Followers

Thursday, November 14, 2019

ಪುರಂದರ ದಾಸ

ಶ್ರೀ ಮದ್ವಸಂಪ್ರದಾಯಾಧಾರಿತ ತತ್ವಶಾಸ್ತ್ರದ ಪರಂಪರೆಯಲ್ಲಿ ಬಂದಂತಹ ಅಪ್ರತಿಮ ವಾಗ್ಗೇಯಕಾರರಾದ 'ಶ್ರೀ ಪುರಂದರ ದಾಸ'ರು, ದಕ್ಷಿಣಭಾರತದ ಸಂಗೀತವೆಂದೇ ಪ್ರಸಿದ್ಧವಾದ 'ಕರ್ನಾಟಕ ಸಂಗೀತ' 'ಪಿತಾಮಹ' ರೆಂದು ಪ್ರಸಿದ್ಧರಾಗಿದ್ದಾರೆ.
ಲಭ್ಯವಿರುವ ಶಿಲಾಶಾಸನಗಳ ಆಧಾರದಮೇಲೆ, ಶ್ರೀ ಪುರಂದರದಾಸರು ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಹತ್ತಿರವಿರುವ 'ಕ್ಷೇಮಾಪುರ'ವೆಂಬ ಗ್ರಾಮದಲ್ಲಿ ಕ್ರಿ. ೧೪೮೪ ರಲ್ಲಿ ಜನಿಸಿದರೆಂದು ನಂಬಲಾಗಿದೆ. ಆದರೆ ಪುಣೆಯಿಂದ ೮೧ ಮೈಲು ದೂರದ 'ಪುರಂಧರಗಢ' ವೆಂಬ ಊರಲ್ಲಿ ಅವರ ಜನನವಾಯ್ತು ಎನ್ನುವ ಕೆಲವು ಭಿನ್ನ ಅಭಿಪ್ರಾಯಗಳೂ ಉಂಟು. ಧನಿಕ, ವ್ಯಾಪಾರೀ ಕುಟುಂಬದಲ್ಲಿ ಜನಿಸದ 'ಪುರಂದರ' ರಿಗೆ ' ಶ್ರೀನಿವಾಸ ನಾಯಕ' ಎಂದು ಹೆಸರಿಡಲಾಗಿತ್ತು. ಬಾಲ್ಯದಲ್ಲಿ ಪುರಂದರರಿಗೆ ಅವರ ಮನೆಯ ಪರಂಪರೆಯಂತೆ ವಿದ್ಯಾಭ್ಯಾಸ ಮಾಡಿಸಲಾಯಿತು ಮತ್ತು ಅವರು ಸಂಸ್ಕೃತ, ಕನ್ನಡ ಮತ್ತು ಸಂಗೀತದಲ್ಲಿ ಪರಿಣಿತಿಯನ್ನು ಪಡೆದರು. ತಮ್ಮ ತಂದೆಯವರ ವ್ಯಾಪಾರವನ್ನು ಅನುವಂಶಿಕವಾಗಿ ಪಡೆದ ಪುರಂದರದಾಸರು ಪ್ರವೃದ್ಧಮಾನಕ್ಕೆ ಬಂದು ಅತಿ ಹಣವಂತರಾಗಿ 'ನವಕೋಟಿ ನಾರಾಯಣ' ಎಂಬ ಬಿರುದನ್ನೂ ಸಹ ಪಡೆದು ಪ್ರಸಿದ್ಧರಾದರು.
ಪುರಂದರದಾಸರ ಎಲ್ಲ ಕೀರ್ತನೆಗಳು ಪುರಂದರ ವಿಠ್ಠಲನನ್ನು (ವಿಷ್ಣು) ನಮಿಸುತ್ತಾ ಕೊನೆಗೊಳ್ಳುತ್ತವೆ. ಸಾವಿರಾರು ಕೀರ್ತನೆಗಳನ್ನು ರಚಿಸಿದ ಪುರಂದರದಾಸರ ಸುಮಾರು 1000 ಕೀರ್ತನೆಗಳು ಇಂದಿಗೂ ಉಳಿದಿವೆ. ಅತ್ಯಂತ ಜಿಪುಣನಾಗಿದ್ದ ಶ್ರೀನಿವಾಸರು ತನ್ನ  ಹೆಂಡತಿಯು ದೇವರ ಮಾರ್ಗ ತೋರಿಸಿದ್ದಕ್ಕಾಗಿ ಶ್ರೀಮಂತಿಕೆಯನ್ನು ತೊರೆದು ಹರಿದಾಸನಾಗುವ ನಿರ್ಧಾರ ತೆಗೆದು ಕೊಂಡರು.

ಇವರ ತಂದೆ ವರದಪ್ಪನಾಯಕ, ತಾಯಿ ಲಕ್ಷ್ಮಿದೇವಿ. ಪುರಂದರದಾಸರ ತಂದೆ ವರದಪ್ಪ ನಾಯಕ ಲೇವಾದೇವಿ ವೃತ್ತಿಯಲ್ಲಿದ್ದವರು. ಅನೇಕ ವರ್ಷಗಳ ಕಾಲ ಮಕ್ಕಳಾಗದ ಕಾರಣ ತಿರುಪತಿ ಶ್ರೀನಿವಾಸನಿಗೆ ಪ್ರಾರ್ಥನೆ ಸಲ್ಲಿಸಿದ ಮೇಲೆ ಮಗುವಾಯಿತು ಎಂಬ ನಂಬಿಕೆಯಿದೆ. ಇವರು ನಾಯಕ ಜನಾಂಗದವರಿಂದಲೇ ಅವರು ಮಗನಿಗೆ ಶ್ರೀನಿವಾಸ ನಾಯಕ ಎಂದು ಹೆಸರಿಟ್ಟರಂತೆ.

ಶ್ರೀನಿವಾಸ ನಾಯಕ ಬೆಳೆದ ನಂತರ ತಂದೆಯ ವೃತ್ತಿಯನ್ನೇ ಮುಂದುವರಿಸಿದ. ಆದರೆ ಅತ್ಯಂತ ಜಿಪುಣನೆಂದು ಹೆಸರಾದ ಶ್ರೀನಿವಾಸ, ತಂದೆ ಅಸ್ವಸ್ಥರಾದಾಗಲೂ ಹಣ ಖರ್ಚು ಮಾಡಲು ತಡೆದನಂತೆ. ಶ್ರೀನಿವಾಸನ ಪತ್ನಿ ಸರಸ್ವತಿ ದಾನಶೀಲೆಯಾಗಿ, ಪತಿಯ ಕೋಪ ಅವಳ ಮೇಲೆ ಬೀಳುತ್ತಿತ್ತು ಎಂದು ಹೇಳುತ್ತಾರೆ.

