Followers

Wednesday, July 22, 2020

ಕಂಕರಿ ಕಕ್ಕಯ್ಯ

ಕಾಯಕ: ‘ಕಂಕರಿ’ (ಚೌಡಿಕೆ ಅಥವಾ ತುಂತುಣಿ) ವಾದ್ಯ ನುಡಿಸುವುದು. ‘ಕಂಕರಿ’ ಒಂದು ಜನಪದ ವಾದ್ಯ. ಚೌಡಿಕೆ ಅಥವಾ ತುಂತುಣಿ ಮಾದರಿಯನ್ನು ಹೋಲುತ್ತದೆ. ಈ ವಾದ್ಯ ನುಡಿಸುವುದರಲ್ಲಿ ವಿಶೇಷ ಪರಿಣತಿಯನ್ನು ಪಡೆದ ಕಕ್ಕಯ್ಯನನ್ನು ಜನ ‘ಕಂಕರಿ ಕಕ್ಕಯ್ಯ’ ಎಂದು ಕರೆದರು. ಆರಂಭದಲ್ಲಿ ಇವರು ಸಾಮಾನ್ಯ ಜನಪದ ಕಲಾವಿದರಾಗಿದ್ದರು. ಶಿವಶರಣರ ಕ್ರಾಂತಿಯ ಪ್ರಭಾವಕ್ಕೆ ಇವರು ಒಳಗಾದರು. ಕಂಕರಿ ನುಡಿಸುತ್ತಾ ಮನೆ ಮನೆಗೆ ಹೋಗಿ ಹಾಡುತ್ತ, ಕುಣಿಯುತ್ತಾ ಕಾಯಕ ಪಡೆದು ಹೊಟ್ಟೆ ಹೊರೆಯಲು ಪ್ರಾರಂಭಿಸಿದರು. ಕಕ್ಕಯ್ಯನಿಗೆ ಶರಣ ತತ್ತ್ವ ದಾರಿದೀಪವಾಯಿತು. ಇವರಲ್ಲಿ ಕಾಯಕ ಪ್ರಜ್ಞೆ ಬೆಳೆಯಿತು. ಇದರಿಂದ ಸ್ವಾವಲಂಬನೆ, ಆತ್ಮಗೌರವ ಇವರಲ್ಲಿ ಬೆಳೆಯಿತು. ಬಸವಣ್ಣನವರ ಮುಂದಾಳತ್ವದಲ್ಲಿ ರೂಪುಗೊಂಡ ಶಿವಶರಣರ ಹೊಸ ಹೊಸ ತತ್ತ್ವಗಳಿಗೆ ಮಾರುಹೋಗಿ ಇವರು ಕಲ್ಯಾಣಕ್ಕೆ ಬಂದು ನೆಲೆಸಿದರು.

ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಚೆದುರಿದ್ದ ಜನಪದ ಕಲಾವಿದರನ್ನು ಶರಣರು ‘ಕಾಯಕ’ದ ತಾತ್ವಿಕ ನಿಲುವಿಗೆ, ಮುಕ್ತ ಮನಸ್ಸಿನಿಂದ ಗೌರವದಿಂದ ಸ್ವಾಗತಿಸಿದರು; ಅಲ್ಲದೆ ಶಿವಶರಣರ ಸಹಜ ದೃಷ್ಟಿ ಮತ್ತು ಜೀವನದ ಧೋರಣೆಗಳು ಕಕ್ಕಯ್ಯ ಮೊದಲುಗೊಂಡು ಅನೇಕ ಜನಪದ ಕಲಾವಿದರನ್ನು ತೀವ್ರಗತಿಯಲ್ಲಿ ಆಕರ್ಷಿಸಿ ಅವರಲ್ಲಿ ಆತ್ಮ ವಿಶ್ವಾಸವನ್ನು ಕುದುರಿಸಿತು. ಜನಪದ ಹಾಡು, ಕುಣಿತ, ವೇಷಗಾರಿಕೆ ಇತ್ಯಾದಿ ವಿವಿಧ ಕ್ಷೇತ್ರದ ಕಲಾವಿದರು ಕಲ್ಯಾಣದಲ್ಲಿ ನೆಲೆಸಿ, ಶರಣರ ಒಡನಾಟದಲ್ಲಿದ್ದು ಅವರಿಂದ ಕಾಯಕ ಸಿದ್ಧಾಂತದ ಹಿರಿಮೆಯನ್ನು ಅರಿತು ಮೈಗೂಡಿಸಿಕೊಂಡು ಕಲೆಗಳ ಚೆಲುವಿಗೆ ಭಕ್ತಿ ಶಕ್ತಿಯ ಸಹಜ ನಿಲುವನ್ನು ಅಳವಡಿಸಿ ನಾಡಿನ ನಾನಾ ಭಾಗಗಳಿಗೆ ಹೋಗಿ ಶರಣಧರ್ಮ ಪ್ರಸಾರ ಕಾರ್ಯದಲ್ಲಿ ನಿರತರಾದುದನ್ನು ಕಾಣುತ್ತೇವೆ.

