Followers

Friday, July 10, 2020

ಅಜಗಣ್ಣ ಮತ್ತು ಮುಕ್ತಾಯಿ

ಅಜಗಣ್ಣ ಗದಗ ಜಿಲ್ಲೆಯ ಲಕ್ಕಂಡಿ ಗ್ರಾಮದವರು. ಮಹಾತತ್ವಜ್ಞಾನಿ, ಆರೂಢಿ, ಕಾಯಕಯೋಗಿ, ಅನನ್ಯ ಗುಪ್ತ ಶಿವಭಕ್ತ, ಶ್ರೇಷ್ಠ ವಚನಕಾರ. ಇವರು ಮಹತ್ವದ ವಚನಕಾರ್ತಿ ಶರಣೆ ಮುಕ್ತಾಯಕ್ಕಳ ಅಣ್ಣ. ಅನುಭವ ಮಂಟಪದ ೭೭೦ ಅಮರ ಗಣಂಗಳಲ್ಲಿ ಇವರೂ ಒಬ್ಬ ಮಹತ್ವದ ವಚನಕಾರ ಶರಣರು. ಈವರೆಗೆ ಈ ಶರಣರ ಹತ್ತು ವಚನಗಳು ಲಭ್ಯವಾಗಿವೆ. ಅವುಗಳ ಅಂಕಿತನಾಮ:’ಮಹಾಘನಸೋಮೇಶ್ವರಾ’ ಅವುಗಳಲ್ಲಿ; ಗುರು ಶಿಷ್ಯ ಸಂಬಂಧ, ಆಧ್ಯಾತ್ಮಿಕ ಅನುಭಾವದ ಹಿರಿಮೆ ಹೆಪ್ಪುಗಟ್ಟಿದೆ. 12ನೆಯ ಶತಮಾನದ ಕರ್ಣಾಟಕದ ಅಂದಿನ ವಚನಕಾರರಲ್ಲಿ ಮೊದಲ ಸಾಲಿಗೆ ಸೇರಿದವನು. ಇವನು ತನ್ನ ಎಳವೆಯಲ್ಲಿ ಒಂದು ಅದ್ಭುತ ದೃಶ್ಯವನ್ನು ಕಂಡನಂತೆ; ಸರ್ಪವೊಂದು ತನ್ನ ಹೆಡೆಯಲ್ಲಿ ರತ್ನವನ್ನು ನೆಲದ ಮೇಲಿರಿಸಿ, ಅದರ ಬೆಳಕಿನಲ್ಲಿ ತನ್ನ ಆಹಾರವನ್ನು ಹುಡುಕಿ ನುಂಗಿದ ಮೇಲೆ ಆ ರತ್ನವನ್ನು ಮತ್ತೆ ಹೆಡೆಯಲ್ಲಿ ಅಡಗಿಸಿಟ್ಟುಕೊಂಡು ಸಳಸಳನೆ ಹರಿದು ಅದೃಶ್ಯವಾಯಿತು. ಈ ದೃಶ್ಯದಿಂದ ಅಜಗಣ್ಣನಿಗೆ ತನ್ನ ಇಷ್ಟಲಿಂಗವನ್ನು ಗೋಪ್ಯವಾಗಿ ಧರಿಸಬೇಕು ಎಂಬ ತತ್ತ್ವದರ್ಶನ ಹೃದ್ಗತವಾಯಿತು. ಅಂದಿನಿಂದ ಶಿವಭಕ್ತಿಯನ್ನು ಹೊರಗೆ ತೋರಗೊಡದೆ ನಿರಾಡಂಬರದ ಹಾಗೂ ಋಜುಮಾರ್ಗದ ದಿವ್ಯಜೀವನವನ್ನು ನಡೆಸುವ ಕನಸನ್ನು ಕಟ್ಟಿಕೊಂಡ. ಆ ಧ್ಯೇಯದತ್ತ ತನ್ನ ಆಚಾರವನ್ನು ದೃಢವಾಗಿ ತಿದ್ದಿಕೊಂಡ. ಬಹಿರಂಗದ ಪೂಜೋಪಚಾರಗಳು ಅವನಿಗೆ ಒಗ್ಗದೇ ಹೋದವು. ಅಂತರಂಗದ ಧ್ಯಾನಧಾರುಣಗಳೇ ಅವನ ಸಾಧನೆಯ ಸೂತ್ರಗಳಾದವು.

