ದುಗ್ಗಳೆ ಶಿವಶರಣೆ. ದೇವರದಾಸಿಮಯ್ಯನ ಪತ್ನಿ. ಶಿವಪುರದ ಮಲ್ಲಯ್ಯ, ಮಹದೇವಿ ಎಂಬ ಶರಣ ಶರಣೆಯರ ಪುತ್ರಿ. ಇವಳಿಂದಲೇ ನನ್ನ ಬದುಕು ಬಂಗಾರವಾದದ್ದು - ಎಂಬ ಪತಿಯ ಪ್ರಶಂಸೆಗೆ ಪಾತ್ರಳಾದ ಸಾಧ್ವಿ. ದಾಸಿಮಯ್ಯನು ಕಬ್ಬಿನ ಜಲ್ಲೆ ಮಳಲಕ್ಕಿಯಿಂದ ನೀರು ಮತ್ತು ಸೌದೆ ಉಪಯೋಗಿಸದೆ ಪಾಯಸ ಮಾಡಿಕೊಡುವಂಥ ಜಾಣ ಕನ್ಯೆಯನ್ನು ವಿವಾಹವಾಗುವ ಶರತ್ತಿನ ಮೇಲೆ ಕೈಯಲ್ಲಿ ಕಬ್ಬಿನ ಜಲ್ಲೆ ಹಾಗೂ ಮಳಲು ಮಿಶ್ರಿತ ಅಕ್ಕಿ ಗಂಟನ್ನು ಹಿಡಿದು ಕೊಂಡು ಕನ್ಯಾನ್ವೇಷಣೆಗೆ ಹೊರಡುತ್ತಾನೆ. ಹನ್ನೆರಡು ವರ್ಷ ಕಳೆದರೂ ಅಂಥ ಕನ್ಯೆ ಸಿಗುವುದಿಲ್ಲ. ಕಡೆಗೆ ಗೊಬ್ಬೂರಿಗೆ ಬಂದು ಮಲ್ಲನಾಥ ಶಿವಯೋಗಿ ದಂಪತಿಗಳಿಗೆ ತನ್ನ ಅಭಿಲಾಷೆಯನ್ನು ತಿಳಿಸುತ್ತಾನೆ. ಅವನ ಶರತ್ತು ಕೇಳಿ ಅಂಥ ಕನ್ಯೆ ನಿನಗೆ ಈ ಜನ್ಮದಲ್ಲಿ ಸಿಗಲಾರಳು ಎನ್ನುತ್ತಿರುವಾಗಲೇ ಅವರ ಮಾತನ್ನು ಆಲಿಸಿದ ಅವರ ಮಗಳು ದುಗ್ಗಳೆ ಅದೇಕೆ ಸಿಗಲಾರಳು? ಮಳಲಕ್ಕಿ ಪಾಯಸ ನಾನು ಮಾಡಿಕೊಡುವೆನೆಂದು ದಾಸಿಮಯ್ಯನ ಸವಾಲು ಸ್ವೀಕರಿಸುತ್ತಾಳೆ. ದುಗ್ಗಳೆಯು ಕಬ್ಬುಗಳನ್ನು ತರಿಸಿ ಬುಡದ ಭಾಗ ಹಾಗೂ ತುದಿ ಭಾಗಗಳನ್ನು ಬೇರೆ ಬೇರೆ ಮಾಡಿ ಸಿಹಿರಸ ಹಾಗೂ ಸಪ್ಪೆರಸಗಳನ್ನು ಬೇರೆ ಬೇರೆ ಪಾತ್ರೆಗಳಲ್ಲಿ ಸಂಗ್ರಹಿಸುತ್ತಾಳೆ. ಕಬ್ಬಿನ ಸಿಪ್ಪೆ ಒಣಗಿಸಿ ಬೆಂಕಿ ಹೊತ್ತಿಸಿ ಸಿಪ್ಪೆ ರಸದ ಪಾತ್ರೆಯಲ್ಲಿ ಮರಳು ಮಿಶ್ರಿತ ಅಕ್ಕಿ ಹಾಕಿ ಕುದಿಸಲು ಪಾಕ ಸಿದ್ಧವಾಗುತ್ತದೆ. ಅದನ್ನು ಜಾಲಾಡಿ ತಳದಲ್ಲಿ ಮರಳು ಉಳಿಯುವಂತೆ ಮಾಡಿ ಮೇಲಿನ ಪಾಕನ್ನು ಸಿಹಿ ರಸದ ಪಾತ್ರೆಯಲ್ಲಿ ಕೂಡಿಸಿ ತಯಾರಾದ ಪಾಯಸವನ್ನು ದಾಸಿಮಯ್ಯನಿಗೆ ಕೊಡುತ್ತಾಳೆ. ಹೀಗೆ ನೀರು ಮುಟ್ಟದೆ ಸೌದೆ ಉಪಯೋಗಿಸದೆ ಮಳಲಕ್ಕಿ ಪಾಯಸ ತಯಾರಿಸಿಕೊಟ್ಟ ಚಿಕ್ಕ ಹುಡುಗಿ ದುಗ್ಗಳೆಯ ಜಾಣತನಕ್ಕೆ ಎಲ್ಲರೂ ಬೆರಗಾಗುತ್ತಾರೆ. ಅವಳನ್ನು ಕೊಂಡಾಡುತ್ತಾರೆ. ದಾಸಿಮಯ್ಯನು ದುಗ್ಗಳೆಯನ್ನು ವಿವಾಹವಾಗುತ್ತಾನೆ. ಅವರಿಬ್ಬರ ನೇಯ್ಗೆ ಕಾಯಕ ಮಾಡಿಕೊಂಡು ಅನ್ಯೌನ್ಯತೆಯಿಂದ ಜೀವನ ಸಾಗಿಸುತ್ತಾರೆ.
ನೇಯ್ಗೆ ಕಾಯಕದಲ್ಲಿ ಪರಿಣಿತನಾದ ದಾಸಯ್ಯನು ಹನ್ನೆರಡು ವರ್ಷ ಕಷ್ಟಪಟ್ಟು ಒಂದು ಸುಂದರವಾದ ಬಹುಬೆಲೆಯುಳ್ಳ ಹೊದೆಯುವ ವಸ್ತುವನ್ನು ನೇಯ್ದಿರುತ್ತಾನೆ. ಅದನ್ನು ಮಾರಲು ಸಂತೆಗೆ ಒಯ್ಯುತ್ತಾನೆ. ಬಹು ಬೆಲೆಯುಳ್ಳ ಆ ವಸ್ತ್ತ್ರವನ್ನು ಕೊಳ್ಳಲು ಯಾರೂ ಬರಲಿಲ್ಲ. ದಾಸಿಮಯ್ಯ ಮನೆಗೆ ಮರಳಿ ಬರುವಾಗ ಒಬ್ಬ ಜಂಗಮನು ಆ ದಿವ್ಯಾಂಬರವನ್ನು ಬೇಡುತ್ತಾನೆ. ದಾಸಿಮಯ್ಯ ಒಂದೂ ವಿಚಾರಿಸದೆ ಅದನ್ನು ಜಂಗಮನಿಗೆ ಕೊಟ್ಟು ಬಿಡುತ್ತಾನೆ. ಜಂಗಮನು ಆ ದಿವ್ಯಾಂಬರವನ್ನು ದಾಸಿಮಯ್ಯನ ಎದುರಿಗೆ ಹರಿದು ಚೂರು ಮಾಡಿ ಗಾಳಿಯಲ್ಲಿ ತೂರುತ್ತಾನೆ. ದಾಸಿಮಯ್ಯ ಸ್ವಲ್ಪವೂ ವಿಚಲಿತನಾಗಲಿಲ್ಲ ಅವನು ಜಂಗಮನನ್ನು ಮನೆಗೆ ಕರೆದುಕೊಂಡು ಹೋಗಿ ಸತ್ಕರಿಸುತ್ತಾನೆ. ದಂಪತಿಗಳ ಜಂಗಮ ನಿಷ್ಠೆಗೆ ಸಂಪ್ರೀತನಾಗಿ ಜಂಗಮನಾಗಿ ಬಂದ ಶಿವನು ತನ್ನ ನಿಜರೂಪ ತೋರಿ ಅವರಿಗೆ ತವನಿಧಿ (ಅಕ್ಷಯ ಪಾತ್ರೆ) ದಯಪಾಲಿಸಿ ಬಯಲಾಗುತ್ತಾನೆ . ತವನಿಧಿ ಪಡೆದುಕೊಂಡ ಆ ದಂಪತಿಗಳು ದೀನ ದಲಿತರಿಗೆ ಶರಣನಿಗೆ ದಾಸೋಹ ಮಾಡುತ್ತ ಕಾಲ ಕಳೆಯುತ್ತಿದ್ದರು.