ಐತಿಹ್ಯ
ವಿಠ್ಠಲ (ವಿಷ್ಣು) ಬಡ ಬ್ರಾಹ್ಮಣನ ವೇಷದಲ್ಲಿ ಒಮ್ಮೆ ಶ್ರೀನಿವಾಸನ ಅಂಗಡಿಗೆ ಬಂದು ಮಗನ ಉಪನಯನಕ್ಕೆ ಹಣ ಬೇಡಿದನಂತೆ. ಜಿಪುಣ ಶ್ರೀನಿವಾಸ ಪ್ರತಿ ದಿನವೂ ಮಾರನೆಯ ದಿನ ಬರಹೇಳುತ್ತ, ಆರು ತಿಂಗಳುಗಳ ಕಾಲ ಮುಂದೆ ಹಾಕಿದನಂತೆ. ಕೊನೆಗೆ ಬ್ರಾಹ್ಮಣನ ಕಾಟ ತಡೆಯಲಾರದೆ ಒಂದು ಸವಕಲು ನಾಣ್ಯವನ್ನು ಕೊಟ್ಟನಂತೆ. ವಿಠ್ಠಲ ಈಗ ಶ್ರೀನಿವಾಸನ ಮನೆಗೆ ತೆರಳಿ ಆರು ತಿಂಗಳುಗಳ ಕಾಲ ಒಬ್ಬ ವರ್ತಕ ತನ್ನನ್ನು ಸತಾಯಿಸಿ ಕೊನೆಗೆ ಸವಕಲು ನಾಣ್ಯ ಕೊಟ್ಟ ಕಥೆ ಹೇಳಿದನಂತೆ. ಮಾರನೇ ದಿನ ಅದೇ ಬ್ರಾಹ್ಮಣ ಮನೆಗೆ ಬಂದು ಸರಸ್ವತಿಯ ಬಳಿ ತನ್ನ ಮಗನ ಉಪನಯನದ ಬಗ್ಗೆ ಹೇಳಿ ಅವಳಿಂದ ಸಹಾಯ ಯಾಚಿಸುತ್ತಾನೆ. ಸರಸ್ವತಿ ಮರುಕದಿಂದ ತನ್ನ ಬಳಿ ಯವುದೇ ಧನ ಆಭರಣಗಳಿಲ್ಲ ಎಲ್ಲವೂ ತನ್ನ ಗಂಡನ ಬಳಿ ಇದೆ. ಅವರ ಅನುಮತಿ ಇಲ್ಲದೇ ಏನನ್ನೂ ಕೊಡುವ ಪರಿಸ್ಥಿತಿಯಲ್ಲಿಲ್ಲ ಎಂದು ಬೇಸರ ಪಡುತ್ತಾಳೆ. ಆಗ ಬ್ರಾಹ್ಮಣ ನಿನ್ನ ತವರಿನಲ್ಲಿ ನಿನಗೆ ಕೊಟ್ಟ ಮೂಗುತಿಯ ಮೇಲೆ ನಿನ್ನ ಅಧಿಕಾರವಿದೆ. ಅದನ್ನೇ ಕೊಡು ಎಂದಾಗ, ಅವನಿಗೆ ತನ್ನ ಮೂಗುತಿಯನ್ನು ತೆಗೆದು ಕೊಟ್ಟಳಂತೆ. ಬ್ರಾಹ್ಮಣ ತಕ್ಷಣ ಮೂಗುತಿಯನ್ನು ಶ್ರೀನಿವಾಸನ ಅಂಗಡಿಗೆ ಒಯ್ದು ಅದನ್ನು ಅಡವಿಡಲು ಪ್ರಯತ್ನಿಸಿದನಂತೆ. ಶ್ರೀನಿವಾಸ ಮೂಗುತಿಯನ್ನು ಗುರುತಿಸಿ, ಹಣಕ್ಕೆ ನಾಳೆ ಬರುವಂತೆ ಬ್ರಾಹ್ಮಣನಿಗೆ ಹೇಳಿ, ಅದನ್ನು ಡಬ್ಬಿಯಲ್ಲಿಟ್ಟು ತಕ್ಷಣ ಮನೆಗೆ ಬಂದು ಪತ್ನಿಯ ಬಳಿ ಮೂಗುತಿಯನ್ನು ತೋರಿಸಲು ಹೇಳಿದನಂತೆ. ಹೆದರಿದ ಹೆಂಡತಿ ಸ್ನಾನ ಮಾಡುವಾಗ ತೆಗೆದಿಟ್ಟಿದ್ದೆ, ತರುತ್ತೇನೆಂದು ಒಳಗೆ ಹೋಗಿ, ಸ್ನಾನ ಕೊಠಡಿಯಲ್ಲಿ ವಿಷ ಕುಡಿಯುವ ಪ್ರಯತ್ನ ನಡೆಸಿದಾಗ ಅವಳ ವಿಷದ ಬಟ್ಟಲಿನೊಳಕ್ಕೆ ಮೇಲಿನಿಂದ ಮೂಗುತಿ ಬಿದ್ದಿತಂತೆ. ಅದನ್ನು ತಂದು ಶ್ರೀನಿವಾಸನಿಗೆ ಕೊಡುತ್ತಾಳೆ. ಅಂಗಡಿಗೆ ಹಿಂದಿರುಗಿ ಬಂದ ಶ್ರೀನಿವಾಸ ಡಬ್ಬಿಯನ್ನು ತೆಗೆದು ನೋಡಿದರೆ ಅಲ್ಲಿ ಇಟ್ಟಿದ್ದ ಮೂಗುತಿ ಮಾಯವಾಗಿತ್ತಂತೆ. ಆಗ ಅವನಿಗೆ ಬಂದ ಬ್ರಾಹ್ಮಣ ಬೇರೆ ಯಾರೂ ಅಲ್ಲ, ತನ್ನನ್ನು ಪರೀಕ್ಷಿಸಲು ಸ್ವತಃ ನಾರಾಯಣನೇ ಬ್ರಾಹ್ಮಣ ವೇಷದಲ್ಲಿ ಬಂದಿದ್ದನೆಂದು ಅರಿತು, ತನ್ನ ಬಗ್ಗೆ ತಾನೇ ನಾಚಿಕೆ ಪಟ್ಟುಕೊಂಡ ಶ್ರೀನಿವಾಸ, ತನ್ನ ಶ್ರೀಮಂತಿಕೆಯನ್ನು ತೊರೆದು ಹರಿದಾಸನಾಗುವ ನಿರ್ಧಾರ ತೆಗೆದುಕೊಂಡನಂತೆ. ದೇವರು ದಾರಿ ತೋರಿಸಿದ್ದರ ಬಗ್ಗೆ ಕೃತಜ್ಞತೆಗಾಗಿ ತಮ್ಮ ಹೆಂಡತಿಯ ಜ್ಞಾಪಕಾರ್ಥ ಒಂದು ಕೀರ್ತನೆಯನ್ನೂ ಪುರಂದರದಾಸರು ರಚಿಸಿದ್ದಾರೆ. ನಂತರ ಶ್ರೀನಿವಾಸ ನಾಯಕ 'ಪುರಂದರದಾಸ' ಎಂಬ ಹೆಸರನ್ನು ಪಡೆದರು.