ಕಂಕರಿಯ ಕಕ್ಕಯ್ಯ, ಸಕಳೇಶ ಮಾದರಸ, ಕಿನ್ನರಿ ಬ್ರಹ್ಮಯ್ಯ, ರಾಗದ ಸಂಕಣ್ಣ, ಸಿದ್ಧ ಬುದ್ಧಯ್ಯ, ಭದ್ರಗಾಯಕ, ಬಹುರೂಪಿ ಚೌಡಯ್ಯ, ಢಕ್ಕೆಯ ಮಾರಯ್ಯ, ಕಲಕೇತ ಬೊಮ್ಮಯ್ಯ, ಜಕ್ಕೆಯರ ಬ್ರಹ್ಮಯ್ಯ, ತತ್ವಪದದ ದೇವಮ್ಮ, ತಂದಾನತಾನದ ಶಿವಮಾಯಿದೇವಿ - ಹೀಗೆ ಜನಪದ ವೃಂದಗಳ ವಿವಿಧ ಭಾಗದ ಜನರು ಹಿಂಡುಗಟ್ಟಿ ಶಿವಶರಣರ ಸಾಮೂಹಿಕ ಆಂದೋಲನದಲ್ಲಿ ಭಾಗಿಗಳಾಗಿ, ತಮ್ಮ ಜನಪದ ಸಂವೇದನೆಗಳನ್ನು ಶರಣರ ಸೈದ್ಧಾಂತಿಕ ನಿಲುವುಗಳಲ್ಲಿ ಪರಿವರ್ತಿಸಿದ್ದನ್ನು ಕಾಣುತ್ತೇವೆ. ಬಸವಣ್ಣನವರ ಸಮಕಾಲೀನರಾದ ಶರಣ ಕಂಕರಿ ಕಕ್ಕಯ್ಯ, ವಚನಗಳನ್ನು ರಚಿಸಿದಂತೆ ಕಾಣುವುದಿಲ್ಲ. ಆದರೆ ಇವರು ತಮ್ಮ ಜೊತೆಗೂಡಿದ ಇತರ ಜನಪದ ಕಲಾವಿದರಿಗೆ ಸ್ಫೂರ್ತಿಯ ನೆಲೆಯಾದುದು ಮಾತ್ರ ಸತ್ಯ.

