ಬೊಂತಾದೇವಿ ಕಾಶ್ಮೀರದ ಪಾಂಡವ್ಯಪುರದ ಅರಸು ಕುಮಾರಿಯಾಗಿದ್ದು, ಶ್ರೇಷ್ಠ ಶರಣ, ಕಾಯಕ ಕಲಿ ಎಂದೇ ಹೆಸರುವಾಸಿಯಾದ ಮೊಳಿಗೆ ಮಾರಯ್ಯನ ಸಹೋದರಿ. ಮೂಲನಾಮವಾದ ನಿಜದೇವಿಯಿಂದ ಬೊಂತಾದೇವಿಯಾಗಿ ನಾಮಾಂಕಿತಗೊಂಡು ಗುಪ್ತಭಕ್ತಿಗೆ ಹೆಸರು ವಾಸಿಯಾದಳು.
“ಬಿಡಾಡಿ” ಎಂಬ ಅಚ್ಚಗನ್ನಡ ಅಂಕಿತದಿಂದ ಅನೇಕ ವಚನಗಳನ್ನು ಬರೆದ ಬೊಂತಾದೇವಿಯ ಮೊದಲಿನ ಹೆಸರು 'ನಿಜದೇವಿ'. ಚಿಕ್ಕಂದಿನಲ್ಲಿಯೇ ಶಿವಭಕ್ತಿಯಲ್ಲಿ ನಿಷ್ಠೆ ನೆಲೆಗೊಂಡು ವೈರಾಗ್ಯ ತಾಳಿ, ಕಲ್ಯಾಣಕ್ಕೆ ಬಂದು ನೆಲೆಸುತ್ತಾಳೆ. ಈಕೆಯ ವೀರವೈರಾಗ್ಯ, ಗುಪ್ತಭಕ್ತಿಯನ್ನು ಕಾವ್ಯ, ಪುರಾಣಗಳು ಬಣ್ಣಿಸುತ್ತವೆ. ಕಾಲ-೧೧೬೦. ಶಿವ ಈ ನಿಷ್ಠಾವಂತ ಶಿವಶರಣೆಯನ್ನು ಪರೀಕ್ಷಿಸಲು ಬಂದು ಅವಳಿಗೆ ಒಂದು ಬೊಂತೆ(ಕೌದಿ) ಕೊಟ್ಟು ಇದನ್ನು ಹೊದೆದು ಹೋಗು ಎನ್ನುತ್ತಾನೆ. ಶಿವನು ಕೊಟ್ಟ ಬೊಂತೆಯನ್ನು ಹೊದ್ದವಳನ್ನು ಅಂದಿನ ಜನ 'ಬೊಂತಾದೇವಿ' ಎಂದು ಕರೆದರು.
ಪರಮಾತ್ಮನು ಯಾವ ನಿರ್ಬಂಧಕ್ಕೊಳಗಾಗದ “ಸರ್ವತಂತ್ರ ಸ್ವತಂತ್ರ’’ ಎಂಬರ್ಥದಲ್ಲಿ ಆತನನ್ನು ಬಿಡಾಡಿ ಎಂದು ಕರೆದಿದ್ದಾರೆ ಬೊಂತಾದೇವಿ. ಅವರ ಒಂದು ವಚನ:
ಅಂತಾಯಿತ್ತಿಂತಾಯಿತ್ತೆಂತಾಯಿತ್ತೆನಬೇಡ,ಅನಂತನಿಂತಾತನೆಂದರಿಯಾ ಬಿಡಾಡಿ.
ಕರೆದಡೆ ಓ ಎಂಬುದು ನಾದವೊ ಬಿಂದುವೊ ಪ್ರಾಣವೊ
ಇದಾವುದು ? ಬಲ್ಲಡೆ ನೀ ಹೇಳಾ, ಬಿಡಾಡಿ.
