Followers

Wednesday, July 8, 2020

ದೇವರ ದಾಸಿಮಯ್ಯ

ದೇವರ ದಾಸಿಮಯ್ಯ 10ನೇ ಶತಮಾನದಲ್ಲಿದ್ದ ಮೊಟ್ಟಮೊದಲ ವಚನಕಾರ. ದೇವರ ದಾಸಿಮಯ್ಯರು (ದೇವಲ ಮಹರ್ಷಿ), ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮುದನೂರಿನಲ್ಲಿ ರಾಮಯ್ಯ -ಶಂಕರಿ ದಂಪತಿಯ ಪುತ್ರನಾಗಿ ಜನಿಸಿದರು. ಮುದನೂರು ಹಲವಾರು ದೇವಾಲಯಗಳಿಂದ ಕೂಡಿದ್ದು, ಅಲ್ಲಿನ ರಾಮನಾಥ ದೇವಸ್ಥಾನ ದಾಸಿಮಯ್ಯರ ಅಚ್ಚುಮೆಚ್ಚು. ರಾಮನಾಥ ಸ್ವಾಮಿಯ ಆರಾಧಕರು. ರಾಮನಾಥ ಎಂದರೆ ಶಿವ (ರಾಮನು ಪೂಜಿಸುತ್ತಿದ್ದಂತಹ ದೇವರು). ದಾಸಿಮಯ್ಯ ಶಿವನ ಭಕ್ತರಾಗಿದ್ದು 'ರಾಮನಾಥ' ಇವರ ಅಂಕಿತನಾಮವಾಗಿತ್ತು.

ದೇವರ ದಾಸಿಮಯ್ಯ ತಮ್ಮ ಯೌವನಾವಸ್ಥೆಯಲ್ಲಿ ಹೆತ್ತವರ ಇಚ್ಛೆಯಂತೆ, ಶಿವಪುರದ ದುಗ್ಗಳೆಯನ್ನು ವರಿಸತ್ತಾರೆ, ಆಕೆ ಮಹಾನ್ ಸಾಧ್ವಿಮಣಿ. ದಂಪತಿಗಳಿಬ್ಬರೂ ಸಜ್ಜನರು, ದೈವಭಕ್ತರು, ಧಾರಾಳತನವುಳ್ಳವರೂ ಆಗಿದ್ದು, ಯಾರೇ ಕಷ್ಟದಲ್ಲಿದ್ದರೂ ತಮ್ಮ ಶಕ್ತಿ ಮೀರಿ ಸಹಾಯ ಮಾಡುತ್ತಿದ್ದರು. ಸುವರ್ಚಲೆ ಇವರ ಸುಪುತ್ರಿ, ಮಹಾನ್ ಜ್ಞಾನಿ. ಹೀಗಿದ್ದರೂ ದಾಸಿಮಯ್ಯರಿಗೆ ಬದುಕಿನಲ್ಲಿ ಎನೋ ಶೂನ್ಯತೆ ಕಾಡುತ್ತಿತ್ತು. ಹೀಗೊಂದು ದಿನ ಆಲೋಚಿಸುತ್ತಿರುವಾಗ ದೇವರನ್ನು ಒಲಿಸಿಕೊಳ್ಳಲು ಸಂನ್ಯಾಸತ್ವವೇ ಸರಿಯಾದ ಮಾರ್ಗವೆಂದು ಅರಿತು, ಅದನ್ನು ಸಿದ್ಧಿಸಿಕೊಳ್ಳುವ ಸಲುವಾಗಿ ದಟ್ಟ ಕಾಡಿನೆಡೆಗೆ ಹೊರಟುಹೋಗುತ್ತಾರೆ.