ಸುತ್ತಮುತ್ತಲಿನ ಜನಕ್ಕೆ ಇದು ಅರ್ಥವಾಗಲಿಲ್ಲ. ಲಿಂಗಪೂಜೆಯನ್ನು ಎಲ್ಲರಂತೆ ಮಾಡದ ಅಜಗಣ್ಣ ಅನಾಚಾರಿ ಎಂಬ ಮಾತು ಪ್ರಚಲಿತವಾಯಿತು. ಬಹಿರಂಗ ಮುಗ್ಧನೂ ಅಂತರಂಗಸಿದ್ದನೂ ಆದ ಬಾಲಕ ಅಜಗಣ್ಣನನ್ನು ಅವನ ಒಡನಾಡಿಗಳು ಗೇಲಿಮಾಡಿ ಹಿಂಸಿಸತೊಡಗಿದರು. ಅವರು ಒಂದು ದಿನ ವಿನೋದಕ್ಕಾಗಿ ಅಜಗಣ್ಣನನ್ನು ತಡೆದು ನಿಲ್ಲಿಸಿ 'ಬೆಲ್ಲ ಕೊಡುತ್ತೇವೆ ನಿನ್ನ ಇಷ್ಟಲಿಂಗವನ್ನು ಕೊಡು' ಎಂದು ಪೀಡಿಸಿದರು. ಆಗ ಅಜಗಣ್ಣ ತನ್ನ ಇಷ್ಟಲಿಂಗವನ್ನು ಅಂಗೈಯೊಳಗೆ ಬಿಗಿಯಾಗಿ ಹಿಡಿದು, ದೃಷ್ಟಿ ನುಸುಳಿಸಿ, ನಟ್ಟು ನೋಡಿ, ಬಾಯಲ್ಲಿ ಹಾಕಿಕೊಂಡು ಓಂ ನಮಃಶಿವಾಯ ಎನ್ನುತ್ತ ನುಂಗಿಬಿಟ್ಟ. ಆಗ ಅದು ಅವನ ಹೃದಯಕಮಲಕರ್ಣೀಕಾ ಮಧ್ಯದಲ್ಲಿ ಜ್ಯೋತಿರ್ಲಿಂಗವಾಗಿ ಥಳಥಳಿಸಿತಂತೆ. ಆದರೇನು ಅವನು ಜನರ ಕಣ್ಣಿಗೆ ಮಾತ್ರ ಅರೆಮರುಳನಂತೆ ವಿಪರೀತವಾಗಿ ಕಂಡ.

ತಂಗಿಯಾದ ಮುಕ್ತಾಯಿ, ಪೇಚಿನ ಪರಿಸ್ಥಿತಿಯಲ್ಲಿದ್ದ ಅಜಗಣ್ಣನನ್ನು ಮನೆಗೆ ಕರೆತಂದಳು. ಆದರೆ ದೇಹದ ಮೇಲೆ ಲಿಂಗವಿಲ್ಲದ ಹುಡುಗನನ್ನು ಆಚಾರವಂತರೆನಿಸಿಕೊಂಡಿದ್ದ ಅವನ ತಂದೆತಾಯಿಗಳು ಮನೆಯೊಳಗೆ ಇಟ್ಟುಕೊಳ್ಳಲಿಲ್ಲ; ಮೇಲಾಗಿ ಅವನನ್ನೇಕೆ ಮನೆಗೆ ಕರೆತಂದುದೆಂದು ಮುಕ್ತಾಯಿಯನ್ನು ಹೊರನೂಕಿದರು. ಅಣ್ಣ ತಂಗಿಯರಿಬ್ಬರೂ ಅಡಕ ಎಂಬ ಊರಿಗೆ ಹೋಗಿ ಅಲ್ಲಿದ್ದ ಸೋದರಮಾವನ ಮನೆ ಸೇರಿದರು. ಸೋದರಮಾವ ತನ್ನ ಮಗಳನ್ನು ಅಜಗಣ್ಣನಿಗೆ ಕೊಟ್ಟು ಮದುವೆ ಮಾಡಿದ. ಆ ಮಾವನ ಮಗಳು ತನ್ನನ್ನು ಅನಾಚಾರಿಯಾದೊಬ್ಬನಿಗೆ ಕೊಟ್ಟರೆಂದು ತೀವ್ರ ಅಸಮಾಧಾನಪಟ್ಟಳು. ಸಮರಸದಿಂದ ಒಗೆತನಮಾಡದೆ ಗಂಡನೊಡನೆ ಉದಾಸೀನದಿಂದ ವರ್ತಿಸಿದಳು.