ನಾಲ್ಕು ವೇದ, ಹದಿನಾರು ಶಾಸ್ತ್ರ, ಹದಿನೆಂಟು ಪುರಾಣ, ಇಪ್ಪತ್ತೆಂಟಾಗಮ
ಇದಪ್ರತಿ ಬಿಡಾಡಿ.
ಶಬ್ದವೆ ಬ್ರಹ್ಮ, ಶಬ್ದವೆ ಸಿದ್ಧ, ಶಬ್ದವೆ ಶುದ್ಧ ಕಾಣಿರೆ, ಬಿಡಾಡಿ
ಬೊಂತಾದೇವಿ ಅಕ್ಕಮಹಾದೇವಿಯಂತೆ ವಿವಾಹ ಬಂಧನಕ್ಕೆ ಸಿಲುಕದೆ ಶರಣ ದೀಕ್ಷೆ ಸ್ವೀಕರಿಸಿದರು. ಕಾಶ್ಮೀರದಲ್ಲಿದ್ದಾಗ ವಿಪರೀತ ಚಳಿಯಿಂದ ನಡುಗುತ್ತಿದ್ದ ವೃದ್ಧೆಗೆ ತಾನುಟ್ಟ ಬಟ್ಟೆಯನ್ನೇ ಬಿಚ್ಚಿಕೊಟ್ಟ ಬೊಂತಾದೇವಿ ಬಡಜನರ ಸೇವೆಯಲ್ಲಿ ತತ್ವರರಾಗಿದ್ದವರು. ಧನಕನಕದ ಮೋಹದಿಂದ ಹೊರಬಂದವರು. ಕಲ್ಯಾಣದಲ್ಲಿ ಕೌದಿ ಹೊಲಿದು ಮಾರುವ ಕಾಯಕ ಕೈಕೊಂಡ ಆಕೆ ರೋಗಗ್ರಸ್ತ ಬಡವರಿಗೆ ತಾನೇ ಔಷಧೋಪಚಾರ ಸೇವೆ ಮಾಡುತ್ತಿದ್ದರು.
ಕಲ್ಯಾಣದಲ್ಲಿ ಉಳಿದು ಸಾಧನೆ ಮಾಡುತ್ತಿದ್ದ ಬೊಂತಾದೇವಿಯನ್ನು ಅಸಂಖ್ಯಾತ ಶರಣರ ತಾಣವಾದ ಕಲ್ಯಾಣದಲ್ಲಿ ಯಾರು ಗಮನಿಸಿರುವುದಿಲ್ಲ, ದಿವ್ಯಜ್ಞಾನಿಯಾದ ಅಲ್ಲಮಪ್ರಭು ಮಾತ್ರ ಆಕೆಯ ಗುಪ್ತಭಕ್ತಿಯ ನೆಲೆಯನ್ನು ಗಮನಿಸುತ್ತಾನೆ. ಅಕ್ಕಮಹಾದೇವಿ ಶ್ರೀ ಶೈಲದ ಕದಳಿಗೆ ಹೊರಟು ನಿಂತಾಗ, ಆಕೆಯನ್ನು ಬೀಳ್ಕೊಡಲು ಸೇರಿದ ಶರಣವೃಂದಕ್ಕೆ ಅಲ್ಲಮಪ್ರಭು ಬೊಂತಾದೇವಿಯ ಮಹಿಮೆಯನ್ನು ತಿಳಿಹೇಳುತ್ತಾನೆ. ಕಲ್ಯಾಣಕ್ರಾಂತಿಯ ನಂತರ ಶರಣರೆಲ್ಲ ದಿಕ್ಕಾಪಾಲಾಗಿ ಅನೇಕ ಕಡೆಗೆ ಚದುರಿಹೋದರು. ಬೊಂತಾದೇವಿ ಮಾತ್ರ ಅಲ್ಲಿಯೇ ಇದ್ದು ತನ್ನ ಸೇವಾಕಾರ್ಯ ಮುಂದುವರಿಸಿ ಅಲ್ಲಿಯೇ ಲಿಂಗೈಕ್ಯರಾಗುತ್ತರೆ.