ಬಾಲ್ಯದಿಂದಲೇ ಅಧ್ಯಾತ್ಮದ ಹಸಿವು ಹೊಂದಿದ್ದ ದಾಸಿಮಯ್ಯ, ಆತ್ಮಜ್ಞಾನ ಅರಸುತ್ತ ಶ್ರೀಶೈಲಕ್ಕೆ ಹೋಗುತ್ತಾನೆ. ಅಲ್ಲಿ ಪಂಡಿತಾರಾಧ್ಯ ಶಿವಾಚಾರ್ಯರಿಂದ ಶಿವದೀಕ್ಷೆ ಪಡೆಯುತ್ತಾನೆ. ಹಲವಾರು ವರ್ಷ ಸುಧೀರ್ಘ ತಪಸ್ಸನ್ನಾಚರಿಸಿ ಕಡೆಗೂ ಶಿವನ ಕೃಪೆಗೆ ಪಾತ್ರರಾಗುತ್ತಾರೆ. ತಪಸ್ಸಿಗೆ ಮೆಚ್ಚಿದ ಈಶ್ವರ ಪ್ರತ್ಯಕ್ಷನಾಗುತ್ತಾನೆ. ಸದಾಶಿವನು ದಾಸಿಮಯ್ಯರನ್ನು ಕುರಿತು ಹೀಗೆ ಸಂಬೋಧಿಸುತ್ತಾನೆ. "ದಾಸಿಮಯ್ಯ! ನಿನ್ನ ತಪಸ್ಸಿಗೆ ಮೆಚ್ಚಿದ್ದೇನೆ... ನಿನ್ನ ಕೋರಿಕೆಯನ್ನು ತಿಳಿಸು". ಮಹದಾನಂದದಿಂದ ದೇವರ ದಾಸಿಮಯ್ಯ ಹೀಗೆ ತಮ್ಮ ಕೋರಿಕೆ ಸಲ್ಲಿಸುತ್ತಾರೆ: "ಭಗವನ್! ನಿನ್ನ ದರ್ಶನದಿಂದ ನನ್ನ ಜನ್ಮ ಇಂದಿಗೆ ಸಾರ್ಥಕವಾಯಿತು, ಕೃಪೆತೋರಿ ನನಗೆ ಮೋಕ್ಷವನ್ನು ದಯಪಾಲಿಸು ಮಹದೇವ."

ಶಿವನು: 'ದಾಸಿಮಯ್ಯ .. ಋಷಿಯಾಗಿ ಮೋಕ್ಷವನ್ನು ಪಡೆಯುವುದಷ್ಟೇ ಅಲ್ಲಾ... ನೀನು ಮಾಡಬೇಕಾದ ಮಹತ್ಕಾರ್ಯ ಬಹಳಷ್ಟಿದೆ! ದೇವ-ದೇವತೆಯರು ಹಾಗೂ ಮಾನವರಿಗೆ, ತಮ್ಮ ಮಾನ-ಶರೀರ ಸಂರಕ್ಷಣೆಯನ್ನು ಕಾಪಾಡಲು ವಸ್ತ್ರವನ್ನು ತಯಾರಿಸುವ ಕಾರ್ಯ ನಿನ್ನಿಂದ ಆಗಬೇಕಿದೆ. ಪರಮಾತ್ಮನನ್ನು ಕಾಣಲು ಸಂನ್ಯಾಸಿಯಾಗಿ ತಪಸನ್ನಾಚರಿಸುವ ಅಗತ್ಯವಿಲ್ಲ... ಸಂಸಾರಿಯಾಗಿದ್ದೂ ಆಧ್ಯಾತ್ಮಿಕತೆಯನ್ನು ಆಚರಿಸುವವನು ಅದಕ್ಕಿಂತ ಶ್ರೇಷ್ಠನು. ಜನರು ತಮ್ಮ ಕಾಯಕದಲ್ಲಿ ದೇವರನ್ನು ಕಾಣಬೇಕು. ಶ್ರದ್ಧಾಭಕ್ತಿಯಿಂದ ತಮ್ಮ ದೈನಂದಿನ ಕಾರ್ಯಾಚರಣೆಯಲ್ಲಿ ತೊಡಗಬೇಕು. ಆದೇ ನಿಜವಾದ ಮನುಕುಲದ ಉದ್ದೇಶ. ಈ ಸಂದೇಶವನ್ನು ಮಾನವರಿಗೆ ಅರ್ಥವಾಗುವ ರೀತಿಯಲ್ಲಿ ಮನದಟ್ಟು ಮಾಡು. ಇದೇ ನಿನ್ನ ಜನ್ಮದುದ್ದೇಶ..'ಸಾಧನೆ ಮಾಡಿ ಶಿವಜ್ಞಾನ ಸಂಪನ್ನನಾಗುತ್ತಾನೆ. 