ತನಗೆ ಇಕ್ಕಟ್ಟಾದರೂ ತನ್ನ ಹೆಂಡತಿಯ ಶಿವಾಚಾರನಿಷ್ಠೆಯನ್ನು ಕಂಡು ಒಂದು ವಿಧವಾದ ಸಮಾಧಾನ, ಅಜಗಣ್ಣನಿಗೆ. ತನ್ನನ್ನು ಅವಳು ಪುರಸ್ಕರಿಸದಿರುವುದಕ್ಕೆ ಅನಾಚಾರಿಯಾದವನು ಗಂಡನಾದನಲ್ಲಾ ಎಂಬ ಒಳಗುದಿ ಕಾರಣವೇ ಹೊರತು ಅನ್ಯಥಾ ಅಲ್ಲವೆಂಬ ಸಹಾನುಭೂತಿಯೇ ಅವನ ಸಮಾಧಾನಕ್ಕೆ ಪ್ರೇರಕವಾಗಿತ್ತು. ತನ್ನ ಭಕ್ತಿ ತಾನು ಕೈ ಹಿಡಿದ ಹೆಂಡತಿಗೂ ತಿಳಿಯಬಾರದೆಂಬುದೇ ಅವನ ಮಹದಾಕಾಂಕ್ಷೆ. ಇದನ್ನು ಸಾಧಿಸುವಲ್ಲಿ ಮನೆಯೊಳಗೆ ಹೆಂಡತಿ ಮಕ್ಕಳಿಂದಾಗಲಿ, ಮನೆಯಿಂದ ಹೊರಗೆ ಜನಜಂಗುಳಿಯಿಂದಾಗಲಿ ಏನೇ ಅವಜ್ಞೆ ತಿರಸ್ಕಾರ ಬಂದರೂ ಅವನ್ನೆಲ್ಲ ನಿತ್ತರಿಸಿ ನಿರಾಡಂಬರದ ಸಾತ್ವಿಕ ಜೀವನದ ಸ್ಮಾರಕವಾಗಬಯಸಿದ ಅಜಗಣ್ಣನೊಬ್ಬ ಅಪೂರ್ವ ಮಹನೀಯ.

