ಒಂದು ಕಾಡಿನಲ್ಲಿ ಮಾತಂಗ ಎನ್ನುವ ದರೋಡೆಕೋರ, ಈತನು ತುಂಬಾ ಒರಟನಾಗಿದ್ದ. ಮನೆಯಲ್ಲಿ ಈತನ ಹೆಂಡತಿಯು ಹಾಗೋ ಹೀಗೋ ಜೀವನ ಸಾಗಿಸುತ್ತಿರುತ್ತಾಳೆ. ಈತ ದರೋಡೆ ಮಾಡುವುದನ್ನೇ ತನ್ನ ದಿನನಿತ್ಯದ ವೃತ್ತಿಯನ್ನಾಗಿ ಮಾಡಿಕೊಂಡಿರುತ್ತಾನೆ. ಹೀಗಿರುವಾಗ ಒಂದು ದಿನ ಓರಿಸ್ಸಾ ದೇಶದವರಾದ ಸುಜ್ಞಾನಿದೇವ ಎಂಬವರು ಕಾಡಿನ ಮುಖಾಂತರ ತಮ್ಮ ಶಿಷ್ಯರೊಂದಿಗೆ ಕಲ್ಯಾಣದೆಡೆಗೆ ಹೊರಟಿರುವಾಗ ಕಾಡಿನ ಮಧ್ಯದಲ್ಲಿ ದರೋಡೆಕೋರ ಮಾತಂಗನನ್ನು ಕಂಡು ಧೈರ್ಯದಿಂದ ನಿಂತಾಗ; ಮಾತಂಗ ಸುಜ್ಞಾನಿದೇವ'ರನ್ನು ಕುರಿತು ಯಾರು ನೀನು? ಎಲ್ಲಿಗೆ ಹೊರಟಿರುವೆ? ಎಂದು ಕೇಳಲು, ಅವರು ಕಲ್ಯಾಣಕ್ಕೆ ಎನ್ನುತ್ತಾರೆ. ಮತ್ತೆ ಆ ಜೋಳಿಗೆಯಲ್ಲಿರುವುದೇನು? ಎನ್ನಲು, ಇಷ್ಟಲಿಂಗಗಳೆನ್ನುವರು. ಹಾಗಾದರೆ ನನಗೆ ಕೊಡು ಆ ಲಿಂಗವನ್ನು ಎಂದಾಗ; ಮೊದಲು ನಿನ್ನ ಹೆಂಡತಿ ಮಕ್ಕಳನ್ನು ಕರೆದುಕೊಂಡು ಬಾ ಅನಂತರ ಲಿಂಗ ಕೊಡುವೆ ಎನ್ನುವರು. ಮಾತಂಗ ಮನೆಗೆ ಹೋಗಿ ಹೆಂಡತಿಯನ್ನು ಹುಡುಕಾಡಲು ಆಕೆ ಸಿಗದಿದ್ದನ್ನು ಕಂಡು, ಕೊನೆಗೆ ಮುತ್ತಗನೆಂಬ ಇನ್ನೊಬ್ಬ ಬೇಡನ ಜೊತೆಗೆ ತನ್ನ ಹೆಂಡತಿ ಓಡಿ ಹೋಗಿದ್ದಾಳೆಂದು ಕನ್ನಗ ಎನ್ನುವ ಗೆಳೆಯನಿಂದ ತಿಳಿಯುತ್ತಾನೆ. ಈ ವಿಷಯ ತಿಳಿದು ಸುಜ್ಞಾನಿದೇವರ ಹತ್ತಿರಕ್ಕೆ ಬಂದು ಅವರಿಬ್ಬನ್ನೂ ಕತ್ತರಿಸಿ ಹಾಕುವೆನೆಂದು ಕೋಪಗೊಳ್ಳುತ್ತಾನೆ. ಆಗ ಸುಜ್ಞಾನಿದೇವ; ಹೋದವರು ಹೋದರು ಅವರ ಸುಖ ಅವರಿಗೆ ಇನ್ನು ನಿನ್ನ ಸುಖದ ಬಗ್ಗೆ ಯೋಚಿಸೆಂದು ಆತನ ಮನಃಪರಿವರ್ತನೆ ಆಗುವಂಥಹ ಹಲವಾರು ಕಥೆಗಳ ಉದಾಹರಣೆಗಳನ್ನು ಕೊಟ್ಟು ಬುದ್ಧಿ ಹೇಳಲು ಮುಂದಾಗುತ್ತಾರೆ. ಶರಣರ ನುಡಿ ಕೇಳಿ ಮಾತಂಗನ ಕೋಪ ಶಾಂತವಾಗುತ್ತದೆ.