ಅನಂತರ ದಾಸಿಮಯ್ಯನು ಲೋಕ ಕಲ್ಯಾಣದ ಕೈಂಕರ್ಯ ತೊಟ್ಟು ಚಾಲುಕ್ಯ ರಾಜ್ಯದ ಪೊಟ್ಟಲ ಕೆರೆಯತ್ತ ಸಾಗುತ್ತಾನೆ. ದಾರಿಯಲ್ಲಿ ಶಿವಾನುಭವ ಗೋಷ್ಠಿಗಳನ್ನು ಮಾಡುತ್ತ ಸಾವಿರಾರು ಜನರಿಗೆ ಶಿವದೀಕ್ಷೆ ನೀಡುತ್ತಾನೆ.
ಹಿಂಸಾವೃತ್ತಿಯಲ್ಲಿ ತೊಡಗಿದ್ದ ಬೇಡ ಜನಾಂಗಕ್ಕೆ ಬುದ್ದಿ ಹೇಳಿ ಅವರ ಮನ ಪರಿವರ್ತಿಸಿ ದೀಕ್ಷೆ ನೀಡಿ ಸನ್ಮಾರ್ಗಕ್ಕೆ ಹಚ್ಚುತ್ತಾನೆ. ನಂದಿ ಗ್ರಾಮದಲ್ಲಿ ಎದುರಾದ ವೈದಿಕರೊಡನ ವಾದ ವಿವಾದ ಮಾಡಿ ಜಯಿಸುತ್ತಾನೆ. ಗೌಡಗೆರೆಗೆ ಬಂದು ಅಲ್ಲಿ ಅಸಂಖ್ಯಾತ ರೈತ ಜನಕ್ಕೆ ಜ್ಞಾನ ಬೋಧೆ ಮಾಡುತ್ತಾನೆಪೊಟ್ಟಲಕೆರೆಗೆ ಬಂದು ಅಲ್ಲಿಯ ಎಲ್ಲ ಜೈನ ಪಂಡಿತರನ್ನು ವಾದದಲ್ಲಿ ಸೋಲಿಸುತ್ತಾನೆ. ಅವರಿಗೆಲ್ಲ ಶಿವದೀಕ್ಷೆ ನೀಡುತ್ತಾನೆ.ಪೊಟ್ಟಲಕೆರೆಯ ರಾಜ 2ನೇ ಜಯಸಿಂಹ ಮತ್ತು ರಾಣಿ ಸುಗ್ಗಲೆಯೂ ಇವನಿಂದ ಶಿವದೀಕ್ಷೆ ಪಡೆಯುತ್ತಾರೆ. ನಂತರ ದಾಸಿಮಯ್ಯನು ತನ್ನ ಊರಾದ ಮುದನೂರಿಗೆ ಬಂದು ನೇಯ್ಗೆ ಕಾಯಕ ಮುಂದುವರೆಸಿಕೊಂಡು, ಜನರಿಗೆ ಶಿವಾನುಭವ ನೀಡುತ್ತಾ ಜೀವನ ಸಾಗಿಸುತ್ತಾನೆ. ದಂಪತಿಗಳಿಬ್ಬರೂ, ಸೀರೆ ನೇಯ್ಗೆ ಉದ್ಯೋಗದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡರು, ನೇಯ್ಗೆಯನ್ನು ದೇವರ ಕಾರ್ಯದಂತೆ ಆಚರಿಸುತ್ತಾ ಇತರರಿಗೆ ಮಾದರಿಯಾಗಿ ಇನ್ನೂ ಅನೇಕ ಮಂದಿಗೆ ಉದ್ಯೋಗ ಕಲಿಸಿ ಜೀವನೋಪಾಯಕ್ಕೆ ದಾರಿತೋರಿಸುತ್ತಾರೆ. ಹೀಗಾಗಿ ಇವರು 'ಜೇಡರ ದಾಸಿಮಯ್ಯ'ರೆಂದೂ ಪ್ರಸಿದ್ಧರಾದರು.