ಇತ್ತಕಡೆ ಮುಕ್ತಾಯಿಗೂ ಮದುವೆಯಾಯಿತು. ಅವಳು ಗಂಡನ ಮನೆ (ಮೊಸಳೆಕಲ್ಲು)ಗೆ ಹೋಗುವಾಗ ಅಣ್ಣನನ್ನು ಅಗಲಲಾರದೆ ಅಣ್ಣನ ಸಾವಿನ ಸೂಚನೆಯೇನೆಂದು ಕೇಳಿದಳು. ಅದಕ್ಕೆ ಅಜಗಣ್ಣ, 'ನಿನ್ನ ಹಿತ್ತಲಲ್ಲಿ ಒಂದು ಮಲ್ಲಿಗೆಯ ಗಿಡವನ್ನು ನೆಡು, ನೆಟ್ಟು ಆರೈಕೆ ಮಾಡುತ್ತಿರು. ಅದು ಒಣಗಿದರೆ ನಾನು ಸತ್ತೆನೆಂದು ತಿಳಿ' ಎಂದ. ತಂಗಿ ಗಂಡನ ಮನೆಗೆ ಹೋದಳು.  ಪರಪೀಡಕಪ್ರವೃತ್ತಿಯ ಪುಂಡರು ಕೆಲವರು ಒಂದು ದಿನ ಭಾರವಾದ ಒಂದು ಗೋದಿಯ ಮೂಟೆಯನ್ನು ಅಜಗಣ್ಣನ ಮೇಲೆ ಹೇರಿ ತಮ್ಮ ಮನೆಗೆ ಅಟ್ಟಿಕೊಂಡು ಹೋದರು. ಆ ರಭಸದಲ್ಲಿ ಮನೆಯ ಒಳಗೆ ಹೋಗುವಾಗ ಅಜಗಣ್ಣನ ತಲೆ ಬಾಗಿಲುವಾಡಕ್ಕೆ ಘಟ್ಟಿಸಿ ಒಡೆದು ಹೋಯಿತು; ಪ್ರಾಣಪಕ್ಷಿ ಹಾರಿ ಹೋಗಿ ಶಿವನ ಗೂಡು ಸೇರಿತು.
ಅಣ್ಣನ ಸಾವಿನ ಸುದ್ದಿಯನ್ನು ತಿಳಿದು ತಂಗಿ ಮುಕ್ತಾಯಿ ಕಣ್ಣೀರಿಟ್ಟು, ಅಣ್ಣನ ಮನೆಯಷ್ಟೇ ಅಲ್ಲ ಈ ಲೋಕವೇ ಬರಿದಾಗಿ ಕಂಡ ಮುಕ್ತಾಯಕ್ಕ ದಿಕ್ಕುಗೆಟ್ಟು ಶೋಕದಿಂದ ತಳಮಳಿಸುತ್ತಾಳೆ. ಅಕಾಲದಲ್ಲಿ ಅಸುನೀಗಿದ ಅಣ್ಣ ಅಜಗಣ್ಣನ ತಲೆಯನ್ನು ತನ್ನ ತೊಡೆಯ ಮೇಲೆರಿಸಿಕೊಂಡು ನಿನ್ನಗಲಿ ನಾನು ಬದುಕಲಿ ಎಂದು ರೋದಿಸುತ್ತಾಳೆ. ಅಣ್ಣನ ಅಗುಲುವಿಕೆಯಿಂದ ದಃಖಕ್ಕಿಂತ ಅವಳಿಗೆ ಅವನ ಗುಪ್ತ ಭಕ್ತಿ ಅರಿಯದೆ ಹೋದೆನಲ್ಲಾ, ಅಧ್ಯಾತ್ಮಜ್ಞಾನ ತಿಳಿಯದೆ ಹೋದೆನಲ್ಲಾ ಎಂಬ ದುಃಖ ವಿಶೇಷವಾಗಿತ್ತು. ಆಗ ಅವಳ ಜ್ಞಾನದಾಹವನ್ನು ಅರಿತಿದ್ದ ಅಲ್ಲಮ ಪ್ರಭು ಅವಳಿಗೆ ನಿವೃತ್ತಿಮಾರ್ಗ ಭೋಧಿಸಲು ಆಗಮಿಸುತ್ತಾನೆ.

