಂತಿಗೆ ಯುದ್ದದ ಮಾಹಿತಿಗೆ ಮುನ್ನುಡಿಗೆ ಪುಷ್ಟಿ ಮತ್ತು ಆಧಾರ ನೀಡುವಂತಹದು.
ಇಂದು ಇದು ಲಿಂಗಾಯತ ಜನರ ಒಂದು ಪ್ರಮುಖ ಯಾತ್ರಾಸ್ಥಳವಾಗಿದೆ. ಲಿಂಗಾಯತ ಜನರು ಬಹುವಾಗಿ ಗೌರವಿಸುವ ಚನ್ನಬಸವಣ್ಣನವರ ಸಮಾಧಿ ಇಲ್ಲಿ ಇದೆ.

ಉಳುವಿಗೆ ಅಣಶಿ ಘಟ್ಟದ ಹಾಗೂ ಸುಪದ ಮೇಲಿಂದ ಬರಲು ಎರಡು ಅರಣ್ಯ ಮಾರ್ಗಗಳಿವೆ೧೨ ನೇ ಶತಮಾನದಲ್ಲಿ ಚನ್ನಬಸವಣ್ಣನವರು ಲಿಂಗೈಕ್ಯ ಆಗುವ ಮೊದಲು ಕಲ್ಯಾಣ ದಿಂದ ಉಳವಿಗೆ ಬಂದರು. ತಾಯಿ ಅಕ್ಕನಾಗಲಾಂಬಿಕೆ ಹೆಸರಿನಲ್ಲಿರುವ ಗುಹೆಯು ಪವಿತ್ರ ಸಮಾಧಿ ಹತ್ತಿರದಲ್ಲಿ ಇದೆ. ಉಳವಿ ಜಾತ್ರೆಗೆ ಕರ್ನಾಟಕದ ಎಲ್ಲೆಡೆಯಿಂದ ಭಕ್ತರು ಬರುತ್ತಾರೆ.
ಉಳವಿಯು ಪಶ್ಚಿಮ ಘಟ್ಟಗಳಲ್ಲಿ ಇದ್ದು ಇಲ್ಲಿನ ದಟ್ಟ ಕಾಡುಗಳಲ್ಲಿ ಹುಲಿ, ಚಿರತೆ, ಆನೆ, ಸಾರಂಗ, ನಾಗರಹಾವು ಮತ್ತು ಇತರ ವನ್ಯಜೀವಿಗಳಿವೆ.
ಮೂಲ: ವಿವಿಧ ಆನ್ಲೈನ್ ಮೂಲಗಳಿಂದ ಕ್ರೋಢಿಕರಿಸಿ ರಚಿಸಿದ ಬರಹ 

ಪುತ್ತೂರ್ ಅಜ್ಜ

  ರಾಮಚಂದ್ರ ಭಟ್ರವರ ಹೆತ್ತವರು   ರಾಮೇಶ್ವರಕ್ಕೆ ತೀರ್ಥಯಾತ್ರೆಗೆ ತೆರಳಿ ಬಂದ   ತರುವಾಯ 1916 ರ ಜೂನ್ 15 ರಂದು ನೆಟ್ಟಾರಿನಲ್ಲಿ   ರಾಮಚಂದ್ರರ ಜನನವಾಯಿತು ...