ಒಮ್ಮೆ ಒಬ್ಬ ಜಂಗಮ ಇವರನ್ನು ಪರೀಕ್ಷಿಸಲು, ಕಂಕರಿ ನುಡಿಸುವಾಗ ಒಂದು ನೃತ್ಯ ಮಾಡುತ್ತಾರೆ. ಇವರ ನೃತ್ಯವನ್ನು ಕಂಡು ಕಕ್ಕಯ್ಯ ಇನ್ನು ಜೋರಾಗಿ ಕಂಕರಿ ನುಡಿಸುತ್ತಾರೆ. ಮೂರು ದಿನವಾದರೂ ಯಾರೂ ಸೋಲಲಿಲ್ಲ, ಯಾರೂ ಗೆಲ್ಲಲಿಲ್ಲ. ಕೊನೆಗೆ ನೃತ್ಯ ಮಾಡಿದ ಜಂಗಮ ಕುಸಿದು ಬೀಳುತ್ತಾರೆ. ನಂತರ ಎಚ್ಚೆತ್ತು ಕಂಕರಿ ಕಕ್ಕಯ್ಯನನ್ನು ಹೊಗಳುತ್ತಾರೆ. ಮೂರು ದಿನಗಳಿಂದ ತನ್ನ ಕಾಯಕ ತಪ್ಪಿದ್ದಕ್ಕೆ ಕಕ್ಕಯ್ಯ ಕೋಪಗೊಳ್ಳುತ್ತಾರೆ. ಜಂಗಮನಿಗೆ ಕಾಯಕದ ಆಯ ಕೊಡಲು ಕೇಳುತ್ತಾರೆ. ಜಂಗಮನಿಗೂ ಕಂಕರಿ ಕಕ್ಕಯ್ಯನಿಗೂ ವಾದ ನಡೆಯುತ್ತದೆ. ಆ ವಾದ-ವಿವಾದದಲ್ಲಿ ಕಕ್ಕಯ್ಯನವರು ಗೆಲ್ಲುತ್ತಾರೆ. ಸೋತ ಜಂಗಮನು ಕೊನೆಗೆ ಕಾಯಕದ ಆಯವನ್ನು ತುಂಬಿ ಕೊಡುತ್ತಾರೆ. ಬಸವ ಧರ್ಮದಲ್ಲಿ ಕಾಯಕಕ್ಕೆ ಮೊದಲ ಪ್ರಾಧ್ಯಾನತೆ ನೀಡಿದ್ದಾರೆ. ಕಾರಣ ಹೊಟ್ಟೆಗಾಗಿ-ಬಟ್ಟೆಗಾಗಿ ಅನ್ಯರನ್ನು ಬೇಡಿದಾಗ ಅವರು ದ್ರವ್ಯ ಧನವನ್ನು ನೀಡಿದರೆ ಪಡೆದವರಿಗೆ ಅವರ ಕರ್ಮದ ಭೋಗದಲ್ಲಿ ಪಾಲನ್ನು ಪಡೆಯಬೇಕಾಗುತ್ತದೆ. ಆದುದರಿಂದ “ಕಾಯವನ್ನೇ ಕೈಲಾಸ” ಮಾಡಿಕೊಂಡು ಸತ್ಯಶುದ್ಧವಾದ ದುಡಿಮೆಯನ್ನು ಮಾಡಿದರೆ, “ಕಾಯಕವೇ ಕೈಲಾಸ” ವಾಗುತ್ತದೆ. ಇಲ್ಲದಿದ್ದರೆ ಹೊಟ್ಟೆಪಾಡಾಗುತ್ತದೆ. 12ನೇ ಶತಮಾನದ ಶರಣರು ಹೊಟ್ಟೆಪಾಡಿಗಾಗಿ ಚಿಂತಿಸಿದವರಲ್ಲ. ಹಸಿವು ತೃಷೆ ವ್ಯಸನಗಳನ್ನೆಲ್ಲಾ ಬದಿಗೊತ್ತಿ ಮೆಟ್ಟಿನಿಂತವರು. ಅದೇ ರೀತಿ ಕಂಕರಿಯ ಕಕ್ಕಯ್ಯ ಶರಣರ ಸಮೂಹದಲ್ಲಿ ವಿಶೇಷ ಮನ್ನಣೆ ಪಡೆದು ಬಸವ ಧರ್ಮ ಸಾಮೂಹಿಕ ಕ್ರಾಂತಿಯಲ್ಲಿ ಪಾಲುಗಾರರಾಗಿ ಅಮರರಾಗಿದ್ದಾರೆ.
ಮೂಲ: ಆನ್ಲೈನ್ ಹಾಗೂ ಇತರ ಮೂಲಗಳಿಂದ ಸಂಗ್ರಹಿ ರಚಿಸಲಾಗಿದೆ

No comments:

Post a Comment

ಪುತ್ತೂರ್ ಅಜ್ಜ

  ರಾಮಚಂದ್ರ ಭಟ್ರವರ ಹೆತ್ತವರು   ರಾಮೇಶ್ವರಕ್ಕೆ ತೀರ್ಥಯಾತ್ರೆಗೆ ತೆರಳಿ ಬಂದ   ತರುವಾಯ 1916 ರ ಜೂನ್ 15 ರಂದು ನೆಟ್ಟಾರಿನಲ್ಲಿ   ರಾಮಚಂದ್ರರ ಜನನವಾಯಿತು ...