ದುಗ್ಗಳೆಯ ಬಗೆಗೆ ಪುರಾತನ ದೇವಿಯರ ತ್ರಿವಿಧಿ ಹೀಗೆ ಹೇಳುತ್ತದೆ:
ಮತಿಯಲ್ಲಿ ಗುಣದಲ್ಲಿ | ಪತಿಭಕ್ತಿಯಲ್ಲುಮಾ
ಪತಿಪೂಜೆಯಲ್ಲಿ ಅತಿಜಾಣೆಯೆನಿಸಿದ
ಸತಿದುಗ್ಗಳವ್ವೆ ಶರಣಾಗು ||
ಈಕೆಯ ಎರಡು ವಚನಗಳು ಲಭ್ಯವಿವೆ. ಈಕೆಯ ವಚನಗಳ ಅಂಕಿತ " ದಾಸಯ್ಯ ಪ್ರಿಯ ರಾಮನಾಥ".
ಬಸವಣ್ಣ ಭಕ್ತ, ಪ್ರಭುದೇವ ಜಂಗಮ
ಸಿದ್ದರಾಮಯ್ಯ ಯೋಗಿ, ಚೆನ್ನಬಸವಣ್ಣ ಭೋಗಿ
ಅಜಗಣ್ಣ ಐಕ್ಯನಾದವನು ಇಂತಹವರ
ಕರುಣ ಪ್ರಸಾದವ ಕೊಂಡು ಸತ್ತ ಹಾಗಿರಬೇಕಲ್ಲದೆ
ತತ್ವದ ಮಾತು ತನಗೇಕೆ ದಾಸಯ್ಯ ಪ್ರಿಯ ರಾಮನಾಥ
ಭಕ್ತನಾದಡೆ ಬಸವಣ್ಣನಂತಾಗಬೇಕು.
ಜಂಗಮವಾದಡೆ ಪ್ರಭುದೇವರಂತಾಗಬೇಕು.
ಯೋಗಿಯಾದಡೆ ಸಿದ್ಧರಾಮಯ್ಯನಂತಾಗಬೇಕು.
ಭೋಗಿಯಾದಡೆ ಚೆನ್ನಬಸವಣ್ಣನಂತಾಗಬೇಕು.
ಐಕ್ಯನಾದಡೆ ಅಜಗಣ್ಣನಂತಾಗಬೇಕು.
ಇಂತಿವರ ಕಾರುಣ್ಯಪ್ರಸಾದವ ಕೊಂಡು
ಸತ್ತಹಾಗಿರಬೇಕಲ್ಲದೆ ತತ್ವದ ಮಾತು
ಎನಗೇಕಯ್ಯಾ ದಾಸಯ್ಯಪ್ರಿಯ ರಾಮನಾಥಾ ?
ಮೂಲ: ಆನ್ಲೈನ್ ಹಾಗೂ ವಿವಿಧ ಮೂಲಗಳಿಂದ ಸಂಗ್ರಹಿಸಿ ರಚಿಸಿದ ಬರಹ
No comments:
Post a Comment