ಅರಿವೆ ಬಿಡಾಡಿ, ಅರಿಯದೆ ಬಿಡಾಡಿ,
ಮರವೆ ಬಿಡಾಡಿ, ಮರೆಯದೆ ಬಿಡಾಡಿ,
ಅರಿವರತು ಕುರುಹಿಲ್ಲದಾತ ನೀನೆ ಬಿಡಾಡಿ.
ಊರ ಒಳಗಣ ಬಯಲು,
ಊರ ಹೊರಗಣ ಬಯಲೆಂದುಂಟೆ ?
ಊರೊಳಗೆ ಬ್ರಾಹ್ಮಣ ಬಯಲು,
ಊರ ಹೊರಗೆ ಹೊಲೆ ಬಯಲೆಂದುಂಟೆ ?
ಎಲ್ಲಿ ನೋಡಿದಡೆ ಬಯಲೊಂದೆ
ಬಿತ್ತಿಯಿಂದ ಒಳಹೊರಗೆಂಬನಾಮವೈಸೆ.
ಎಲ್ಲಿ ನೋಡಿದಡೆ ಕರೆದಡೆ ಓ ಎಂಬಾತನೆ ಬಿಡಾಡಿ.
ಇಲ್ಲಿ ಆಕೆ ಮೂಲಭೂತವಾಗಿ ಬ್ರಾಹ್ಮಣ-ಹೊಲೆಯರಗಳ ನಡುವಿನ ಅಸಮಾನತೆ ಬಗ್ಗೆ ಮಾತನಾಡುತ್ತಿದ್ದಾಳೆ. ‘ಒಳಗಣ ಬಯಲು’ ಮತ್ತು ‘ಹೊರಗಣ ಬಯಲು’ಗಳನ್ನು ಆಕೆ ಇಲ್ಲಿ ಮುಖಾಮುಖಿಯಾಗಿಸಿದ್ದಾಳೆ. ಆಕೆಯ ಪ್ರಕಾರ ‘ಬಯಲು’ ಎಂಬುದು ಒಂದೆ. ಅದು ಎರಡಾಗಿರಲು ಸಾಧ್ಯವಿಲ್ಲ. ಸಾಮಾಜಿಕವಾಗಿ ‘ಒಳಗೆ-ಹೊರಗೆ’ ಎಂಬ ವರ್ಗೀಕರಣವಿರಬಹುದು. ಆದರೆ ಮೂಲದಲ್ಲಿ ಬಯಲೆಂಬುದು ಒಂದೆ. ಮಾನವ ಸಾಮಾಜಿಕವಾಗಿ ಮೇಲುಕಿಳೆಂಬ ಜಾತಿಯ ಕೃತ್ರಿಮತೆಯನ್ನುಂಟು ಮಾಡಿಕೊಂಡಿದ್ದಾನೆ. ಅನಂತವಾದ ಬಯಲಂತೆ ಸರ್ವವ್ಯಾಪಿ ಭಗವಂತನೊಬ್ಬನೇ, ಹಾಗೆಯೇ ಇರುವುದು ಒಂದೇ ಕುಲ; ಅದು ಮಾನವಕುಲ ಎಂಬ ಸತ್ಯವನ್ನು ವಚನಗಳ ಮೂಲಕ ವ್ಯಕ್ತಪಡಿಸಿದ್ದಾಳೆ.
ಘಟದೊಳಗಣ ಬಯಲು, ಮಠದೊಳಗಣ ಬಯಲು,
ಬಯಲು ಬಯಲು ಬಯಲು ?
ತಾನೆಲ್ಲಾ ಬಯಲು, ಬಿಡಾಡಿ ಬಯಲು.