ದಾಸಿಮಯ್ಯ ದಾಂಪತ್ಯಕ್ಕೆ ಕೊಡುತ್ತಿದ್ದ ಮಹತ್ವವನ್ನು ನಿರೂಪಿಸುವ ಪ್ರಸಂಗವೊಂದು ಹೀಗಿದೆ: ಒಮ್ಮೆ ಸಂಸಾರ ಶ್ರೇಷ್ಠವೋ ಸನ್ಯಾಸ ಶ್ರೇಷ್ಠವೋ ಎಂಬ ಬಗ್ಗೆ ಇಬ್ಬರು ಸಾಧಕ ಚರಮೂರ್ತಿ ಯುವಕರಲ್ಲಿ ವಾದ ವಿವಾದ ನಡೆಯುತ್ತದೆ. ಇದರ ಪರಾಮರ್ಶೆಗೆ ಅವರಿಬ್ಬರು ಅನುಭಾವಿ ಶರಣ ದಾಸಿಮಯ್ಯನಲ್ಲಿಗೆ ಬರುತ್ತಾರೆ. ಅವರಿಗೆ ಆದಾರಾತಿಥ್ಯ ಮಾಡಿ ಕೂರಿಸಿದ ದಾಸಿಮಯ್ಯನು ಎಳೆ ಬಿಸಿಲಿನಲ್ಲಿ ಕುಳಿತು ಕಾಯಕ ನಿರತನಾಗಿ ದುಗ್ಗಳೆಗೆ ದೀಪ ಹಚ್ಚಿ ತರಲು ಹೇಳುತ್ತಾನೆ. ದುಗ್ಗಳೆ ದೀಪ ಹಚ್ಚಿ ತಂದು ಬಿಸಿಲಲ್ಲಿ ಕುಳಿತ ದಾಸಿಮಯ್ಯನ ಮುಂದಿಡುತ್ತಾಳೆ. ತಲೆಗೆ ಹೊದ್ದುಕೊಳ್ಳಲು ವಸ್ತ್ರ ತೆಗೆದುಕೊಡಲು ಹೇಳುತ್ತಾನೆ. ಅವನ ಹೆಗಲ ಮೇಲೆಯೇ ಇದ್ದ ವಸ್ತ್ತ್ರವನ್ನು ದುಗ್ಗಳೆ ತೆಗೆದು ಅವನ ತಲೆಯ ಮೇಲಿರಿಸುತ್ತಾಳೆ. ಕುಡಿಯಲು ತಂದಿಟ್ಟ ತಂಗಳು ಅಂಬಲಿ ಬಾಯಿ ಸುಟ್ಟಿತು ಆರಿಸಿಕೊಡು ಎಂದು ಹೇಳಲು, ದುಗ್ಗಳೆ ಅಂಬಲಿಗೆ ಗಾಳಿ ಹಾಕುತ್ತಾಳೆ. ಇದನ್ನೆಲ್ಲ ನೋಡುತ್ತ ಕುಳಿತಿದ್ದ ಆ ಸಾಧಕ ಯುವಕರು ಮುಸಿಮುಸಿ ನಗುತ್ತಿರುತ್ತಾರೆ. ಆಗ ದಾಸಿಮಯ್ಯನು, `ಸಾಧಕರೇ, ಇದಿರು ನುಡಿಯದೆ ಸಂಸಾರದ ಒಳ ಅರಿವನ್ನು ಅರಿತು ಸೇವೆ ಮಾಡಿಕೊಂಡಿರಬಲ್ಲ ನಮ್ಮ ದುಗ್ಗಳೆಯಂಥ ಸತಿ ಇದ್ದರೆ ಸಂಸಾರ ಲೇಸು. ಇಲ್ಲದಿದ್ದರೆ ಸನ್ಯಾಸ ಲೇಸು’ ಎಂದು ಹೇಳುತ್ತಾನೆ. `ಸತಿ ಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ" ಎಂಬುದು ದಾಸಿಮಯ್ಯನ ನುಡಿ.