ತಮ್ಮ ಹೆಂಡತಿಯ ಜ್ಞಾಪಕಾರ್ಥ ರಚಿಸಿದ ಕೀರ್ತನೆ
ಆದದ್ದೆಲ್ಲ ಒಳಿತೆ ಆಯಿತು
ರಚನೆ: ಶ್ರೀ ಪುರಂದರದಾಸರು
ರಾಗ : ಪಂತುರಾವಳಿ ; ತಾಳ : ಆದಿತಾಳ

ಆದದ್ದೆಲ್ಲ ಒಳಿತೆ ಆಯಿತು ನಮ್ಮ
ಶ್ರೀಧರ ಸೇವೆ ಮಾಡಲು ಸಾಧನ ಸಂಪತ್ತಾಯಿತು;

ದಂಡಿಗೆ ಬೆತ್ತ ಹಿಡಿಯೊದಕ್ಕೆ
ಮಂಡೆ ಮಾಚಿ ನಾಚುತಲಿದ್ದೆ
ಹೆಂಡತಿ ಸಂತತಿ ಸಾವಿರವಾಗಲಿ
ದಂಡಿಗೆ ಬೆತ್ತ ಹಿಡಿಸಿದಳಯ್ಯ

ಗೋಪಾಳ ಬುಟ್ಟಿ ಹಿಡಿಯೊದಕ್ಕೆ
ಭೂಪತಿಯಂತೆ ಗರ್ವಿಸುತಿದ್ದೆ
ಪತ್ನೀ ಕುಲ ಸಾವಿರವಾಗಲಿ
ಗೋಪಾಳ ಬುಟ್ಟಿ ಹಿಡಿಸಿದಳಯ್ಯ

ತುಳಸಿ ಮಾಲೆ ಹಾಕುವುದಕ್ಕೆ
ಅರಸನಂತೆ ನಾಚುತಲಿದ್ದೆ
ಸರಸಿಜಾಕ್ಷ ಪುರಂದರ ವಿಠ್ಠಲ
ತುಳಸಿ ಮಾಲೆ ಹಾಕಿಸಿದನಯ್ಯ