ಅಲ್ಲಮಪ್ರಭು ಮುಕ್ತಾಯಕ್ಕನನ್ನು ಭೇಟಿಯಾಗುತ್ತಾನೆ. ಆಕೆಯ ಆಧ್ಯಾತ್ಮಿಕ ಶಿಕ್ಷಕನಾಗಿದ್ದ ತನ್ನ ಸಹೋದರ ಅಜಗಣ್ಣನ ಮರಣದಿಂದ ಬೇರ್ಪಟ್ಟಿದ್ದರಿಂದ ಅವಳು ತುಂಬಾ ದುಃಖಿತಳಾಗಿದ್ದಳು. ಅವಳ ಬಗ್ಗೆ ಸಹಾನುಭೂತಿ ಹೊಂದಿರುವ ಅಲ್ಲಮಪ್ರಭು, ದುಃಖದ ಕಾರಣವನ್ನು ವಿಚಾರಿಸಿ, ಆತ್ಮ ಸಾಕ್ಷಾತ್ಕಾರದ ಹಂತವನ್ನು ಸ್ವಂತ ಪ್ರಯತ್ನ ಮತ್ತು ಅಭ್ಯಾಸಗಳಿಂದ ಮಾತ್ರ ತಲುಪಬಹುದು ಎಂದು ಹೇಳಿತ್ತಾರೆ. ಆದರೆ ಈ ಹೇಳಿಕೆಯಿಂದ ತೃಪ್ತಳಾಗದ ಮುಕ್ತಾಯಕ್ಕ: "ಸರಿಯಾದ ಅಭ್ಯಾಸಗಳಿಗೆ ಮಾರ್ಗದರ್ಶನ ನೀಡಲು ಒಬ್ಬ ಶಿಕ್ಷಕನ ಅವಶ್ಯಕತೆ ಇದೆ ಈಗ ತನ್ನ ಶಿಕ್ಷಕನಾದ ಸಹೋದರನ ಮಾರ್ಗದರ್ಶನವನ್ನು ಹೊಂದಲು ಸಾಧ್ಯವಿಲ್ಲ" ಎಂದು ತಿಳಿಸುತ್ತಾಳೆ. "ಆಧ್ಯಾತ್ಮಿಕತೆಯ ಅಭ್ಯಾಸದಲ್ಲಿ ಸಾಧಕ ಒಂದು ನಿರ್ದಿಷ್ಟ ಸ್ಥಿತಿಯನ್ನು ತಲುಪಿದ ನಂತರ ಮುಂದಿನ ಉನ್ನತಿಗಾಗಿ ಗುರುವಿನ ಅವಶ್ಯಕತೆ ಇರುವುದಿಲ್ಲ. ಗುರುವಿನ ಅಗತ್ಯತೆ ಒಂದು ನಿರ್ದಿಷ್ಟ ಹಂತದಲ್ಲಿ ಕ್ಷೀಣಿಸುತ್ತದೆ ಮತ್ತು ತದನಂತರದ ಆಧ್ಯಾತ್ಮಿಕ ಸಾಧನೆಗೆ ಸ್ವಯಂ ಜ್ಞಾನವು ಮಾರ್ಗದರ್ಶಕ ನೀಡುತ್ತದೆ. ಲೌಕಿಕವಾಗಿ ಲೋಕದಲ್ಲಿದ್ದರೂ; ಇದ್ದೂ ಇಲ್ಲದಂತೆ ಬದುಕುವುದೇ ನಿಜವಾದ ಸಮಾಧಿ" ಎಂದು ಅಲ್ಲಮರು ಹೇಳುತ್ತಾರೆ.

ಹೀಗೆ ಅಲ್ಲಮ ಮುಕ್ತಾಯಕ್ಕನ ನಡುವೆ ತಾತ್ವಿಕ ಚಿಂತನೆ ನಡೆಯುತ್ತದೆ. ಜೀವನದ ನಿತ್ಯಾನಿತ್ಯತೆ, ಸಕಾರ ನಿರಾಕರಗಳ; ಶಬ್ದ ನಿಶ್ಯಬ್ದಗಳ ಸಮನ್ವಯದ ಕುರಿತು ಶರಣರ ನಿಲುವು ಹಾಗೆಯೇ ಇನ್ನಿತರ ಆಧ್ಯಾತ್ಮಿಕ ಆಳಗಳ ಕುರಿತು ಅವಳು ಅಲ್ಲಮನಿಂದ ತಿಳಿದುಕೂಂಡು ಶೋಕ ವಿಮಕ್ತಳಾಗಿ ಅಲ್ಲಮನಿಗೆ ಶರಣಾಗಿ ಲಿಂಗಾಂಗ ಸಾಮರಸ್ಯ ಪಡೆದು ಕೃತಾರ್ಥಳಾಗುತ್ತಾಳೆ.

ಮುಕ್ತಾಯಕ್ಕ ಶ್ರೇಷ್ಟ ವಚನಕಾರ್ತಿಯಾಗಿದ್ದು. ಅವಳು ಬರೆದ 37 ವಚನಗಳು ಲಭ್ಯವಾಗಿವೆ. ತನಗೆ ಗುರು ಸಮಾನವಾಗಿದ್ದ ಅಣ್ಣ ಅಜಗಣ್ಣನ ಹೆಸರನ್ನೇ ವಚನಾಂಕಿತವಾಗಿಸಿಕೊಂಡಿದ್ದಾಳೆ. ಅವಳ ವಚನಗಳು ಅನುಭಾವಪೂರ್ಣವಾಗಿವೆ. ಉಪಮೆ ಪ್ರತಿಮೆಗಳಿಂದ ಕೂಡಿದ್ದು ಕಾವ್ಯ ಗುಣ ಅಭಿವ್ಯಕ್ತಿಯ ಕಲೆ ವಿಶೇಷವಾಗಿವೆ.