ಸುಜ್ಞಾನಿದೇವ ಮಾತಂಗನಿಗೆ ಬಸವಣ್ಣನವರ ಎಲ್ಲ ಸುವಿಚಾರಗಳನ್ನು ತಿಳಿಸಿ, ಅನುಭವ ಮಂಟಪದ ಹಿರಿಮೆಯನ್ನು ಹೇಳಿ, ಇಷ್ಟಲಿಂಗದ ಮಹತ್ವವನ್ನು ವಿಸ್ತಾರವಾಗಿ ತಿಳಿಹೇಳಿ ಆತನಿಗೆ ಲಿಂಗಧಾರಣೆ ಮಾಡುತ್ತಾರೆ. ಮಾತಂಗನ ಅಂಗಕ್ಕೆ ಇಷ್ಟಲಿಂಗವು ತಾಕಿದೊಡನೆ ಮೈಯೆಲ್ಲಾ ರೋಮಾಂಚನವಾಗಿ ಮುನ್ನಿನ ಕೆಟ್ಟ ಗುಣಗಳೆಲ್ಲವೂ ಅಳಿದು ಹೋಗುತ್ತವೆ.
ನರಜನ್ಮವ ತೊಡೆದು ಹರಜನ್ಮವ ಮಾಡಿದ ಗುರುವೆ ನಮೋ.
ಭವಬಂಧನವ ಬಿಡಿಸಿ ಪರಮಸುಖವ ತೋರಿದ ಗುರುವೆ ನಮೋ.
ಭವಿಯೆಂಬುದ ತೊಡೆದು ಭಕ್ತೆ ಎಂದೆನಿಸಿದ ಗುರುವೆ ನಮೋ.
ಚೆನ್ನಮಲ್ಲಿಕಾರ್ಜುನನ ತಂದೆನ್ನ ಕೈವಶಕ್ಕೆ ಕೊಟ್ಟ ಗುರುವೆ, ನಮೋ ನಮೋ
ಎನ್ನುವ ಮಹಾದೇವಿ ಅಕ್ಕನ ವಚನದಂತೆ ಮಾತಂಗನು ನರನಂತಿದ್ದರೂ ಇಷ್ಟಲಿಂಗವ ಸೋಂಕಲೊಡನೆ ಹರಸ್ವರೂಪರಾಗುತ್ತಾರೆ. ದರೋಡೆಯನ್ನು ಮಾಡುತ್ತಿದ್ದ ಕೆಟ್ಟ ಕೆಲಸವನ್ನು ತೊರೆದು, ಸಾಮಾನ್ಯ ಭವಿಯಂತಿದ್ದವರು ಭಕ್ತರಾಗುತ್ತಾರೆ. ಇಷ್ಟಲಿಂಗವ ಧರಿಸಿದ ಮೇಲೆ ನಿಜವಾದ ಜನನವೆಂಬಂತೆ ಸುಜ್ಞಾನಿದೇವ ಮಾತಂಗನನ್ನು ಮಾತಂಗನೆಂದು ಕರೆಯದೆ ನನ್ನ ಅಯ್ಯ ಎಂದು ಕರೆಯುತ್ತಾರೆ. ಹೀಗೆ ಮಾತಂಗನ ಹೆಸರು ನನ್ನಯ್ಯ ಎಂದು ಬದಲಾಗುತ್ತದೆ. ವಿಭೂತಿಯಂತಾದ ಶರಣ ನನ್ನಯ್ಯನವರು ಸುಜ್ಞಾನಿದೇವರೊಡಗೂಡಿ ಕಲ್ಯಾಣದೆಡೆಗೆ ಪ್ರಯಾಣ ಬೆಳಸುತ್ತಾರೆ. ಇವರು ಜೊತೆಗೆ ಜ್ಞಾನಾನಂದ ಎಂಬವರೂ ಬರುತ್ತಾರೆ. ಮೂವರೂ ಅನುಭವ ಮಂಟಪವನ್ನು ಪ್ರವೇಶಿಸುತ್ತಾರೆ. ಬಸವಣ್ಣನವರು ಈ ಮೂವರು ಶರಣರನ್ನು ಸಂತೋಷದಿಂದ ಅತೀ ಆದರದಿಂದ ಬರಮಾಡಿಕೊಂಡು ಜಂಗಮಸತ್ಕಾರವನ್ನು ಮಾಡುತ್ತಾರೆ.
ಮೂಲ: ಆನ್ಲೈನ್ ಹಾಗೂ ಇತರ ಮೂಲಗಳಿಂದ ಸಂಗ್ರಹಿ ರಚಿಸಲಾಗಿದೆ
No comments:
Post a Comment