ಪುರಂದರದಾಸರ ಪದಗಳು ಪ್ರಾಸ ಮತ್ತು ಅರ್ಥದಲ್ಲಿ ಶ್ರೀಮಂತವಾಗಿವೆ. ಉದಾಹರಣೆಗೆ:
"ಕುದುರೆ ಅಂದಣ ಆನೆ ಬಯಸೋದು ನರಚಿತ್ತ
ಪಾದಚಾರಿ ಆಗೋದು ಹರಿ ಚಿತ್ತವಯ್ಯ"

ಅವರ ೩೦ ನೇ ಪ್ರಾಯದಲ್ಲಿ ದೈವಾನುಗ್ರಹದಿಂದ ಅವರಿಗೆ ವೈರಾಗ್ಯವುಂಟಾಗಿ, ತಮ್ಮ ಸಂಪತ್ತನ್ನೆಲ್ಲಾ ದಾನ ಮಾಡಿ, ಪರಿವಾರ ಸಮೇತರಾಗಿ, ಮಧುಕರವೃತ್ತಿ (ಸರ್ವಸಂಗ ಪರಿತ್ಯಾಗಿಗಳಾಗಿ, ಭಿಕ್ಷಾಟನೆ ಮಾಡುತ್ತಾ ಭಗವನ್ನಾಮ ಸಂಕೀರ್ತನೆ ಮಾಡುತ್ತಾ ಊರಿನಿಂದ ಊರಿಗೆ ಹೋಗುವುದು)ಯನ್ನು ಅವಲಂಬಿಸಿದರು. ನಂತರದ ದಿನಗಳಲ್ಲಿ, ಕ್ರಿ.. ೧೫೨೫ ರಲ್ಲಿ , ಮಧ್ವ ತತ್ವದ ಮುಖ್ಯ ಪ್ರವರ್ತಕರಾದ 'ಶ್ರೀ ವ್ಯಾಸತೀರ್ಥ' ಭೇಟಿಯಾಗಿ ಅವರಿಂದ ದೀಕ್ಷೆ ಪಡೆದು, ಅವರಿಂದಲೇ ' ಪುರಂದರ ದಾಸ' ಎಂಬ ಬಿರುದನ್ನೂ ಪಡೆದರು.

ಪುರಂದರ ದಾಸರು ಲಕ್ಷ ೭೫ ಸಾವಿರ ದೇವರನಾಮಗಳನ್ನು ರಚಿಸಿ ತಮ್ಮ ೮೦ ನೇ ವಯಸ್ಸಿನಲ್ಲಿ, ೧೫೬೪ ರಲ್ಲಿ ಪರಮಪದವನ್ನೈದರು. ತಮ್ಮೆಲ್ಲಾ ಕೀರ್ತನೆಗಳಿಗ 'ಪುರಂದರ ವಿಠಲ' ಎಂಬ ಅಂಕಿತ ನಾಮವನ್ನು ಕೊಟ್ಟರು. ಅವರ ಬಹುತೇಕ ಕೀರ್ತನೆಗಳು ಕನ್ನಡ ಭಾಷೆಯಲ್ಲಿದ್ದು, ಕೆಲವು ಸಂಸ್ಕೃತ ಭಾಷೆಯಲ್ಲೂ ಇವೆ. ಅವರ ಕೃತಿಗಳು ಭಾವ, ರಾಗ ಮತ್ತು ಲಯಗಳ ಸಮ್ಮಿಳಿತ ರೂಪವನ್ನು ಹೊಂದಿವೆ.