ಪರಶಿವನ ಹಣೆಗಣ್ಣಿನಿಂದ ಮಹರ್ಷಿ ಅವತರಿಸಿದರೆಂಬ ಪ್ರತೀತಿಯೂ ಇದ್ದ ಕಾರಣ 'ದೇವಾಂಗ' (ದೇವರ ಒಂದು ಅಂಗ) ಎಂದು ಕರೆಯಲ್ಪಡುತ್ತಾರೆ. ಇಂದಿನ ದೇವಾಂಗ ಜನಾಂಗದ ಕುಲ ಗುರುವಾದರು ದೇವರ ದಾಸಿಮಯ್ಯ. ಚೌಡೇಶ್ವರಿ ತಾಯಿ ಈ ಸಮೂಹದ ಕುಲ ದೇವತೆ. ಇನ್ನು ದೇವಾಂಗ ದಾಸಿಮಯ್ಯರ ಕೃತಿ ಪರಿಚಯಕ್ಕೆ ಬಂದರೆ, ರಾಮನಾಥ ಎಂಬ ನಾಮಾಂಕಿತದಿಂದ 176 ವಚನಗಳನ್ನು ರಚಿಸಿದ್ದಾರೆ. ದೇವಲರು, ಶತಮಾನಗಳಿಂದ ಬಂದಂತಹ ದಕ್ಷಿಣ ಭಾರತದಲ್ಲಿ ಹೆಸರಾದ ಶರಣರಿಗಿಂತಲೂ (ಬಸವಣ್ಣ ಮತ್ತು ಅಕ್ಕಮಹಾದೇವಿಯವರಿಗೂ) ಮುಂಚಿತವಾಗಿದ್ದಂತಹ ಮೊಟ್ಟ ಮೊದಲ ವಚನಕಾರರು. ದಾಸಿಮಯ್ಯನವರ ವಚನಗಳು ಅರ್ಥೈಸಿಕೊಳ್ಳಲು ಬಹಳ ಸರಳವಾಗಿದ್ದು, ಸಮಾಜಕ್ಕೆ ವಿಶೇಷವಾದ ಧಾರ್ಮಿಕ ಪ್ರಜ್ಞೆಯ ಸ್ಪೂರ್ತಿಯ ಚಿಲುಮೆಯಾಗಿವೆ. ಸಂಸ್ಕೃತದ ದೇವ ಕವಿ, ಕನ್ನಡದ ರಾಘವಾಂಕ, ವಿರೂಪಾಕ್ಷ ದೇಶಿಕ, ಸಿದ್ಧ ಮಲ್ಲಾರಯ್ಯ ಮತ್ತು ಅಯ್ಯಪ್ಪ ಕವಿ ಮುಂತಾದವರು ದಾಸಿಮಯ್ಯನನ್ನು ಕುರಿತು ಬೃಹತ್ ದೇವಾಂಗ ಪುರಾಣಗಳನ್ನು ರಚಿಸಿದ್ದಾರೆ. ಶಿವನು ಇವನ ಮನಸ್ಸನ್ನು ಒರೆಹಚ್ಚಿ ನೋಡಿದ ಪ್ರಸಂಗ ಬಸವಣ್ಣನವರ ವಚನಗಳಲ್ಲಿ ಬಂದಿದೆ. ಬಸವಣ್ಣನವರ ವಚನಗಳಲ್ಲಿ ಸುಮಾರು 14 ಕಡೆ ಜೇಡರ ದಾಸಿಮಯ್ಯನ ಉಲ್ಲೇಖ ಬಂದಿದೆ. ಇವನು ಶಿವನಿಂದ ತವನಿಧಿಯನ್ನು ಪಡೆದಿದ್ದನೆಂದೂ, ಇವನ ಅಹಮ್ಮನ್ನು ಇಲ್ಲವಾಗಿಸಲು ಶಂಕರದಾಸಿಮಯ್ಯನು ತವನಿಧಿಯನ್ನು ಮಾಯ ಮಾಡಿದ ಘಟನೆ ಹರಿಹರನ ಶಂಕರದಾಸಿಮಯ್ಯನ ರಗಳೆಯಲ್ಲಿ ಬಂದಿದೆ. ಪ್ರಸ್ತುತ ಶ್ರೀ ಚಿನ್ಮೂಲಾದ್ರಿಯವರು, ದೇವಾಂಗರ ವಚನಗಳನ್ನು, ಅರ್ಥ- ಸಾರಾಂಶಗಳೊಂದಿಗೆ ಬಿತ್ತರಿಸುತ್ತಿದ್ದಾರೆ. ಇವುಗಳಲ್ಲಿ ಕೆಲವೊಂದು ವಚನಗಳು:

ಬಂದುದನರಿದು ಬಳಸುವಳು
ಬಂದುದ ಪರಿಣಾಮಿಸುವಳು
ಬಂಧು ಬಳಗದ ಮರೆಸುವಳು
ದುಗ್ಗಳೆಯ ತಂದು ಬದುಕಿದೆನು ಕಾಣಾ ರಾಮನಾಥ
--
ಹರ ತನ್ನ ಭಕ್ತರ ತಿರಿವಂತೆ ಮಾಡುವ
ಒರೆದು ನೋಡುವ ಸುವರ್ಣದ ಚಿನ್ನದಂತೆ
ಅರೆದು ನೋಡುವ ಚಂದನದಂತೆ
ಅರಿದು ನೋಡುವ ಕಬ್ಬಿನ ಕೋಲಿನಂತೆ
ಬೆದರದೆ ಬೆಚ್ಚದೆ ಇದ್ದಡೆ
ಕರವಿಡಿದೆತ್ತಿಕೊಂಬ ನಮ್ಮ ರಾಮನಾಥನು
--
ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ
ಸುಳಿದು ಬೀಸುವ ವಾಯು ನಿಮ್ಮ ದಾನ
ನಿಮ್ಮ ದಾನವನುಂಡು ಅನ್ಯರ ಹೊಗಳುವ
ಕುನ್ನಿಗಳನೇನೆಂಬೆ, ರಾಮನಾಥ
--
ನಾನೊಂದು ಸುರಗಿಯನೇನೆಂದು ಹಿಡಿವೆನು?
ಏನ ಕಿತ್ತೇನನಿರಿವೆನು?
ಜಗವೆಲ್ಲಾ ನೀನಾಗಿಪ್ಪೆ ಕಾಣಾ! ರಾಮನಾಥ
--
ಒಡಲುಗೊಂಡವ ಹಸಿವ; ಒಡಲುಗೊಂಡವ ಹುಸಿವ
ಒಡಲುಗೊಂಡವನೆಂದು
ನೀನೆನ್ನ ಜರಿದೊಮ್ಮೆ ನುಡಿಯದಿರ!
ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ!
ರಾಮನಾಥ
--
ಮೊಲೆ ಮೂಡಿ ಬಂದರೆ ಹೆಣ್ಣೆಂಬರು
ಗಡ್ಡ ಮೀಸೆ ಬಂದರೆ ಗಂಡೆಂಬರು
ನಡುವೆ ಸುಳಿಯುವಾತ್ಮನು
ಹೆಣ್ಣೂ ಅಲ್ಲ, ಗಂಡೂ ಅಲ್ಲ ರಾಮನಾಥ
--
ಕಡೆಗೀಲಿಲ್ಲದ ಬಂಡಿ ಹೊಡೆಗೆಡೆಯದೆ ಮಾಣ್ಬುದೆ
ಕಡೆಗೀಲು ಬಂಡಿಗಾಧಾರ
ಈ ಕಡುದರ್ಪವೇರಿದ ಒಡಲೆಂಬ ಬಂಡಿಗೆ
ಮೃಢಭಕ್ತರ ನುಡಿಗಡಣವೆ ಕಡೆಗೀಲು ಕಾಣಾ! ರಾಮನಾಥ.
--
ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ
ಸತಿಪತಿಗಳೊಂದಾಗದವನ ಭಕ್ತಿ
ಅಮೃತದೊಳು ವಿಷ ಬೆರೆದಂತೆ ಕಾಣಾ! ರಾಮನಾಥ.
--
ಅಚ್ಚ ಶಿವಭಕ್ತಂಗೆ ಹೊತ್ತಾರೆ ಅಮವಾಸೆ
ಮಟಮಧ್ಯಾಹ್ನ ಸಂಕ್ರಾಂತಿ;
ಮತ್ತೆ ಅಸ್ತಮಾ ನ ಪೌರ್ಣಮಿ ಹುಣ್ಣಿಮೆ;
ಭಕ್ತನ ಮನೆಯ ಅಂಗಳವೆ ವಾರಣಾಸಿ ಕಾಣಾ!
ರಾಮನಾಥ ||
--
[ವಿ.ಸೂ.: ದೇವರ ದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯ ಒಬ್ಬರೆಯಾ ಅಥವಾ ಬೇರೆ ಬೇರೆಯವರೇ ಎನ್ನುವಂತಹ ಚರ್ಚೆಗಳು ಪ್ರಚಲಿತದಲ್ಲಿದ್ದು, ನಿರ್ಧಿಷ್ಟವಾದ ಅಭಿಮತವಿಲ್ಲ]
ಮೂಲ: ಆನ್ಲೈನ್ ಹಾಗೂ ಇತರ ಮೂಲಗಳಿಂದ ಸಂಗ್ರಹಿ ರಚಿಸಲಾಗಿದೆ

No comments:

Post a Comment

ಪುತ್ತೂರ್ ಅಜ್ಜ

  ರಾಮಚಂದ್ರ ಭಟ್ರವರ ಹೆತ್ತವರು   ರಾಮೇಶ್ವರಕ್ಕೆ ತೀರ್ಥಯಾತ್ರೆಗೆ ತೆರಳಿ ಬಂದ   ತರುವಾಯ 1916 ರ ಜೂನ್ 15 ರಂದು ನೆಟ್ಟಾರಿನಲ್ಲಿ   ರಾಮಚಂದ್ರರ ಜನನವಾಯಿತು ...