"ಮಹಾಘನ ಸೋಮೇಶ್ವರ"ಎಂಬ ಅಂಕಿತದಲ್ಲಿ ಬರೆದ ಅಜಗಣ್ಣನ ೧೦ ವಚನಗಳು ದೊರೆತಿವೆ. ಗುರುವಿನ ಲಕ್ಷಣ, ಗುರು ಶಿಶ್ಯರ ಸಂಬಂಧದ ಸ್ವರೂಪ, ಶರಣನ ಅನನ್ಯ ವ್ಯಕ್ತಿತ್ವ ಇವುಗಳಲ್ಲಿ ವ್ಯಕ್ತವಾಗಿದೆ. ಚೆನ್ನಬಸವಣ್ಣ ಅಜಗಣ್ಣನ ಬಗ್ಗೆ ಹೀಗೆ ಹೇಳಿದ್ದಾನೆ: 

ಆದ್ಯರ ಅರವತ್ತು ವಚನಕ್ಕೆ
ದಣ್ಣಾಯಕರ ಇಪ್ಪತ್ತು ವಚನ
ದಣ್ಣಾಯಕರ ಇಪ್ಪತ್ತು ವಚನಕ್ಕೆ
ಪ್ರಭುದೇವರ ಹತ್ತು ವಚನ
ಪ್ರಭುದೇವರ ಹತ್ತು ವಚನಕ್ಕೆ
ಅಜಗಣ್ಣನ ಐದು ವಚನ
ಅಜಗಣ್ಣನ ಐದು ವಚನಕ್ಕೆ
ಕೂಡಲ ಚೆನ್ನಸಂಗಯ್ಯನಲ್ಲಿ
ಮಹಾದೇವಿಯಕ್ಕಗಳ ಒಂದು ವಚನ
ನಿರ್ವಚನ ಕಾಣಾ ಸಿದ್ದರಾಮಯ್ಯಾ

ಶ್ರೇಷ್ಠ ವಚನಕಾರರಲ್ಲಿ ಮಹಾದೇವಿಯಕ್ಕನನ್ನು ಬಿಟ್ಟರೆ ಎರಡನೆಯ ಸ್ಥಾನವೇ ಅಜಗಣ್ಣನದು ಎಂದು ಚೆನ್ನಬಸವಣ್ಣ ಹೇಳಿದ್ದಾರೆ.

ಅಜಗಣ್ಣನ ವಚನ
ಗುರುಶಿಷ್ಯರಿಬ್ಬರೂ ಸಹಪಂಕ್ತಿಯಲ್ಲಿ
ಲಿಂಗಾರ್ಚನೆ ಮಾಡಿಹೆವೆಂಬರಯ್ಯಾ!
ಹೋ! ಹೋ! ಬಾಲಭಾಷೆಯ ಕೇಳಲಾಗದು.

ಅಲ್ಲಲ್ಲ, ಮಾಡಬಹುದು. ಅದೇನು ಕಾರಣ?
ಗುರುವಿನ ಅರಿವಿನ ಹರಿವನರಿಯಬಲ್ಲಡೆ ಮಾಡಬಹುದು, ಮಾಡಬಹುದು.

ಶಿಷ್ಯ; ಪ್ರಸಾದವೆಂಬುಭಯಸಂದೇಹ ಹಿಂದುಳಿಯಬಲ್ಲಡೆ,
ಮಾಡಬಹುದು, ಮಾಡಬಹುದು.

ಇದಲ್ಲದೆ, ಲಿಂಗಪ್ರಸಾದದ ಮೇಲೆ ಗುರುಪ್ರಸಾದವನಿಕ್ಕಿಹೆನೆಂಬ
ಶಿವದ್ರೋಹಿಗಳನೇನೆಂಬೆ!
ಕೊಂಡೆಹೆನೆಂಬ ಗುರುದ್ರೋಹಿಗಳನೇನೆಂಬೆ!