ಪುರಂದರ ದಾಸರು ಸಂಗೀತ ಕಲಿಕೆಯ ಮೂಲಪ್ರಮಾಣದ ರಾಗ 'ಮಾಯಾಮಾಳವಗೌಳ' ವನ್ನು ರಚಿಸಿ 'ಸ್ವರಾವಳಿ, ಅಲಂಕಾರ, ಲಕ್ಷಣ ಗೀತೆ, ಗೀತೆ, ಪ್ರಬಂಧ, ಊಗಾಭೋಗ, ಸೂಳಾದಿ, ಮತ್ತು ಕೃತಿ' ಗಳನ್ನು ಸಂಗೀತದ ಪಠ್ಯಕ್ರಮದಲ್ಲಿ ಅಳವಡಿಸಿ ಸಂಗೀತದ ಪಾಠಕ್ರಮವನ್ನು ಮತ್ತು ಅಭ್ಯಾಸಕ್ರಮವನ್ನು ರೂಪಿಸಿದರು. ಅವರು ಅಂದು ರೂಪಿಸಿದ ಪಠ್ಯಕ್ರಮವನ್ನು ಕರ್ನಾಟಕ ಸಂಗೀತವನ್ನು ಕಲಿಸುವವರು ಮತ್ತು ಕಲಿಯುವವರು ಇಂದಿಗೂ ಅನುಸರಿಸುತ್ತಿದ್ದಾರೆ.

ಪುರಂದರದಾಸರ ಪದಗಳು ಮುಂದೆ ಕರ್ನಾಟಕ ಸಂಗೀತ ಪದ್ಧತಿಯ ಬುನಾದಿಯಾದವು. ಶಾಸ್ತ್ರೀಯ ಸಂಗೀತವನ್ನು ಶ್ರೀ ಸಾಮಾನ್ಯನಿಗೆ ಪರಿಚಯ ಮಾಡಿಕೊಡಲು ಯತ್ನಿಸಿದ ಪುರಂದರದಾಸರು ಮಾಯಾಮಾಳವಗೌಳ ರಾಗದಿಂದ ಹಿಡಿದು ಹೊಸಬರಿಗೆ ಶಾಸ್ತ್ರೀಯ ಸಂಗೀತವನ್ನು ಕಲಿಸಿ ಕೊಡುವ ದಾರಿಯ ಬಗೆಗೆ ಯೋಚಿಸಿದರು. ಈಗಲೂ ದಕ್ಷಿಣ ಭಾರತದ ಶಾಸ್ತ್ರೀಯ ಸಂಗೀತದ ಪಾಠಗಳು ಪುರಂದರದಾಸರ ಸರಳೆ, ಜಂಟಿ ವರಸೆಗಳೊಂದಿಗೇ ಆರಂಭಿಸಲ್ಪಡುತ್ತವೆ. ಪುರಂದರದಾಸರ 'ಪಿಳ್ಳಾರಿ ಗೀತೆಗಳು' (ಉದಾ: ಲಂಬೋದರ ಲಕುಮಿಕರ...., ಕೆರೆಯ ನೀರನು ಕೆರೆಗೆ ಚೆಲ್ಲಿ.....ಇತ್ಯಾದಿ) ಸಂಗೀತದ ಸ್ವರ- ಸಾಹಿತ್ಯ- ತಾಳಗಳ ಸಂಯೋಜನೆಯನ್ನು ಅಭ್ಯಸಿಸಲು ಮೊದಲ ಮೆಟ್ಟಿಲು. ಕರ್ನಾಟಕ ಶಾಸ್ತ್ರೀಯ ಸಂಗೀತದ ತ್ರಿಮೂರ್ತಿಗಳಲ್ಲೊಬ್ಬರಾದ ಶ್ರೀ ತ್ಯಾಗರಾಜರು ತಮ್ಮ "ಪ್ರಹ್ಲಾದ ಭಕ್ತಿ ವಿಜಯಮ್" ಎಂಬ ಲೇಖನದಲ್ಲಿ ಶ್ರೀ ಪುರಂದರ ದಾಸರನ್ನು ತಮ್ಮ ಸಂಗೀತ ಗುರುಗಳೆಂದು ಹೇಳಿಕೊಂಡಿದ್ದಾರೆ.