ಶಬ್ಧಗಳಲ್ಲಿ ಅಪಾರವಾದ ಅಧ್ಯಾತ್ಮಿಕ ಅರ್ಥವನ್ನು ತುಂಬಿ ತನ್ನ ವಚನರಚನಾ ಸಾಮರ್ಥ್ಯವನ್ನು ಬೊಂತಾದೇವಿ ತೋರಿದ್ದಾಳೆ. ಇಲ್ಲಿ ಬಯಲು ಅಂದರೆ ಶೂನ್ಯ. ಈ ಶೂನ್ಯದಿಂದಲೆ ವಿಶ್ವ. ಈ ಶೂನ್ಯ ಸಂಪಾದನೆಯೇ ಭಕ್ತನ ಪರಮ ಗುರಿ. ಘಟ ಮತ್ತು ಮಠ (ಇಂದ್ರಿಯ ಮತ್ತು ಮನಸ್ಸು) ಬದುಕಿನ ವೈವಿದ್ಯತೆಯನ್ನು (ಮಾಯೆ) ನಿದರ್ಷಿಸುತ್ತದೆ. ಘಟ ಮತ್ತು ಮಠಗಳೆಂಬ ಬಯಲುಗಳನ್ನು ಶಿವನಲ್ಲಿ ಒಂದಾಗಿಸಿ ಬಯಲಾಗುವುದೇ (ಶೂನ್ಯ ಸಂಪಾದನೆ) ಜೀವನದ ಉದ್ದೇಶ ಎಂದಿದ್ದಾಳೆ.
ಈಗ ದೊರೆತ ಆರು ವಚನಗಳಲ್ಲಿ ಶಿವನ ಸ್ವರೂಪ ಅನಂತತೆ ಮತ್ತು ಸರ್ವಾಂತರ್ಯಾಮಿತ್ವವನ್ನು ವರ್ಣಿಸಲಾಗಿದೆ. ಜೊತೆಗೆ ಅಧ್ಯಾತ್ಮಿಕ ಸಾಧನೆ, ಸಮತಾಭಾವ ಮತ್ತು ಸಾಮಾಜಿಕ ಕಳಕಳಿ ಅವುಗಳಲ್ಲಿ ವ್ಯಕ್ತವಾಗಿದೆ. ಅಂತ್ಯಕಾಲದಲ್ಲಿ ಶಿವ ತನಗೆ ಕೊಟ್ಟ ಬೊಂತೆಯನ್ನು ಆಕಾಶಕ್ಕೆ ಎಸೆದಾಗ, ಅದು ಆಗಸದಲ್ಲಿ ಲೀನವಾಗುತ್ತದೆ. ಅದರೊಡನೆ ಬೊಂತಾದೇವಿ ಲಿಂಗೈಕ್ಯಳಾಗುತ್ತಾಳೆ.
ಅಂತಾಯಿತು ಇಂತಾಯಿತ್ತೇನಬೇಡ
ಅನಂತ ನಿಂತಾತ್ಮನೆಂದರಿಯಯಾ ! ಬಿಡಾಡಿ
ಕರೆದಾಕೆ ಓ ಎಂಬುದು
ನಾದವೂ, ಬಿಂದುವೂ, ಪ್ರಾಣವೂ ?
ಇದಾವುದ ಬಲ್ಲಡೆ ನೀ ಹೇಳ ! ಬಿಡಾಡಿ
ನಾಲ್ಕು ವೇದ, ಹದಿನೆಂಟು ಪುರಾಣ
ಇಪ್ಪತ್ತೆಂಟು ಆಗಮ ಇದ ಪ್ರತಿ ಬಿಡಾಡಿ
ಶಬ್ದವೇ ಬ್ರಹ್ಮ, ಶಬ್ದವೇ ಸಿದ್ಧ , ಶಬ್ದವೇ ಶುದ್ಧ
ಕಾಣಿರೋ ಬಿಡಾಡಿ ಲಿಂಗೇಶ್ವರನಲ್ಲಿ
ಮೂಲ: ಆನ್ಲೈನ್ ಹಾಗೂ ಇತರ ಮೂಲಗಳಿಂದ ಸಂಗ್ರಹಿ ರಚಿಸಲಾಗಿದೆ
No comments:
Post a Comment