ಇದು ಕಾರಣ, ಮಹಾಘನ ಸೋಮೇಶ್ವರಾ,
ನಿಮ್ಮಲ್ಲಿ, ಇವರಿಬ್ಬರ ಗುರು ಶಿಷ್ಯರೆಂದೆನಾದಡೆ, ಎನ್ನನದ್ದಿ ನೀನೆದ್ದು ಹೋಗಯ್ಯಾ.
೦೦೦೦೦೦೦೦೦೦
ಮುಕ್ತಾಯಿ ವಚನ
ಅದ್ವೈತವ ನೆಲೆಗೊಳಿಸಿ ಎರಡಳಿದೆನೆಂಬವರು
ಶಿಶುಕಂಡ ಕನಸಿನಂತಿರಬೇಕಲ್ಲದೆ,
ನುಡಿದು ಹೇಳುವನ್ನಕ್ಕರ ಬಿನ್ನವಲ್ಲದೇನು ಹೇಳಾ ?
ಅರಿವರತು ಮರಹು ನಷ್ಟವಾಗಿ ಗುರುವ ತೋರಿದೆನೆಂಬರು.
ಇದಿರಿಂಗೆ ಕರುಳಕಲೆಯನರುಹುವ ಪರಿಯೆಂತು ಹೇಳಾ ?
ಮನದ ಕೊನೆಯ ಮೊನೆಯ ಮೇಲಣ ಅರಿವಿನ ಕಣ್ಣಮುಂದೆ
ಸ್ವಯಂಪ್ರಕಾಶ ತೋರುತ್ತಿದ್ದಡೆ ತಾನಾಗಬಲ್ಲನೆ ?
ನೆರೆಯರಿತು ಮರೆಯಬಲ್ಲಡೆ
ಎನ್ನ ಅಜಗಣ್ಣನಂತೆ ಶಬ್ದಮುಗ್ಭನಾಗಿರಬೇಕಲ್ಲದೆ,
ಶಬ್ದಸಂದಣಿಯ ಮಾತು ಸಯವಲ್ಲ ನೋಡಯ್ಯಾ.
--
ಎನ್ನ ಭಾವಕ್ಕೆ ಗುರುವಾದನಯ್ಯಾ ಬಸವಣ್ಣನು.
ಎನ್ನ ನೋಟಕ್ಕೆ ಲಿಂಗವಾದನಯ್ಯಾ ಚೆನ್ನಬಸವಣ್ಣನು.
ಎನ್ನ ಜ್ಞಾನಕ್ಕೆ ಜಂಗಮವಾದನಯ್ಯಾ ಪ್ರಭುದೇವರು.
ಎನ್ನ ಪರಿಣಾಮಕ್ಕೆ ಪ್ರಸಾದವಾದನಯ್ಯಾ ಮರುಳಶಂಕರದೇವರು.
ಎನ್ನ ಹೃದಯಕ್ಕೆ ಮಂತ್ರವಾದನಯ್ಯಾ ಮಡಿವಾಳಯ್ಯನು.
ಇಂತೀ ಐವರ ಕಾರುಣ್ಯಪ್ರಸಾದವ ಕೊಂಡು
ಬದುಕಿದೆನಯ್ಯಾ ಅಜಗಣ್ಣತಂದೆ.
ಮೂಲ: ಆನ್ಲೈನ್ ಹಾಗೂ ಇತರ ಮೂಲಗಳಿಂದ ಸಂಗ್ರಹಿ ರಚಿಸಲಾಗಿದೆ

No comments:

Post a Comment

ಪುತ್ತೂರ್ ಅಜ್ಜ

  ರಾಮಚಂದ್ರ ಭಟ್ರವರ ಹೆತ್ತವರು   ರಾಮೇಶ್ವರಕ್ಕೆ ತೀರ್ಥಯಾತ್ರೆಗೆ ತೆರಳಿ ಬಂದ   ತರುವಾಯ 1916 ರ ಜೂನ್ 15 ರಂದು ನೆಟ್ಟಾರಿನಲ್ಲಿ   ರಾಮಚಂದ್ರರ ಜನನವಾಯಿತು ...