ಹರಿನಾಮಸ್ಮರಣೆಯ ರೂಪದಲ್ಲಿ ರಚಿಸಿದ ಅವರ ಕೃತಿಗಳು ದೇವರನಾಮಗಳಾಗಿ ಪ್ರಸಿದ್ಧವಾಗಿವೆ. ಅವರ ಹರಿಭಕ್ತಿ ಹಾಗೂ ಸಂಗೀತದಲ್ಲಿನ ಪಾಂಡಿತ್ಯ ಕನ್ನಡ ಸಾಹಿತ್ಯದಲ್ಲೇ ವಿಶಿಷ್ಟವಾದ ಸ್ಥಾನವನ್ನು ಪಡೆದು ದಾಸ ಸಾಹಿತ್ಯವನ್ನು ಶ್ರೀಮಂತವಾಗಿಸಿವೆ.
ಡೊಂಕುಬಾಲದ ನಾಯಕರನ್ನು ತಿದ್ದುವುದರಿಂದ ಮೊದಲುಗೊಂಡು ಪದುಮನಾಭನ ಪಾದದೊಲುಮೆಗೆ ಹಂಬಲಿಸುವ ಮುನ್ನ ಭವಸಾಗರವನ್ನು ಈಸಬೇಕು ಇದ್ದು ಜಯಿಸಬೇಕು ಎಂದು ಹಾಡಿದ ಪುರಂದರರು ಭಕ್ತಿಪಂಥದ ಆರಾಧಕರು.

ದಾಸಪದ್ಧತಿಯ ಅನೇಕ ಪ್ರಮುಖರು, ಮುಖ್ಯವಾಗಿ ಪುರಂದರದಾಸ, ಶ್ರೀಪಾದರಾಯ, ಕನಕದಾಸ, ಜಗನ್ನಾಥ ದಾಸ, ವಿಜಯ ದಾಸ ಮತ್ತು ಕಮಲೇಶ ವಿಠ್ಠಲ ಮೊದಲಾದವರು ಸಂಗೀತದ ಮೂಲಕ ಭಕ್ತಿಮಾರ್ಗವನ್ನು ಬೋಧಿಸಿದವರು. ಪುರಂದರದಾಸರು ರಚಿಸಿ ಹಾಡಿದ ಪದಗಳು ಮತ್ತು ಸಂದೇಶಗಳನ್ನು ನಮಗೆ ತಲುಪಿಸಿದ ರೀತಿ ಅತ್ಯಂತ ಸರಳವಾಗಿವೆ.
ಕರ್ನಾಟಕ ಶಾಸ್ತ್ರೀಯ ಸಂಗೀತದ ಪಿತಾಮಹರಾದ ಪುರಂದರದಾಸರ ಸಾಧನೆಯನ್ನು ಕಂಡ ಸರ್ವರೂ 'ದಾಸರೆಂದರೆ ಪುರಂದರದಾಸರಯ್ಯಾಎಂದು ಕೊಂಡಾಡಿದ್ದಾರೆ. ಇವರ ಎಲ್ಲ ಕೀರ್ತನೆಗಳೂ ಕನ್ನಡ ಭಾಷೆಯಲ್ಲಿದ್ದು, ಭಕ್ತಿ ಮಾರ್ಗವನ್ನು ಜನಸಾಮಾನ್ಯರಿಗೆ ಪರಿಚಯ ಮಾಡಿಕೊಡುವ ಉದ್ದೇಶವನ್ನು ಹೊಂದಿವೆ.

ಮೂಲ: ವಿವಿಧ ಆನ್ಲೈನ್ ಮೂಲಗಳಿಂದ ಕ್ರೋಢಿಕರಿಸಿ ರಚಿಸಿದ ಬರಹ

No comments:

Post a Comment

ಪುತ್ತೂರ್ ಅಜ್ಜ

  ರಾಮಚಂದ್ರ ಭಟ್ರವರ ಹೆತ್ತವರು   ರಾಮೇಶ್ವರಕ್ಕೆ ತೀರ್ಥಯಾತ್ರೆಗೆ ತೆರಳಿ ಬಂದ   ತರುವಾಯ 1916 ರ ಜೂನ್ 15 ರಂದು ನೆಟ್ಟಾರಿನಲ್ಲಿ   ರಾಮಚಂದ್ರರ ಜನನವಾಯಿತು ...